Advertisement

ಆರ್‌ಸಿಬಿ-ರಾಜಸ್ಥಾನ್‌: ಜೈಪುರ ಜಯ ನಿರ್ಣಾಯಕ

06:00 AM May 19, 2018 | Team Udayavani |

ಜೈಪುರ: ಐಪಿಎಲ್‌ ಲೀಗ್‌ ಹಣಾಹಣಿ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದಿದೆ. ಹೈದರಾಬಾದ್‌, ಚೆನ್ನೈ ತಂಡಗಳ ಪ್ಲೇ-ಆಫ್ ಪ್ರವೇಶ, ಡೆಲ್ಲಿ ತಂಡಗಳ ನಿರ್ಗಮನ ಹೊರತುಪಡಿಸಿದರೆ ಉಳಿದಂತೆ ಪ್ಲೇ-ಆಫ್ ಅವಕಾಶ ಉಳಿದೈದೂ ತಂಡಗಳಿಗೆ ಮುಕ್ತವಾಗಿರುವುದರಿಂದ ಕ್ರಿಕೆಟ್‌ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ “ಕಪ್‌ ನಮ್ದೇ’ ಎಂದು ಹಾಡುತ್ತ ಹಾರಾಡುತ್ತಿದ್ದ ಕರ್ನಾಟಕದ ಕ್ರಿಕೆಟ್‌ ಪ್ರೇಮಿಗಳು ಮರಳಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

Advertisement

ಇದಕ್ಕೆ ಕಾರಣ, ಆರ್‌ಸಿಬಿ ತಂಡದ ದಿಢೀರ್‌ ಪ್ರಗತಿ. 13ರಲ್ಲಿ 6 ಪಂದ್ಯ ಗೆದ್ದು 5ನೇ ಸ್ಥಾನದಲ್ಲಿರುವ ಕೊಹ್ಲಿ ಪಡೆ ಶನಿವಾರ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಜೈಪುರದಲ್ಲಿ ಸೆಣಸಲಿದೆ. ಇನ್ನೊಂದೆಡೆ ರಾಜಸ್ಥಾನ್‌ ಕೂಡ ಇಷ್ಟೇ ಪಂದ್ಯಗಳಿಂದ 12 ಅಂಕ ಸಂಪಾದಿಸಿದೆಯಾದರೂ ರನ್‌ರೇಟ್‌ನಲ್ಲಿ ಬೆಂಗಳೂರಿಗಿಂತ ಹಿಂದಿದೆ. ಹೀಗಾಗಿ ಜೈಪುರದಲ್ಲಿ ಜಯಿಸಿದವರಿಗೆ ಪ್ಲೇ-ಆಫ್ ಟಿಕೆಟ್‌ ಲಭಿ ಸುವ ಎಲ್ಲ ಸಾಧ್ಯತೆ ಇದೆ ಎಂಬುದು ಸದ್ಯದ ಲೆಕ್ಕಾಚಾರ.

ಬಟ್ಲರ್‌, ಸ್ಟೋಕ್ಸ್‌ ಸೇವೆ ಇಲ್ಲ
ಎಂದೋ ಹೊರಬೀಳಬೇಕಿದ್ದ ರಾಜಸ್ಥಾನ್‌ ಇಲ್ಲಿಯ ತನಕ ಪ್ಲೇ-ಆಫ್ ರೇಸ್‌ನಲ್ಲಿ ಉಳಿದದ್ದು ಇಂಗ್ಲೆಂಡಿನ ಬಿಗ್‌ ಹಿಟ್ಟರ್‌ ಜಾಸ್‌ ಬಟ್ಲರ್‌ ಸಾಹಸದಿಂದ ಎಂಬುದರಲ್ಲಿ ರಹಸ್ಯವೇನಿಲ್ಲ. ಯಾವಾಗ ಬಟ್ಲರ್‌ಗೆ ಆರಂಭಿಕನಾಗಿ ಭಡ್ತಿ ನೀಡಲಾಯಿತೋ ರಹಾನೆ ಬಳಗದ ದೆಸೆ ಬದಲಾಗತೊಡಗಿತು. ಬಟ್ಲರ್‌ ಏಕಾಂಗಿ ಹೋರಾಟದ ಮೂಲಕ ತಂಡಕ್ಕೆ ಅತ್ಯಗತ್ಯ ಜಯವನ್ನು ತಂದುಕೊಡುತ್ತ ಹೋದರು. ರಾಜಸ್ಥಾನ್‌ ರಾಯಲ್ಸ್‌ ಅಂದರೆ ಜಾಸ್‌ ಬಟ್ಲರ್‌ ಎಂಬಂತಾಗಿತ್ತು ತಂಡದ ಸ್ಥಿತಿ. 

ಆದರೆ ಅತ್ಯಂತ ಮಹತ್ವದ ಕೊನೆಯ ಲೀಗ್‌ ಪಂದ್ಯದಲ್ಲಿ ರಾಜಸ್ಥಾನ್‌ಗೆ ಬಟ್ಲರ್‌ ಸೇವೆ ಲಭಿಸುತ್ತಿಲ್ಲ. ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಿರುವ ಅವರು ತವರಿಗೆ ವಾಪಸಾಗಿದ್ದಾರೆ. ಇವರೊಂದಿಗೆ ಬೆನ್‌ ಸ್ಟೋಕ್ಸ್‌ ಕೂಡ ಹೋಗಿದ್ದಾರೆ. ತಂಡ ತೀವ್ರ ಒತ್ತಡಕ್ಕೆ ಸಿಲುಕಿದೆ. ತ್ರಿಪಾಠಿ, ಶಾರ್ಟ್‌, ರಹಾನೆ, ಸ್ಯಾಮ್ಸನ್‌ ಸೇರಿಕೊಂಡು ತಂಡವನ್ನು ಬಲಪಡಿಸಬೇಕಿದೆ. ಇವರಲ್ಲಿ ತ್ರಿಪಾಠಿ ಹೊರತುಪಡಿಸಿ ಉಳಿದವರ ಫಾರ್ಮ್ ಬಗ್ಗೆ ಏನೂ ಹೇಳುವಂತಿಲ್ಲ.

ಆರ್‌ಸಿಬಿ ಗೆಲುವಿನ ಹ್ಯಾಟ್ರಿಕ್‌
ಆರಂಭದಲ್ಲಿ ಮಂಕಾಗಿದ್ದ ಆರ್‌ಸಿಬಿ ಈಗ ಹ್ಯಾಟ್ರಿಕ್‌ ಜಯದೊಂದಿಗೆ ಮುನ್ನುಗ್ಗುತ್ತಿದೆ. ಡೆಲ್ಲಿ, ಪಂಜಾಬ್‌ ಮತ್ತು ಹೈದರಾಬಾದ್‌ ತಂಡಗಳನ್ನು ಕೆಡವಿದ ಬಳಿಕ ಈಗ ರಾಜಸ್ಥಾನ್‌ ಬೇಟೆಯ ಮೇಲೆ ಕಣ್ಣಿಟ್ಟಿದೆ. ಇದರಲ್ಲಿ ಯಶಸ್ವಿಯಾದರೆ ಬೆಂಗಳೂರಿಗೆ ಜಾಕ್‌ಪಾಟ್‌ ಖಂಡಿತ! ಬೆಂಗಳೂರಿನಲ್ಲೇ ನಡೆದ ಮೊದಲ ಸುತ್ತಿನಲ್ಲಿ ರಾಜಸ್ಥಾನ್‌ ವಿರುದ್ಧ ಅನುಭವಿಸಿದ 19 ರನ್‌ ಸೋಲಿಗೆ ಸೇಡು ತೀರಿಸಿಕೊಳ್ಳುವ ಯೋಜನೆ ಕೂಡ ಆರ್‌ಸಿಬಿ ಮುಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next