Advertisement
ಒಂದು ರೂ. ನೋಟು! ಪುಟ್ಟದಾಗಿ, ಒಂದು ತೋರುಬೆರಳಿನ ಉದ್ದದ ಈ ನೋಟನ್ನು ನೋಡಿದಾಕ್ಷಣ ನಮ್ಮ ಕಣ್ಮುಂದೆ ಬಾಲ್ಯದ ದೃಶ್ಯಗಳು ಬಿಚ್ಚಿಕೊಳ್ಳುತ್ತವೆ. ಆ ನೋಟು ಹಿಡಿದೇ ಪೆಪ್ಪರ್‌ಮಿಂಟ್ ತರಲು ಅಂಗಡಿಗೆ ಹೋಗಿದ್ದು, ನೆಂಟರ ಮನೆಗೆ ಹೋದಾಗ ಅವರು ಪ್ರೀತಿಯಿಂದ ಮಕ್ಕಳ ಕೈಗಿಟ್ಟಿದ್ದು ಅದೇ ಒಂದು ರೂಪಾಯಿಯ ನೋಟೇ!
Related Articles
Advertisement
ಆಗ ನಾಣ್ಯಗಳನ್ನು ಬೆಳ್ಳಿಯಲ್ಲಿ ಟಂಕಿಸಲಾಗುತ್ತಿತ್ತು. ನಾಣ್ಯಗಳಿಗೆ ಬೇಡಿಕೆ ಹೆಚ್ಚಾದಂತೆ, ಬೆಳ್ಳಿಯ ಕೊರತೆ ಉಂಟಾಯಿತು. ಆಗ ಸರ್ಕಾರ ಕಡಿಮೆ ಮುಖಬೆಲೆಯ ನೋಟುಗಳನ್ನು ಪ್ರಿಂಟ್ ಮಾಡುವ ನಿರ್ಧಾರ ತಾಳಿತು. ಹೀಗೆ 1917ರ ನವೆಂಬರ್ 30ರಂದು ಮೊದಲ ಬಾರಿಗೆ 1 ರೂಪಾಯಿ ನೋಟುಗಳು ಚಾಲ್ತಿಗೆ ಬಂದವು.
ಮ್ಯೂಸಿಯಂ ಸೇರಿತು!: ಹೊಸದನ್ನು ನಮ್ಮ ಜನ ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ. 1 ರೂ. ಹೊಸ ನೋಟುಗಳು ಬಿಡುಗಡೆಯಾದಾಗ ಜನ ಅದನ್ನು ಸ್ವೀಕರಿಸಲು ಹಿಂದೆ ಮುಂದೆ ನೋಡಿದರು. 1 ರೂ. ನೋಟು ಜನರ ವಿಶ್ವಾಸ ಗಳಿಸಲು ಒಂದೆರಡು ವರ್ಷಗಳೇ ಬೇಕಾದವು. ಕಾಲಕ್ರಮೇಣ ನೋಟಿನ ರೂಪ, ವಿನ್ಯಾಸದಲ್ಲಿ ಹಲವಾರು ಬದಲಾವಣೆಗಳಾದವು. 1994ರ ನಂತರ ಈ ನೋಟುಗಳ ಚಲಾವಣೆಯೂ ನಿಂತುಹೋಯ್ತು. ಆಮೇಲೆ 1 ರೂ. ನೋಟುಗಳು ಮ್ಯೂಸಿಯಂ, ನಾಣ್ಯ ಸಂಗ್ರಹಕಾರರ ಕೈ ಸೇರಿದವು.
ಯಾಕಾಗಿ ಪ್ರದರ್ಶನ?: ಪ್ರಸ್ಟೀಜ್ ಗ್ರೂಪ್‌ನ ಎಂ.ಡಿ. ಹಾಗೂ ಇಂಟರ್‌ನ್ಯಾಷನಲ್ ಬ್ಯಾಂಕ್ ನೋಟ್ ಸೊಸೈಟಿಯ ಇಂಡಿಯಾ ಬ್ಯಾಂಕ್‌ನೋಟ್ ಕಲೆಕ್ಟರ್ ಚಾಪ್ಟರ್‌ನ ಚೇರ್‌ಮನ್ ಆಗಿರುವ ರೆಜ್ವಾನ್ ರಜಾಕ್ ಅವರು “ಒನ್ ರುಪೀ ಒನ್ ಹಂಡ್ರೆಡ್ ಇಯರ್ 1917-2017′ ಪುಸ್ತಕ ಬಿಡುಗಡೆ ಮಾಡಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಭಾರತೀಯ ನೋಟುಗಳ ಸಂಗ್ರಹಕಾರರಾಗಿರುವ ಅವರು, ತಮ್ಮ ಸಂಗ್ರಹದಲ್ಲಿರುವ ಹಳೆಯ ನೋಟು ಮತ್ತು ನಾಣ್ಯಗಳ ಪ್ರದರ್ಶನ ಹಮ್ಮಿಕೊಂಡಿದ್ದಾರೆ. ಈ ಪ್ರದರ್ಶನ ಒಂದು ವಾರಗಳ ಕಾಲ ನಡೆಯಲಿದೆ.
1 ರೂ. ನೋಟಿನ ಚರಿತೆ* 1917ರಲ್ಲಿ 1 ರೂ. ನೋಟಿನ ಮೊದಲ ಮುದ್ರಣ. * 1994ರ ನಂತರ 1 ರೂ. ನೋಟುಗಳ ಪ್ರಿಂಟ್ ಸ್ಥಗಿತ. * 2015ರ ನಂತರ ನೋಟುಗಳು ಮತ್ತೆ ಚಲಾವಣೆಗೆ. * ಇಲ್ಲಿಯವರೆಗೆ 125 ಬಗೆಯ, ಬೇರೆ ಬೇರೆ ಕ್ರಮಸಂಖ್ಯೆ ಮತ್ತು ಸಹಿ ಇರುವ ನೋಟುಗಳು ಚಲಾವಣೆಗೆ. * ನೋಟಿನ ವಿನ್ಯಾಸದಲ್ಲಿ 28 ಬಾರಿ ಬದಲಾವಣೆ. * ಮೊದಲ 1 ರೂ ನೋಟಿನ ಮೇಲೆ ಕಿಂಗ್ ಜಾರ್ಜ್ 5 ಚಿತ್ರ. 1926ರ ನಂತರ ಈ ನೋಟುಗಳ ಚಲಾವಣೆ ನಿಂತಿತು. * 2ನೇ ಮಹಾಯುದ್ಧದ ನಂತರ ಪ್ರಿಂಟ್ ಆದ ನೋಟುಗಳ ಮೇಲೆ 6ನೇ ಕಿಂಗ್ ಜಾರ್ಜ್ ಚಿತ್ರ. * 1970ರವರೆಗೆ ಭಾರತದ 1 ರೂ. ನೋಟುಗಳು ಪರ್ಷಿಯಾ ಹಾಗೂ ಗಲ್ಫ್ ದೇಶಗಳಾದ ದುಬೈ, ಬೆಹ್ರಿನ್, ಮಸ್ಕಟ್, ಓಮನ್‌ಗಳಲ್ಲೂ ಚಲಾವಣೆಯಲ್ಲಿದ್ದವು. * ಸ್ವಾತಂತ್ರಾನಂತರ, ಮೊದಲ ಬಾರಿಗೆ 1948ರಲ್ಲಿ ಪ್ರಿಂಟ್ ಆದ ಮೊದಲಿದ್ದ ನೋಟುಗಳಿಗಿಂತ ಭಿನ್ನ ಆಕಾರ ಮತ್ತು ಬಣ್ಣ ಹೊಂದಿದ್ದವು. ಜೊತೆಗೆ 8 ಭಾರತೀಯ ಭಾಷೆಗಳಲ್ಲಿ “ಒಂದು ರೂಪಾಯಿ’ ಎಂದು ಬರೆಯಲ್ಪಟ್ಟಿತ್ತು. 1956ರಲ್ಲಿ ಕೇರಳ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಮಲಯಾಳಂ ಭಾಷೆಯೂ ಸೇರಿಕೊಂಡಿತು. * 1949ರಲ್ಲಿ ಪ್ರಿಂಟ್ ಆದ ನೋಟಿನಲ್ಲಿ ಮೊದಲ ಬಾರಿಗೆ ಅಶೋಕ ಸ್ತಂಭದ ಚಿತ್ರ ಅಚ್ಚಾಯಿತು. * ಕೇವಲ 1 ರೂ ನೋಟಿನಲ್ಲಿ ಮಾತ್ರ “ಗವರ್ನ್ಮೆಂಟ್ ಆಫ್ ಇಂಡಿಯಾ’ ಎಂದು ಬರೆದಿದೆ. ಉಳಿದೆಲ್ಲ ನೋಟುಗಳಲ್ಲಿ “ಭಾರತೀಯ ರಿಸರ್ವ್ ಬ್ಯಾಂಕ್’ “ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಬರೆದಿರುತ್ತದೆ. * 1 ರೂ. ನೋಟಿನ ಮೇಲೆ ಆರ್‌ಬಿಐ ಗವರ್ನರ್ ಬದಲು ಫಿನಾನ್ಸ್ ಸೆಕ್ರೆಟರಿ ಸಹಿ ಇರುತ್ತದೆ. -ಎಲ್ಲಿ?: ಸಬ್‌ಲೈಮ್ ಗ್ಯಾಲರಿ, ಯುಬಿ ಸಿಟಿ
-ಯಾವಾಗ?: ಡಿಸೆಂಬರ್ 7ರವರೆಗೆ