Advertisement

ಒಂದು ಕೋಟಿ ರೂ. ಆಮಿಷಕ್ಕೆ ಸಿಕ್ಕಿದ್ದು ಬಿಳಿಹಾಳೆ ಬಂಡಲ್‌

11:48 AM Nov 09, 2018 | |

ಬೆಂಗಳೂರು: ಕಟ್ಟಡ ನಿರ್ಮಾಣ ಕಂಪನಿಯ ನಿರ್ದೇಶಕರಿಗೆ ಸಾಲದ ರೂಪದಲ್ಲಿ ಸೂಟ್‌ಕೇಸ್‌ನಲ್ಲಿ ಒಂದು ಕೋಟಿ ರೂ. ಇದೆ ಎಂದು ನಂಬಿಸಿ ಬಿಳಿಹಾಳೆ ಬಂಡಲ್‌ಗ‌ಳನ್ನು ನೀಡಿ ಪರಾರಿಯಾದ ಪ್ರಕರಣದ ತನಿಖೆಯನ್ನು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಚುರುಕುಗೊಳಿಸಿದ್ದಾರೆ.

Advertisement

ಈ ಕುರಿತು ಶ್ರೀನಿವಾಸ್‌ ಎಂಬುವವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಾದ ಕೇರಳ ಮೂಲದ ಅರವಿಂದ, ಪ್ರಣವ್‌, ಜೋಹಾನ್‌ ಬಂಧನಕ್ಕೆ ಬಲೆ ಬೀಸಿದ್ದಾರೆ. ಈಗಾಗಲೇ ಆರೋಪಿಗಳ ದೂರವಾಣಿ ಕರೆಗಳ ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಟ್ಟಡ ನಿರ್ಮಾಣ ಕಂಪನಿಯೊಂದರ ನಿರ್ದೇಶಕರಾಗಿರುವ ಶ್ರೀನಿವಾಸ್‌ ಎಂಬುವರಿಗೆ ಕೇರಳದ ಅಕ್ಷಯ ಫೈನಾನ್ಸ್‌ ಕಂಪನಿ ಹೆಸರಿನಲ್ಲಿ ಕರೆ ಮಾಡಿದ್ದ ಅರವಿಂದ್‌, ಕಂಪನಿಗೆ ಸಾಲ ನೀಡುವುದಾಗಿ ಮಾತುಕತೆ ನಡೆಸಿದ್ದರು. ಈ ಸಂಬಂಧ ಪ್ರಣವ್‌ ಹಾಗೂ ಜೋಹಾನ್‌ ಜತೆ ಮಾತುಕತೆ ನಡೆಸುವಂತೆ ಸೂಚಿಸಿದ್ದರು.

ಬಳಿಕ ಅ.30ಕ್ಕೆ ಬೆಂಗಳೂರಿಗೆ ಆಗಮಿಸಿದ್ದ ಅರವಿಂದ್‌, ಸಾಲ ನೀಡುವ ವಿಚಾರವಾಗಿ ಶ್ರೀನಿವಾಸ್‌ ಜತೆ ಚರ್ಚೆ ಮಾಡಿದ್ದು 12 ಕೋಟಿ ರೂ. ಸಾಲ ನೀಡಲಿದ್ದು 10 ವರ್ಷಗಳಲ್ಲಿ ವಾಪಾಸ್‌ ನೀಡಬೇಕು. ಸಾಲ ಮಂಜೂರು ಮಾಡಲು ಅಗತ್ಯವಿರುವ ಸ್ಟಾಂಪ್‌ ಡ್ನೂಟಿ ಪ್ರಕ್ರಿಯೆಗಳಿಗೆ 30 ಲಕ್ಷ ರೂ. ನೀಡುವಂತೆ ಸೂಚಿಸಿದ್ದ.

ಇದಕ್ಕೊಪ್ಪಿದ್ದ ಶ್ರೀನಿವಾಸ್‌ ಕಂಪನಿ ಅಕೌಂಟ್‌ನಿಂದ 30 ಲಕ್ಷ ರೂ.ಗಳನ್ನು ಅ.31ರಂದು ನೀಡಿದ್ದರು. ಹಣ ಪಡೆದ ಬಳಿಕ ಲೀ ಮೆರಿಡಿಯನ್‌ ಹೋಟೆಲ್‌ನ ರಸ್ತೆಗೆ ಕರೆತಂದ ಅರವಿಂದ, ಒಂದು ಸೂಟ್‌ ಕೇಸ್‌ ನೀಡಿ ಇದರಲ್ಲಿ ಒಂದು ಕೋಟಿ ರೂ.ಗಳಿದ್ದು, ಸದ್ಯಕ್ಕೆ ನಿಮ್ಮ ಬಳಿ ಇಟ್ಟುಕೊಳ್ಳಿ, ಸಾಲ ನಿಮ್ಮ ಅಕೌಂಟ್‌ಗೆ ವರ್ಗಾವಣೆ ಆದ ಬಳಿಕ ನನಗೆ ವಾಪಾಸ್‌ ಕೊಡಿ ಎಂದು ಹೇಳಿ ಹೊರಟು ಹೋಗಿದ್ದಾರೆ.

Advertisement

ಅರವಿಂದ್‌ನನ್ನು ಬೀಳ್ಕೊಟ್ಟು ಕಚೇರಿಗೆ ಬಂದ ಶ್ರೀನಿವಾಸ್‌, ಸೂಟ್‌ ಕೇಸ್‌ ತೆರೆದು ನೋಡಿದರೆ 500 ರೂ. ಮುಖಬೆಲೆಯ ಮೂರು ನೋಟುಗಳನ್ನು ಮೇಲ್ಭಾಗದಲ್ಲಿ ಅಂಟಿಸಿ ಅದರ ಕೆಳಗಡೆ ಬಿಳಿಹಾಳೆ ಬಂಡಲ್‌ಗ‌ಳಿರುವುದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಅರವಿಂದ್‌ ಸೇರಿ ಇತರೆ ಆರೋಪಿಗಳಿಗೆ ಕರೆ ಮಾಡಿದರೆ ಮೊಬೈಲ್‌ ಸ್ವಿಚ್‌ ಆಫ್ ಬಂದಿದೆ. ಹೀಗಾಗಿ, ಮೋಸ ಹೋಗಿರುವುದನ್ನು ಎಚ್ಚೆತ್ತುಕೊಂಡ ಬಳಿಕ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಸಾಲದ ನೆಪದಲ್ಲಿ ವಂಚನೆ ನಿರಂತರ: ಖಾಸಗಿ ಬ್ಯಾಂಕ್‌ ಗಳು ಹಾಗೂ ಫೈನಾನ್ಸ್‌ ಕಂಪೆನಿಗಳಿಂದ ಸಾಲ ಕೊಡಿಸುವ ನೆಪದಲ್ಲಿ ಹಣ ಪಡೆದು ವಂಚಿಸುವ ಜಾಲ ಇದೇ ಮೊದಲಲ್ಲ. ಸಾಲದ ಅವಶ್ಯಕತೆ ಇರುವವರನ್ನು ಟಾರ್ಗೆಟ್‌ ಮಾಡಿಕೊಂಡು ಅವರನ್ನು ಸಂಪರ್ಕಿಸಿ ಸಾಲ ಮಂಜೂರು ಮಾಡಲು ಆರಂಭಿಕವಾಗಿ ಅಡ್ವಾನ್ಸ್‌ ರೂಪದಲ್ಲಿ ಲಕ್ಷ ಲಕ್ಷ ಹಣ ಪಡೆದು ವಂಚಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಇತ್ತೀಚೆಗೆ ಖಾಸಗಿ ಬ್ಯಾಂಕ್‌ಗಳಿಂದ ಸಾಲ ಕೊಡಿಸುವ ನೆಪದಲ್ಲಿ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿ ಯುಬಿ ಸಿಟಿಯಲ್ಲಿನ ಕಚೇರಿ ಬಂದ್‌ ಮಾಡಿರುವ ಜೆ.ಎಂ ಗ್ರೂಪ್‌ ವಿರುದ್ಧ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. ಈ  ಪ್ರಕರಣಗಳ  ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

60 ಕೋಟಿ ರೂ. ಪ್ರಾಜೆಕ್ಟ್ ಲೋನ್‌ ಕೊಡಿಸುವುದಾಗಿ ನಂಬಿಸಿ 2017ರಿಂದ ಹಂತ ಹಂತವಾಗಿ 28 ಲಕ್ಷ ರೂ. ಪಡೆದು ಜೆ.ಎಂ ಗ್ರೂಪ್‌ನ ಸಿಇಒ ಎನ್ನಲಾದ ಜೋಸೆಪ್‌ ಮ್ಯಾಥ್ಯೂ ಸೇರಿ ಮೂವರು ವಂಚಿಸಿದ್ದಾರೆ ಎಂದು ಆರೋಪಿಸಿ ಉದ್ಯಮಿ ಕೆ. ಶ್ರೀನಿವಾಸುಲು ರೆಡ್ಡಿ ಎಂಬುವವರು ದೂರು ನೀಡಿದ್ದರು. ಈ ದೂರಿನ ಅನ್ವಯ ಜೋಸೆಫ್ ಮ್ಯಾಥ್ಯೂ, ಮ್ಯಾನೇಜರ್‌  ಸೆಂಥಿಲ್‌ ಕುಮಾರ್‌ ಹಾಗೂ ಅಕೌಂಟೆಂಟ್‌ಪ್ರಿಯಾ ಎಂಬುವವರ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಜತೆಗೆ, ಯಾವುದೇ ದಾಖಲೆಗಳಿಲ್ಲದೆ ಕಡಿಮೆ ಬಡ್ಡಿಗೆ 30 ಕೋಟಿ ರೂ. ಸಾಲ ನೀಡುವುದಾಗಿ ನಂಬಿಸಿದ್ದ ಜೆಎಂ ಗ್ರೂಪ್‌ ಸಿಬ್ಬಂದಿ 33 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ ಎಂದು ಕೇರಳದ ಕಣ್ಣೂರಿನ ನಿವೃತ್ತ ಅರಣ್ಯ ಅಧಿಕಾರಿ ಚಂದ್ರನ್‌ ಅವರು ಕೂಡ ಕೆಲ ದಿನಗಳ ಹಿಂದೆ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next