ಹೈದರಾಬಾದ್ : ಇತ್ತೀಚಿಗಷ್ಟೆ ಬಿಡುಗಡೆಯಾಗಿರುವ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್ ಆರ್ ಆರ್’ ಸಿನಿಮಾದ ನ್ಯೂ ಲುಕ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತು. ಟಾಲಿವುಡ್ ನಟರಾದ ಜೂ, ಎನ್ ಟಿ ಆರ್ ಹಾಗೂ ರಾಮ ಚರಣ್ ಬೈಕ್ ಮೇಲೆ ತೆರಳುತ್ತಿರುವ ಈ ಫೋಟೊ ಅಭಿಮಾನಿಗಳ ಮನಸೂರೆಗೊಳಿಸಿತು. ಆದರೆ, ಎಲ್ಲರ ಹೃದಯ ಕದ್ದ ಈ ಲುಕ್ ನಲ್ಲಿ ಲೋಪವೊಂದನ್ನು ಪತ್ತೆ ಹಚ್ಚಿದ್ದಾರೆ ಸೈಬರಾಬಾದ್ ನ ಟ್ರಾಫಿಕ್ ಪೊಲೀಸ್.
ಹೌದು, ಆರ್ ಆರ್ ಆರ್ ಚಿತ್ರದ ನಾಯಕ ನಟರಾದ ಜ್ಯೂ, ಎನ್ ಟಿ ಆರ್ ಹಾಗೂ ರಾಮ್ ಚರಣ್ ಜೊತೆಯಾಗಿ ಬೈಕ್ ಸವಾರಿ ಮಾಡುತ್ತಿರುವ ಲುಕ್ ಅಭಿಮಾನಿಗಳ ಪಾಲಿಗೆ ಅಕ್ಷರಶಃ ಹಬ್ಬವನ್ನೆ ಉಂಟು ಮಾಡಿದೆ. ಈ ಲುಕ್ ನಲ್ಲಿ ಜ್ಯೂ ಎನ್ ಟಿ ಆರ್ ಬೈಕ್ ಓಡಿಸುತ್ತಿದ್ದಾರೆ. ಹಿಂದಿನ ಸೀಟಿನಲ್ಲಿ ರಾಮ್ ಚರಣ ಕುಳಿತುಕೊಂಡಿದ್ದಾರೆ. ಗಮನ ಸೆಳೆಯುವ ಈ ಲುಕ್ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿರುವುದು ಸುಳ್ಳಲ್ಲ. ಆದರೆ, ಈ ಲುಕ್ ನಲ್ಲಿ ಕೆಲವೊಂದು ತಪ್ಪುಗಳನ್ನು ಪೊಲೀಸರು ಕಂಡು ಹಿಡಿದಿದ್ದಾರೆ.
ಆರ್ ಆರ್ ಆರ್ ಚಿತ್ರದ ಲುಕ್ ನಲ್ಲಿ ಪೊಲೀಸರು ಕೂಡ ಮೆಚ್ಚಿಕೊಂಡಿದ್ದಾರೆ. ಆದರೆ, ಈ ಲುಕ್ ನಲ್ಲಿ ಹೀರೋಗಳು ಓಡಿಸುತ್ತಿರುವ ಬೈಕ್ ಗೆ ನಂಬರ್ ಪ್ಲೇಟ್ ಇಲ್ಲ, ಹಾಗೂ ಅವರು ಹೆಲ್ಮೆಟ್ ಕೂಡ ಧರಿಸಿಲ್ಲ ಎಂದು ಸೈಬರಾಬಾದ್ ಟ್ರಾಫಿಕ್ ಪೊಲೀಸ್ ತಮ್ಮ ಟ್ವಿಟರಿನಲ್ಲಿ ಬರೆದುಕೊಂಡಿದ್ದಾರೆ. ಹಾಗೂ ತಾವೇ ಈ ಫೋಟೊ ಎಡಿಟ್ ಮಾಡಿ ನಾಯಕ ನಟರ ತಲೆಗೆ ಹೆಲ್ಮೆಟ್ ಅಂಟಿಸಿ ಮರು ಪೋಸ್ಟ್ ಮಾಡಿದ್ದಾರೆ. ಜೊತೆಗೆ ‘ಹೆಲ್ಮೆಟ್ ಧರಿಸಿ ಸುರಕ್ಷತೆಯಿಂದ ಇರಿ’ ಎಂದು ಕ್ಯಾಪ್ಷನ್ ನೀಡಿದ್ದಾರೆ.
ಇನ್ನು ಟ್ರಾಫಿಕ್ ಪೊಲೀಸರು ಆರ್ ಆರ್ ಆರ್ ಚಿತ್ರದ ಲುಕ್ ನ್ನು ಜನರಲ್ಲಿ ಜಾಗೃತಿ ಮೂಡಿಸಲು ಬಳಸಿಕೊಂಡಿದ್ದಾರೆ. ಬೈಕ್ ಓಡಿಸುವಾಗ ಹೆಲ್ಮೆಟ್ ಧರಿಸುವಂತೆ ತಿಳಿ ಹೇಳಿದ್ದಾರೆ. ಹಾಗೂ ಸಂಚಾರಿ ನಿಯಮಗಳನ್ನು ತಪ್ಪದೆ ಪಾಲಿಸಿ ಎಂದು ಆರ್ ಆರ್ ಆರ್ ಪೋಸ್ಟರ್ ಮೂಲಕ ಜಾಗೃತಿ ಮೂಡಿಸಿದ್ದಾರೆ.