ನಂಜನಗೂಡು: ಕಬಿನಿ ಬಲದಂಡೆ ನಾಲೆಯ ಎಡಬದಿಯಲ್ಲಿ ಶೇಖರಣೆಗೊಂಡಿರುವ ನೀರಾವರಿ ಇಲಾಖೆಯ ಕಲ್ಲು ಬಂಡೆಗಳು ಎಂ.ಸ್ಯಾಂಡ್ ಮಾಫಿಯಾಕ್ಕೆ ಬರಿದಾಗುತ್ತಿದೆ. ಬುಧವಾರ ಸಂಜೆ ಶಾಸಕ ಹರ್ಷವರ್ಧನ್ ಅಕ್ರಮ ನಡೆಯುತ್ತಿರುವ ಈ ಸ್ಥಳಕ್ಕೆ ಭೇಟಿ ನೀಡಿ ಗುತ್ತಿಗೆದಾರರ ಮಾಫಿಯಾದ ಒಳ ಸಂಚನ್ನು ಹೊರಹಾಕಿ ಅವರ ಮೇಲೆ ಕ್ರಮ ಜರುಗಿಸಲು ಸೂಚಿಸಿದ್ದಾರೆ.
70 ರಿಂದ 80ರ ದಶಕದಲ್ಲಿ ಈ ಭಾಗದಲ್ಲಿ ನಾಲೆ ಕೊರೆಯಲಾಗಿದ್ದು, ತೆಗೆದಿದ್ದ ಕಲ್ಲಿನ ರಾಶಿ ಎಂ.ಸ್ಯಾಂಡ್ ಮಾಫಿಯಾದಿಂದ ಬರಿದಾಗಲಾರಂಭಿಸಿದೆ. ಖಾಸಗಿ ವ್ಯಕ್ತಿಗಳು ನೀರಾವರಿ ಇಲಾಖೆಗೆ ಸೇರಿದ ಈ ಬಂಡೆಗಳನ್ನು ಅನೇಕ ತಿಂಗಳುಗಳಿಂದ ಅಕ್ರಮವಾಗಿ ಲಾರಿ, ಟಿಪ್ಪರ್‌ಗಳ ಮೂಲಕ ಸಾಗಾಣಿಕೆ ಮಾಡಿ,
ಹಣ ಬಾಚಿಕೊಳ್ಳುತ್ತಿದ್ದರೆ ಕ್ರಮ ಕೈಗೊಳ್ಳಬೇಕಾದ ಇಲಾಖೆಯ ಅಧಿಕಾರಿಗಳು ಅವರೊಂದಿಗೆ ಶಾಮೀಲಾಗಿದ್ದರು ಎನ್ನಲಾಗಿದೆ. ಶಾಸಕ ಹರ್ಷವರ್ಧನ್ ಅಕ್ರಮ ಚಟುವಟಿಕೆ ನಡೆಯುತ್ತಿರುವ ಈ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಬಂಡೆಗಳ ಸಾಗಾಣಿಕೆಗೆ ಬಳಸಲಾಗುತ್ತಿದ್ದ 3 ಜೆಸಿಬಿ 4 ಲಾರಿ ಹಾಗೂ 1 ಟ್ರಾಕ್ಟರ್ ಸೇರಿದಂತೆ 4 ಮಂದಿಯನ್ನು ಗ್ರಾಮಾಂತರ ಠಾಣೆಯ ಪಿಎಸ್‌ಐ ಗಣೇಶ್ ವಶಕ್ಕೆ ಪಡೆದಿದ್ದಾರೆ.
ಶಾಸಕರು ಈ ವಾಹನಗಳ ಮಾಲೀಕತ್ವದ ಬಗ್ಗೆ ಪ್ರಶ್ನಿಸಿದಾಗ ಈ ಎಲ್ಲ ವಾಹನಗಳು ಕೃಷ್ಣಪ್ಪ ಎಂಬುವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದ್ದು, ಆ ವಾಹನಗಳ ಮಾಲೀಕರ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗೆ ಸೂಚಿಸಿದ್ದಾರೆ. ಶಾಸಕರ ಸೂಚನೆಯ ಮೇರೆಗೆ ನೀರಾವರಿ ಇಲಾಖೆ ಅಧಿಕಾರಿ ಪ್ರೇಮ್ ಕುಮಾರ್ ವಾಹನಗಳ ಮಾಲೀಕರ ಮೇಲೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ಪ್ರಾರಂಭವಾಗಿದೆ.
ನಾಲೆಯನ್ನು ನಿರ್ಮಿಸುವಾಗ ತೆಗೆಯಲಾಗಿದ್ದ ಈ ಬಂಡೆಗಳನು ಸಮೀಪದ ಎಂ.ಸ್ಯಾಂಡ್ ಘಟಕಕ್ಕೆ ಕೊಂಡೊಯ್ದು ಮರಳಿಗೆ ಪರ್ಯಾಯವೆನಿಸಿದ ಎಂ.ಸ್ಯಾಂಡ್ ನಿರ್ಮಾಣಕ್ಕೆ ಬಳಸಲಾಗುತ್ತಿತ್ತು ಎನ್ನಲಾಗಿದೆ. ಗುಣಮಟ್ಟವಿಲ್ಲದ ಶಿಲೆಯ ಎಂ.ಸ್ಯಾಂಡ್‌ನ ಸತ್ಯ ಹೊರಬೀಳಬೇಕಿದೆ.
ಈ ಅಕ್ರಮದ ತನಿಖೆ ಮುಂದುವರೆಯುವುದೋ ಅಥವಾ ತಾಲೂಕಿನಲ್ಲಿ ಹಿಂದೆ ನಡೆದ ತಾಪಂ ಅಕ್ರಮಗಳು, ಶಿಕ್ಷಣ ಇಲಾಖೆಯ ಏಪ್ರಾನ್ ಪ್ರಕರಣ, ಶ್ರೀಕಂಠೇಶ್ವರ ದೇವಸ್ಥಾನದ ಅಕ್ರಮ ರಸೀತಿ ಪ್ರಕರಣ, ಇದೇ ನೀರಾವರಿ ಇಲಾಖೆಯ ನಾಲಾ ಏರಿಯಾ ಮೇಲೆ ಬೆಳೆದು ನಿಂತ ನೂರಾರು ಮರಗಳ ಹನನದ ಪ್ರಕರಣಗಳಂತೆ ಹಳ್ಳ ಡಿಯುವುದೋ ನೋಡಬೇಕಿದೆ.