Advertisement

ಆರ್‌ಸಿಬಿ-ಚೆನ್ನೈ ಬಿಗ್‌ ಮ್ಯಾಚ್‌; ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡಗಳ ಸ್ಪರ್ಧೆ

11:15 PM Apr 11, 2022 | Team Udayavani |

ನವೀ ಮುಂಬಯಿ: ರಾಯಲ್‌ ಪ್ರದರ್ಶನದ ಸೂಚನೆ ನೀಡಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ಸತತ 4 ಸೋಲುಂಡು ಕಂಡುಕೇಳರಿಯದ ಪತನಕ್ಕೆ ಸಿಲುಕಿರುವ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್‌ ಮಂಗಳವಾರದ “ಬಿಗ್‌ ಐಪಿಎಲ್‌ ಮ್ಯಾಚ್‌’ ಒಂದಕ್ಕೆ ಸಾಕ್ಷಿಯಾಗಲಿವೆ.

Advertisement

ಈವರೆಗಿನ ಫ‌ಲಿತಾಂಶದ ಲೆಕ್ಕಾಚಾರದಲ್ಲಿ ಇದು ದೊಡ್ಡ ಮ್ಯಾಚ್‌ ಅಲ್ಲ, ಎರಡೂ ತಂಡಗಳ ಅಭಿಮಾನಿಗಳ ದೃಷ್ಟಿಯಲ್ಲಿ ಬಿಗ್‌ ಮ್ಯಾಚ್‌. ಐಪಿಎಲ್‌ ಇತಿಹಾಸದಲ್ಲೇ ಅತ್ಯಧಿಕ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ತಂಡಗಳೆಂಬ ಹೆಗ್ಗಳಿಕೆ ಆರ್‌ಸಿಬಿ ಮತ್ತು ಚೆನ್ನೈಗೆ ಇದೆ. ಹಾಗೆಯೇ ಇಷ್ಟು ಕಾಲ ಚೆನ್ನೈ ತಂಡದಲ್ಲಿದ್ದು, ಕಳೆದ ಸಲ ಚೆನ್ನೈ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ಫಾ ಡು ಪ್ಲೆಸಿಸ್‌ ಈಗ ಆರ್‌ಸಿಬಿ ನಾಯಕನಾಗಿರುವ ಕಾರಣಕ್ಕಾಗಿಯೂ ಈ ಪಂದ್ಯದ ಕ್ರೇಝ್ ಹೆಚ್ಚಿದೆ. “ಅಭಿಮಾನಿಗಳ ಪಡೆ’ಯೊಂದು ಡು ಪ್ಲೆಸಿಸ್‌ ಆಟವನ್ನು ಕಾಣಲೆಂದೇ ಆರ್‌ಸಿಬಿ ಪಂದ್ಯಗಳಿಗೆ ಹಾಜರಾಗುತ್ತಿರುವುದು ವಿಶೇಷ.ಮಂಗಳವಾರವೂ ಇಂಥದೊಂದು ದೃಶ್ಯಾವಳಿಯನ್ನು ಕಾಣಬಹುದು.

ಬದಲಾದೀತೇ ನಸೀಬು?
ನಾಯಕತ್ವ ಬದಲಾದೊಡನೆ ಚೆನ್ನೈ ತಂಡದ ನಸೀಬು ಕೂಡ ಕೆಟ್ಟಿರುವುದು ಸಾಬೀತಾಗಿದೆ. ಜತೆಗೆ ಕೆಲವು ಸ್ಟಾರ್‌ ಆಟಗಾರರು ಬೇರೆ ಫ್ರಾಂಚೈಸಿ ಪಾಲಾದದ್ದು, ಈಗಿನ ಬಹುತೇಕ ಆಟಗಾರರ ಫಾರ್ಮ್ ಏಕಕಾಲಕ್ಕೆ ಕೈಕೊಟ್ಟಿರುವುದು ಚೆನ್ನೈ ವೈಫ‌ಲ್ಯಕ್ಕೆ ಪ್ರಮುಖ ಕಾರಣಗಳಾಗಿವೆ. ಇಲ್ಲಿ ಮುಖ್ಯವಾಗಿ ಉಲ್ಲೇಖೀಸಬಹುದಾದ ಹೆಸರುಗಳೆಂದರೆ ಋತುರಾಜ್‌ ಗಾಯಕ್ವಾಡ್‌ ಮತ್ತು ಅಂಬಾಟಿ ರಾಯುಡು ಅವರದು.

ನೂತನ ನಾಯಕ ರವೀಂದ್ರ ಜಡೇಜ ಅವರ “ಲೀಡರ್‌ಶಿಪ್‌’ ವೈಫ‌ಲ್ಯದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ಆರಂಭಗೊಂಡಿವೆ. ಮತ್ತೆ ಧೋನಿಗೆ ತಂಡದ ಚುಕ್ಕಾಣಿ ವಹಿಸುವ ಕುರಿತು ಗಾಸಿಪ್‌ಗ್ಳೂ ಕೇಳಿಬರುತ್ತಿವೆ. ಆದರೆ ಇಂಥ ಸನ್ನಿವೇಶದಲ್ಲಿ ಧೋನಿ ಸೇರಿದಂತೆ ಸೀನಿಯರ್‌ ಆಟಗಾರರಾದ ಉತ್ತಪ್ಪ, ರಾಯುಡು, ಅಲಿ, ಬ್ರಾವೊ, ದುಬೆ ಅವರೆಲ್ಲ ತಂಡದನೆರವಿಗೆ ಟೊಂಕ ಕಟ್ಟಬೇಕಾದ ಅನಿವಾರ್ಯತೆ ಇದೆ. ಎಲ್ಲರೂ ಹೆಚ್ಚಿನ ಜವಾಬ್ದಾರಿ ವಹಿಸಬೇಕಿದೆ.

ಕೋಚ್‌ ಸ್ಟೀಫ‌ನ್‌ ಫ್ಲೆಮಿಂಗ್‌ ಪ್ರಕಾರ ತಂಡದ ಎರಡು ಪ್ರಮುಖ ಸಮಸ್ಯೆಗಳೆಂದರೆ, ಪ್ರಧಾನ ಬೌಲರ್‌ ದೀಪಕ್‌ ಚಹರ್‌ ಇನ್ನೂ ಚೇತಿರಿಸಿಕೊಳ್ಳದಿದ್ದುದು ಹಾಗೂ ಎಲ್ಲ ವಿಭಾಗಗಳಲ್ಲೂ ಸಾಮರ್ಥ್ಯಕ್ಕಿಂತಲೂ ಕೆಳ ಮಟ್ಟದ ಪ್ರದರ್ಶನ ಕಂಡುಬರುತ್ತಿರುವುದು.

Advertisement

ಆರ್‌ಸಿಬಿ ಸಶಕ್ತ ಪಡೆ
ಆರ್‌ಸಿಬಿ ಕೂಡ ಈ ಬಾರಿ ಬೇರೆಯದೇ ಆದ ಕಾಂಬಿನೇಶನ್‌ ಹೊಂದಿದೆ. ಆದರೆ ಇದರಿಂದ ಸಾಧನೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗಿಲ್ಲ. ಆರಂಭಿಕ ಪಂದ್ಯದಲ್ಲಿ ಇನ್ನೂರರ ಗಡಿ ದಾಟಿಯೂ ಪಂಜಾಬ್‌ಗ ಶರಣಾದ ಬಳಿಕ ಆರ್‌ಸಿಬಿ ಎಲ್ಲರಿಗೂ ಸೋಲಿನ ಬಿಸಿ ಮುಟ್ಟಿಸಿದೆ. ಹ್ಯಾಟ್ರಿಕ್‌ ಜಯದೊಂದಿಗೆ ಮುನ್ನಡೆಯಯುತ್ತಿದೆ. ಇದೇ ಲಯದಲ್ಲಿ ಸಾಗಿದರೆ ಸೋತು ಸುಣ್ಣವಾಗಿರುವ ಚೆನ್ನೈ ಮೇಲೆ ಸವಾರಿ ಮಾಡುವುದು ಸಮಸ್ಯೆಯೇ ಅಲ್ಲ.

ಆರ್‌ಸಿಬಿಯ ಟಾಪ್‌-3 ಬ್ಯಾಟರ್‌ಗಳಾದ ಫಾ ಡು ಪ್ಲೆಸಿಸ್‌, ಇವರ ನೂತನ ಜತೆಗಾರ ಅನುಜ್‌ ರಾವತ್‌, ನಾಯಕತ್ವದ ಒತ್ತಡದಿಂದ ಮುಕ್ತರಾದ ವಿರಾಟ್‌ ಕೊಹ್ಲಿ ಉತ್ತಮ ಫಾರ್ಮ್ನಲ್ಲಿರುವುದು ಪ್ಲಸ್‌ ಪಾಯಿಂಟ್‌. ಕಳೆದ ಪಂದ್ಯದ ಮೂಲಕ ತಂಡವನ್ನು ಕೂಡಿಕೊಂಡ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೂಡ ಸಿಡಿಯುವ ಸೂಚನೆ ನೀಡಿದ್ದಾರೆ. ದಿನೇಶ್‌ ಕಾರ್ತಿಕ್‌ ಫಿನಿಶಿಂಗ್‌ ರೋಲ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದ್ದಾರೆ. ಶಬಾಜ್‌ ಅಹ್ಮದ್‌ ಕೂಡ ಹೊಡಿಬಡಿ ಪ್ರದರ್ಶನದ ಮೂಲಕ ಕೆಳ ಕ್ರಮಾಂಕದ ಆತಂಕವನ್ನು ದೂರ ಮಾಡುತ್ತಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ ಹರ್ಷಲ್‌ ಪಟೇಲ್‌ ಗೈರು ತಂಡವನ್ನು ಕಾಡಲಿದೆ. ಸಹೋದರಿಯ ನಿಧನದಿಂದ ಅವರು ತಂಡವನ್ನು ತೊರೆದಿದ್ದಾರೆ. ಇವರ ಬದಲು ಸಿದ್ಧಾರ್ಥ್ ಕೌಲ್‌ ಆಡಬಹುದು. ಮೊಹಮ್ಮದ್‌ ಸಿರಾಜ್‌ ದುಬಾರಿಯಾಗುತ್ತಿರುವುದು ಚಿಂತಿಸಬೇಕಾದ ಸಂಗತಿ.

ಈ ನಡುವೆ ಆಸೀಸ್‌ ವೇಗಿ ಜೋಶ್‌ ಹ್ಯಾಝಲ್‌ವುಡ್‌ ಕ್ವಾರಂಟೈನ್‌ ಪೂರೈಸಿ ಕುಳಿತಿದ್ದಾರೆ. ಇವರು ಡೇವಿಡ್‌ ವಿಲ್ಲಿ ಬದಲು ಕಣಕ್ಕಿಳಿಯುವ ಸಾಧ್ಯತೆ ಇದೆ. ಹಸರಂಗ, ಆಕಾಶ್‌ದೀಪ್‌ ಆರ್‌ಸಿಬಿಯ ಬೌಲಿಂಗ್‌ ವಿಭಾಗವನ್ನು ಬಲಿಷ್ಠಗೊಳಿಸಿದ್ದಾರೆ. ಚೆನ್ನೈಗೆ ಹೋಲಿಸಿದರೆ ಆರ್‌ಸಿಬಿ ಎಲ್ಲ ವಿಭಾಗಗಳಲ್ಲೂ ಸಶಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next