ಬೆಂಗಳೂರು: ಶುಕ್ರವಾರ ನಡೆದ ಐಪಿಎಲ್ 14 ನೇ ಆವೃತ್ತಿಯ ಚೊಚ್ಚಲ ಪಂದ್ಯದಲ್ಲಿ ಗೆಲುವು ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ‘ಪಂಜಾಬ್ ಕಿಂಗ್ಸ್’ ತಂಡಕ್ಕೆ ಧನ್ಯವಾದ ಹೇಳಿದೆ.
ಅರೇ…ಆರ್ ಸಿಬಿಯವರು ಪಂಜಾಬ್ ತಂಡಕ್ಕೆ ಏಕೆ ಥ್ಯಾಂಕ್ಸ್ ಹೇಳಿದರು ಎನ್ನುವ ಪ್ರಶ್ನೆ ನಿಮಗೆ ಮೂಡಿರಬಹುದು. ಅದಕ್ಕೆ ಕಾರಣ ಗ್ಲೆನ್ ಮ್ಯಾಕ್ಸ್ವೆಲ್.
ಹೌದು, ಹಿಟ್ ಮ್ಯಾನ್ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ ತಂಡದ ವಿರುದ್ಧ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಪಡೆಯಿತು. ರೋಚಕತೆಯಿಂದ ಕೂಡಿದ್ದ ಈ ಪಂದ್ಯದ ಗೆಲುವಿಗೆ ಗ್ಲೆನ್ ಮ್ಯಾಕ್ಸ್ವೆಲ್ ಕೊಡುಗೆ ಅಪಾರ. ಬೆಂಗಳೂರು ತಂಡದ ಪರವಾಗಿ ಕಣಕ್ಕಿಳಿದ ಅವರು, 28 ಎಸೆತಗಳಲ್ಲಿ ಮೂರು ಫೋರ್ ಹಾಗೂ ಅಮೋಘ ಎರಡು ಸಿಕ್ಸ್ ಚಚ್ಚಿ 39 ರನ್ ಕಲೆ ಹಾಕಿದರು. ಇದು ಆರ್ ಸಿಬಿ ಗೆಲುವಿಗೆ ಸಹಕಾರಿಯಾಯಿತು.
2020ರ 13 ನೇ ಆವೃತ್ತಿಯ ಐಪಿಎಲ್ ಟೋರ್ನಿಯಲ್ಲಿ ಪಂಜಾಬ್ ತಂಡದ ಪರ ಆಡಿದ್ದ ಸ್ಫೋಟಕ ಬ್ಯಾಟ್ಸ್ಮನ್ ಗ್ಲೆನ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಪರಿಣಾಮ ಈ ವರ್ಷದ ಹರಾಜಿನಲ್ಲಿ ಪಂಜಾಬ್ ತಂಡ ಅವರನ್ನು ಕೈ ಬಿಟ್ಟಿತು. ಪಂಜಾಬ್ ತಂಡದಿಂದ ತಿರಸ್ಕೃತಗೊಂಡಿದ್ದ ಮ್ಯಾಕ್ಸ್ವೆಲ್ ಅವರನ್ನು ಬೆಂಗಳೂರು ತಂಡ ಬರೋಬ್ಬರಿ 14.25 ಕೋಟಿ ನೀಡಿ ಖರೀದಿಸಿದೆ. ನಿನ್ನೆ ನಡೆದ ಪಂದ್ಯದಲ್ಲಿ ಗ್ಲೆನ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.
ಮ್ಯಾಚ್ ಗೆಲುವಿನ ನಂತರ ಟ್ವೀಟ್ ಮಾಡಿರುವ ಆರ್ ಸಿಬಿ, ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಬಿಟ್ಟುಕೊಟ್ಟಿದ್ದಕ್ಕೆ ಪಂಜಾಬ್ ತಂಡಕ್ಕೆ ಧನ್ಯವಾದ ತಿಳಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಮಯ ಜಾರಿಯಲ್ಲಿರದಿದ್ದರೆ ನಿಮ್ಮನ್ನು ಅಪ್ಪಿಕೊಳ್ಳುತ್ತಿದ್ದೇವು ಎಂದು ಹೇಳಿಕೊಂಡಿದೆ.