Advertisement

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

07:05 PM Apr 28, 2024 | Team Udayavani |

ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಪ್ರಾಬಲ್ಯ ಮೆರೆದಿದ್ದು, ವಿಲ್ ಜಾಕ್ಸ್ ಅವರ ಸ್ಪೋಟಕ ಶತಕ ಮತ್ತು ವಿರಾಟ್ ಕೊಹ್ಲಿ ಅವರ ಜವಾಬ್ದಾರಿಯುತ ಆಟದಿಂದ ಗುಜರಾತ್ ಟೈಟಾನ್ಸ್ ಎದುರು 9 ವಿಕೆಟ್ ಗಳ ಅತ್ಯಮೋಘ ಜಯ ಸಾಧಿಸಿದೆ.

Advertisement

ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಗುಜರಾತ್ 3 ವಿಕೆಟ್ ನಷ್ಟಕ್ಕೆ 200 ರನ್ ಕಲೆ ಹಾಕಿತು. ಸಾಹ 5 ರನ್ ಗೆ ಬೇಗನೆ ನಿರ್ಗಮಿಸಿದರು. ಆ ಬಳಿಕ ತಂಡಕ್ಕೆ ನೇರವಾದ ಸಾಯಿ ಸುದರ್ಶನ್ 84 ರನ್ ಗಳಿಸಿ ಔಟಾಗದೆ ಉಳಿದರು. ನಾಯಕ ಶುಭಮನ್ ಗಿಲ್ 16, ಶಾರುಖ್ ಖಾನ್ 58 ರನ್ ಗಳಿಸಿ ಔಟಾದರು. ಡೇವಿಡ್ ಮಿಲ್ಲರ್ ಔಟಾಗದೆ 26 ರನ್ ಗಳಿಸಿದರು.

ಗುರಿ ಬೆನ್ನಟ್ಟಿದ ಆರ್ ಸಿಬಿ 16 ಓವರ್ ಗಳಲ್ಲಿಯೇ ಒಂದೇ ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿ ಸಂಭ್ರಮದ ಜಯ ತನ್ನದಾಗಿಸಿ ಸಾಲು ಸಾಲು ಸೋಲಿನ ನೋವು ಮರೆಯಿತು. ನಾಯಕ ಫಾಫ್ ಡು ಪ್ಲೆಸಿಸ್ 24 ರನ್ ಗಳಿಸಿ ಔಟಾದರು. ಎಂದಿನಂತೆ ಅಮೋಘ ಆಟವಾಡಿದ ಒರೆಂಜ್ ಕ್ಯಾಪ್ ಧಾರಿ ಕೊಹ್ಲಿ44 ಎಸೆತಗಳಲ್ಲಿ 70 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಐಪಿಎಲ್ ಸರಣಿಯಲ್ಲಿ 500 ರನ್ ದಾಟಿದ ಸಾಧನೆ ಮಾಡಿದರು. ಐಪಿಎಲ್ ಸರಣಿಗಳಲ್ಲಿ 7 ಬಾರಿ 500 ರನ್ ದಾಟಿದ ಡೇವಿಡ್ ವಾರ್ನರ್ ಅವರ ಸಾಧನೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ.

ಅಬ್ಬರಿಸಿದ ವಿಲ್ ಜಾಕ್ಸ್ 41 ಎಸೆತಗಳಲ್ಲಿ 100 ರನ್ ಪೂರೈಸಿ ಗೆಲುವು ಮತ್ತು ಶತಕವನ್ನು ಜತೆಯಾಗಿ ಸಂಭ್ರಮಿಸಿದರು. 5 ಬೌಂಡರಿ ಮತ್ತು 10 ಅಬ್ಬರದ ಸಿಕ್ಸರ್ ಗಳನ್ನು ಸಿಡಿಸಿ ರಂಜಿಸಿದರು. ಗೆಲುವಿಗೆ ಒಂದು ರನ್ ಅಗತ್ಯವಿತ್ತು, ಇದೆ ವೇಳೆ ಜಾಕ್ಸ್ 94 ರನ್ ಗಳಿಸಿದ್ದರು. ಸಿಕ್ಸರ್ ಸಿಡಿಸಿ ಡಬಲ್ ಸಂಭ್ರಮ ತನ್ನದಾಗಿಸಿಕೊಂಡರು.

ಪಂದ್ಯದ ಕೊನೆಯಲ್ಲಿ ರಶೀದ್ ಖಾನ್ ಅವರು ಎಸೆದ ಓವರ್ ನಲ್ಲಿ ಸಿಡಿದೆದ್ದ ಜಾಕ್ಸ್ (1 6 6 4 6 6) ಸಿಕ್ಸರ್ ಗಳ ಮಳೆ ಸುರಿಸಿದರು.

Advertisement

ಆರ್ ಸಿಬಿ ಆಡಿದ 10ನೇ ಪಂದ್ಯದಲ್ಲಿ 3 ನೇ ಗೆಲುವು ತನ್ನದಾಗಿಸಿಕೊಂಡಿತು. ಗುಜರಾತ್ ಆಡಿದ 10 ನೇ ಪಂದ್ಯದಲ್ಲಿ 6 ನೇ ಸೋಲು ತನ್ನದಾಗಿಸಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next