Advertisement
ಈಗಾಗಲೇ ಪ್ಲೇ ಆಫ್ನಿಂದ ಹೊರಬಿದ್ದಿರುವ ಆರ್‌ಸಿಬಿಗೆ ಇದು ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯ. ಹೈದರಾಬಾದ್ ವಿರುದ್ಧ ಮೊದಲ ಮುಖಾಮುಖೀಯಲ್ಲಿ 118 ರನ್‌ಗಳ ಹೀನಾಯ ಸೋಲನುಭವಿಸಿದ ಆರ್‌ಸಿಬಿಗೆ ಇದು ಸೇಡಿನ ಪಂದ್ಯವಾಗಿದೆ. ಆದರೆ ಅಂಕ ಪಟ್ಟಿಯಲ್ಲಿ 12 ಅಂಕದೊಂದಿಗೆ 4ನೇ ಸ್ಥಾನದಲ್ಲಿರುವ ಹೈದರಾಬಾದ್ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಗುರುವಾರದ ಮುಂಬೈ ವಿರುದ್ಧ ಸೂಪರ್ ಓವರ್‌ನಲ್ಲಿ ಸೋತ ಹೈದಾರಾಬಾದ್‌ಗೆ ಪ್ಲೇ ಆಫ್ಗೇರಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ.
ವಾರ್ನರ್ ನಿರ್ಗಮನದ ಬಳಿಕ ತಂಡಕ್ಕೆ ಆಸರೆಯಾಗಿರುವುದು ಕನ್ನಡಿಗ ಮನೀಷ್ ಪಾಂಡೆ. ಕಳೆದ 2 ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತ ಬಂದಿರುವುದರಿಂದ ತಂಡ ಇವರ ಬ್ಯಾಟಿಂಗ್ ಮೇಲೆ ಹೆಚ್ಚಿನ ನಂಬಿಕೆ ಇರಿಸಿದೆ. ನಾಯಕ ಕೇನ್ ವಿಲಿಯಮ್ಸನ್ ಪ್ರತೀ ಪಂದ್ಯದಲ್ಲಿಯೂ ವಿಫಲರಾಗುತ್ತಿರುವುದೂ ದೊಡ್ಡ ತಲೆನೋವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ವಿಜಯ್ ಶಂಕರ್, ಅಭಿಷೇಕ್ ಶರ್ಮ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಸ್ಫೋಟಕ ಬ್ಯಾಟಿಂಗ್ ನೀಡಿದರೆ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ಯಾವುದೇ ಅನುಮಾನವಿಲ್ಲ. ಬೌಲಿಂಗ್ ಬಲಿಷ್ಠ
ಹೈದರಾಬಾದ್ ಬೌಲಿಂಗ್ ಘಾತುಕವಾಗಿದೆ. ಮೊಹಮ್ಮದ್ ನಬಿ, ರಶೀದ್ ಖಾನ್, ಖಲೀಲ್ ಅಹ್ಮದ್, ಭುವನೇಶ್ವರ್ ಕುಮಾರ್, ಬಾಸಿಲ್ ಥಂಪಿ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.
Related Articles
ಈ ಬಾರಿಯ ಐಪಿಎಲ್‌ನಲ್ಲಿ ತೀರಾ ಕಳಪೆ ಪ್ರದರ್ಶನದಿಂದ ಪ್ಲೇ ಆಫ್ನಿಂದ ಹೊರಬಿದ್ದಿರುವ ಆರ್‌ಸಿಬಿಗೆ ಬೌಲಿಂಗ್‌ನದ್ದೇ ಚಿಂತೆ. ಯಾವ ಬೌಲರ್ ಕೂಡ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಉಮೇಶ್ ಯಾದವ್, ಚಾಹಲ್, ಸೈನಿ ಹೀಗೆ ಪ್ರತಿಯೊಬ್ಬರೂ ದುಬಾರಿಯಾಗುತ್ತಿದ್ದು ಯಾರ ಮೇಲೆಯೂ ತಂಡ ನಂಬಿಕೆ ಇಡುವ ಸ್ಥಿತಿಯಲ್ಲಿಲ್ಲ. ಬ್ಯಾಟಿಂಗ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ, ಎಬಿ ಡಿ’ವಿಲಿಯರ್, ಪಾರ್ಥಿವ್ ಪಟೇಲ್ ಉತ್ತಮ ಫಾರ್ಮ್ನಲ್ಲಿದ್ದಾರೆ.
Advertisement
ಕೂಟದ ಕೊನೆಯ ಪಂದ್ಯವನ್ನು ಗೆದ್ದು ಅಭಿಮಾನಿಗಳಿಗೆ ಕೊಂಚ ಖುಷಿ ನೀಡುವುದು ಮತ್ತು ಕೂಟವನ್ನು ಗೆಲುವಿನೊಂದಿಗೆ ಮುಗಿಸುವ ಯೋಜನೆ ಕೊಹ್ಲಿ ಪಡೆಯದ್ದಾಗಿದೆ.