ಬೆಂಗಳೂರು: ಕಳವು ಮಾಡಿದ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಸ್ನೇಹಿತರ ನಡುವೆ ನಡೆದ ಜಗಳ ರೌಡಿಶೀಟರ್ ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಸರ್ಜಾಪುರ ಮುಖ್ಯರಸ್ತೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಬಾಣಸವಾಡಿಯ ಜಾನಕಿರಾಮ್ ಲೇಔಟ್ ನಿವಾಸಿ, ಕೋಲಾರ ಮೂಲದ ಚೆಲ್ಲಕುಮಾರ್ (33) ಕೊಲೆಯಾದ ರೌಡಿಶೀಟರ್. ಈತನ ವಿರುದ್ಧ ನಗರದ ಹತ್ತಾರು ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ 45ಕ್ಕೂ ಹೆಚ್ಚು ವಿವಿಧ ಅಪರಾಧ ಪ್ರಕರಣಗಳಿದ್ದು, ಬಾಣಸವಾಡಿ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿದೆ.
ಇತ್ತೀಚೆಗೆ ಚೆಲ್ಲಕುಮಾರ್ ತನ್ನ ಸಹಚರರ ಜತೆ ಸೇರಿ ಮನೆಗಳ್ಳತನ ಮಾಡಿದ್ದ. ಬಂದ ಹಣವನ್ನು ಸ್ನೇಹಿತರೆಲ್ಲರಿಗೂ ಸರಿಸಮನಾಗಿ ಹಂಚಬೇಕಿತ್ತಾದರೂ ಚೆಲ್ಲಕುಮಾರ್ ಹೆಚ್ಚಿನ ಪಾಲು ತನ್ನ ಬಳಿ ಇಟ್ಟುಕೊಂಡು ಸಹಚರರಿಗೆ ಕಡಿಮೆ ಕೊಟ್ಟಿದ್ದ. ಇದನ್ನು ಪ್ರಶ್ನಿಸಿದ ತನ್ನ ಸಹಚರರ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಆಕ್ರೋಶಗೊಂಡ ಸಹಚರ ನಾಗರಾಜ್ ಇತರರೊಂದಿಗೆ ಚರ್ಚಿಸಿ ಚೆಲ್ಲಕುಮಾರ್‌ನ ಕೊಲೆಗೆ ಸಂಚು ರೂಪಿಸಿದ್ದರು.
ಅದರಂತೆ ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಚೆಲ್ಲಕುಮಾರ್ ತನ್ನ ಆಲ್ಟೋ ಕಾರಿನಲ್ಲಿ ಇಬ್ಬರು ಸ್ನೇಹಿತರ ಜತೆ ಕೋಲಾರಕ್ಕೆ ಹೋಗುತ್ತಿದ್ದ ಮಾಹಿತಿ ತಿಳಿದ ಆರು ಮಂದಿ ಸ್ನೇಹಿತರು ವರ್ತೂರಿನ ಕೊಟ್ಟಿ ಗೇಟ್ ಬಳಿ ಕಾರು ಅಡ್ಡಗಟ್ಟಿದ್ದಾರೆ. ಬಳಿಕ ಚೆಲ್ಲಕುಮಾರ್‌ನನ್ನು ಕಾರಿನಿಂದ ಹೊರಗೆಳೆದು ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದಾರೆ.
ಬಳಿಕ ಕಾರಿನಲ್ಲಿದ್ದ ಆತನ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಸುಳಿವು ಲಭ್ಯವಾಗಿದ್ದು, ಸದ್ಯದಲ್ಲೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ನೆರೆ ಜಿಲ್ಲೆಗಳಲ್ಲೂ ಪ್ರಕರಣ: ಚೆಲ್ಲಕುಮಾರ್ ವಿರುದ್ಧ ಬೆಂಗಳೂರು ಮಾತ್ರವಲ್ಲದೆ, ಮೈಸೂರಿನಲ್ಲೂ ಕಳ್ಳತನ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ವಾರೆಂಟ್ ಜಾರಿಯಾಗಿತ್ತು. ಆದರೂ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಪತ್ನಿಯರು: ಚೆಲ್ಲಕುಮಾರ್‌ಗೆ ಇಬ್ಬರು ಪತ್ನಿಯರಿದ್ದು, ಬಾಣಸವಾಡಿಯಲ್ಲಿ ಮೊದಲ ಪತ್ನಿಗೆ ಬಾಡಿಗೆ ಮನೆ ಮಾಡಿಕೊಟ್ಟಿದ್ದಾನೆ. ಎರಡನೇ ಪತ್ನಿಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮನೆ ಮಾಡಿಕೊಟ್ಟಿದ್ದಾನೆ. ಇಬ್ಬರು ಪತ್ನಿಯರೂ ಮನೆ ಕೆಲಸಕ್ಕೆ ಹೋಗುತ್ತಿದ್ದಾರೆ. ಚೆಲ್ಲಕುಮಾರ್ ಕೋಲಾರದಲ್ಲಿ ರೂಂ ಮಾಡಿಕೊಂಡಿದ್ದು, ಆಗಾಗೆ ಹೋಗಿಬರುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.