ಬೆಂಗಳೂರು: ಅಪಘಾತದಲ್ಲಿ ಕೈ ಕಳೆದುಕೊಂಡಿದ್ದಲ್ಲದೆ, ಮದುವೆಯಾದ ಮೇಲೆ ಪತಿಯಿಂದಲೂ ದೂರವಾದ ಮಹಿಳೆಯೊಬ್ಬರಿಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಉದ್ಯೋಗ. ಎಂಜಿನಿಯರಿಂಗ್ ಓದುವ ಹುಮ್ಮಸ್ಸಿನಲ್ಲಿರುವ ಬಡ ಹೆಣ್ಣುಮಗಳಿಗೆ ಸ್ಥಳದಲ್ಲೇ ಒಂದು ಲಕ್ಷ ರೂ. ನೆರವು.
ಗುರುವಾರ ನೆರವು ಬಯಸಿ ಜೆ.ಪಿ.ನಗರದಲ್ಲಿರುವ ತಮ್ಮ ಗೃಹ ಕಚೇರಿಗೆ ಆಗಮಿಸಿದ್ದ ಇಬ್ಬರು ಹೆಣ್ಣು ಮಕ್ಕಳ ಸಂಕಷ್ಟಕ್ಕೆ ಸಿಎಂ ಕುಮಾರಸ್ವಾಮಿ ಸ್ಪಂದಿಸಿದ್ದು ಹೀಗೆ. ಮುಖ್ಯಮಂತ್ರಿಯಾಗಿ ಮಾತ್ರವಲ್ಲದೆ, ಒಬ್ಬ ಹೃದಯವಂತನಾಗಿಯೂ ವೈಯಕ್ತಿಕ ನೆರವು ನೀಡಿದರು.
“ಈ ರೀತಿ ನನ್ನ ಮೇಲೆ ಭರವಸೆ ಇಟ್ಟು ಉದ್ಯೋಗಾಕಾಂಕ್ಷೆಯಿಂದ ಬರುವ ಬಡವರಿಗಾಗಿ ಪ್ರತಿ ತಿಂಗಳೂ ಮುಖ್ಯಮಂತ್ರಿ ಕಚೇರಿಯಲ್ಲೇ ಉದ್ಯೋಗ ಮೇಳ ಮಾಡಲಾಗುವುದು. ಈಗಾಗಲೇ ಈ ಕುರಿತು ಕಂಪನಿಗಳ ಜತೆ ಚರ್ಚಿಸಿದ್ದೇನೆ’ ಎಂದು ಕುಮಾರಸ್ವಾಮಿ ಇದೇ ವೇಳೆ ಭರವಸೆ ನೀಡಿದರು.
ಬಲಗೈ ಇಲ್ಲದ ದಾವಣಗೆರೆ ಮೂಲದ ಶೈಲಾ ಎಂಬ ಮಹಿಳೆ ಗುರುವಾರ ತನ್ನ ಎಳೆಯ ಕಂದಮ್ಮನನ್ನು ಕರೆದುಕೊಂಡು ತನ್ನ ತಾಯಿ ಮತ್ತು ಸಹೋದರನೊಂದಿಗೆ ಮುಖ್ಯಮಂತ್ರಿಗಳನ್ನು ಕಾಣಲು ಜೆ.ಪಿ.ನಗರದ ನಿವಾಸಕ್ಕೆ ಬಂದಿದ್ದರು. ಆಕೆಯ ಸಂಕಷ್ಟ ಕೇಳಿದ ಮುಖ್ಯಮಂತ್ರಿ, ತಮ್ಮ ಕಚೇರಿಯಲ್ಲೇ ಆಕೆಗೆ ಕೆಲಸ ಕೊಡುವಂತೆ ಸ್ಥಳದಲ್ಲಿದ್ದ ತಮ್ಮ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚಿಸಿದರು.
ಇದೇ ವೇಳೆ, ಚನ್ನಪಟ್ಟಣ ಮೂಲದ ಸಂಗೀತಾ ಎಂಬ ಬಡ ಕುಟುಂಬದ ವಿದ್ಯಾರ್ಥಿನಿ ಉನ್ನತ ಶಿಕ್ಷಣಕ್ಕೆ ನೆರವು ಕೋರಿ ಮುಖ್ಯಮಂತ್ರಿಗಳ ನಿವಾಸಕ್ಕೆ ಆಗಮಿಸಿದ್ದಳು. ಎಂಜಿನಿಯರಿಂಗ್ ಓದುವ ಬಯಕೆ ಹೊಂದಿದ್ದ ಆಕೆಗೆ ಒಂದು ಲಕ್ಷ ರೂ.ನ ಚೆಕ್ ನೀಡಿದ ಮುಖ್ಯಮಂತ್ರಿಗಳು, ಎಂಜಿನಿಯರಿಂಗ್ ಕೋರ್ಸ್‌ಗೆ ದಾಖಲಾಗುವಂತೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪ್ರತಿನಿತ್ಯ ನಮ್ಮ ಕಣ್ಣ ಮುಂದೆ ಹೃದಯ ವಿದ್ರಾವಕ ಘಟನೆಗಳು ನಡೆಯುತ್ತವೆ. ಅದೇ ರೀತಿ ಇಂದು ತಮ್ಮ ಮನೆಗೆ ದಾವಣಗೆರೆ ಮೂಲದ ಶೈಲಾ ಎಂಬಾಕೆ ಕೆಲಸ ಕೇಳಲು ತನ್ನ ಎರಡು ತಿಂಗಳ ಕಂದಮ್ಮನನ್ನು ಎತ್ತಿಕೊಂಡು ಬಂದಿದ್ದರು. 20 ವರ್ಷದ ಹಿಂದೆ ಅಪಘಾತದಲ್ಲಿ ಅವರ ಬಲಗೈ ತುಂಡಾಗಿತ್ತು.
ಆದರೆ, ಇರುವ ಎಡಗೈನಲ್ಲಿ ಅತ್ಯಂತ ವೇಗವಾಗಿ ಮತ್ತು ತಪ್ಪಿಲ್ಲದೆ ಟೈಪಿಂಗ್ ಮಾಡುವ ಕೌಶಲ್ಯ ಆಕೆಗಿತ್ತು. ಮದುವೆಯಾದರೂ ಪತಿ ಬಿಟ್ಟು ಹೋಗಿದ್ದಾನೆ. ಹೀಗಾಗಿ, ಕುಟುಂಬ ನಿರ್ವಹಣೆಗೆ ನೆರವಾಗಿ ಎಂದು ಕೇಳಿಕೊಂಡು ಬಂದಿದ್ದರು. ಆಕೆಗೆ ಮುಖ್ಯಮಂತ್ರಿ ಕಚೇರಿಯಲ್ಲೇ ಕೆಲಸ ಕೊಡಿಸಲು ತಮ್ಮ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದೇನೆ ಎಂದರು.