ಟಿ.ದಾಸರಹಳ್ಳಿ: ಸುಲಿಗೆ, ಕೊಲೆ ಯತ್ನದಂತಹ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರನ್ನು ಪೀಣ್ಯ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ರೌಡಿ ಪಟ್ಟಿಯಲ್ಲಿರುವ ಹರೀಶ್ ಅಲಿಯಾಸ್ ರಾಬರಿ ಹರೀಶ್(23) ಬಂಧಿತ ಆರೋಪಿ. ಇತ್ತೀಚೆಗೆ ಪೀಣ್ಯ ದಾಸರಹಳ್ಳಿ ಸಮೀಪದ ಅಂಗಡಿಯೊಂದಕ್ಕೆ ನುಗ್ಗಿ, ಮಾಲೀಕನ ಮೇಲೆ ಹಲ್ಲೆ ನಡೆಸಿ ನಗದು ದೋಚಿ ಪರಾರಿಯಾಗಿದ್ದ ಹರೀಶ್‌ಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದರು.
ಖಚಿತ ಮಾಹಿತಿಯನ್ನು ಆಧರಿಸಿ ತಿರುಪತಿಯಲ್ಲಿ ತಂಗಿದ್ದ ಹರೀಶ್‌ನನ್ನು ಪೀಣ್ಯ ಇನ್ಸ್ಪೆಕ್ಟರ್ ಮುದ್ದುರಾಜ್ ನೇತೃತ್ವದ ತಂಡ ಬಂಧಿಸಿ ನಿನ್ನೆ ಠಾಣೆಗೆ ಕರೆ ತಂದಿತ್ತು. ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಚಾಕು ತೋರಿಸುವುದಾಗಿ ವಿಚಾರಣೆಯಲ್ಲಿ ಹರೀಶ್ ತಿಳಿಸಿದ್ದ ಅದರಂತೆ ಇಂದು ಬೆಳಗ್ಗೆ 6.30 ರ ಸುಮಾರಿಗೆ ಅಬ್ಬಿಗೆರೆ ಕೆರೆಯ ಸಮೀಪ ಆರೋಪಿಯನ್ನು ಕರೆತರಲಾಗಿತ್ತು. ಮಹಜರು ವೇಳೆ ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ನೀಡುವುದಾಗಿ ತಿಳಿಸಿ ಪೇದೆ ಲಕ್ಷ್ಮೀನಾರಾಯಣ, ಮುಖ್ಯ ಪೇದೆ ರವಿ ಕುಮಾರ್ ಹಾಗೂ ಪಿಎಸ್‌ಐ ರಘು ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.
ಕೂಡಲೇ ಇನ್ಸ್‌ಪೆಕ್ಟರ್ ಮುದ್ದುರಾಜ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ತಿಳಿಸಿದ್ದಾರೆ. ಇದನ್ನು ಲೆಕ್ಕಿಸದೆ ಹಿಡಿಯಲು ಬಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದು, ಇಬ್ಬರು ಪೇದೆಗಳ ಕೈಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಆಗ ಸಿಬ್ಬಂದಿ ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದಾರೆ. ಗುಂಡು ರೌಡಿ ಹರೀಶ್ ಬಲಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ಪೊಲೀಸರು ಬಂಧಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೌಡಿಶೀಟರ್ ಯುವರಾಜ್‌ನ ಸಹಚರ: ಐದಾರು ವರ್ಷಗಳಿಂದ ಕಳ್ಳತನ ಸುಲಿಗೆ ಕೊಲೆ ಯತ್ನದಂತಹ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದ ಹರೀಶ್ ರೌಡಿ ಶೀಟರ್ ಯುವರಾಜ್ ಸಹಚರ ನಾಗಿದ್ದು ಈ ಭಾಗದಲ್ಲಿ ರಾಬರಿ ಹರೀಶ್ ಎಂದೇ ಕುಖ್ಯಾತನಾಗಿದ್ದ. ನಂದಿನಿ ಲೇಔಟ್, ಪೀಣ್ಯ, ರಾಜಗೋಪಾಲನಗರ ಹಾಗೂ ದಾವಣಗೆರೆ ಹಾಗೂ ಇತರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹತ್ತಾರು ಪ್ರಕರಣಗಳು ಹರೀಶ್ ವಿರುದ್ಧ ದಾಖಲಾಗಿವೆ. ಜತೆಗೆ ಮೂರ್ನಾಲ್ಕು ಬಾರಿ ಜೈಲಿಗೂ ಹೋಗಿ ಬಂದಿದ್ದರೂ ಆತ ಇನ್ನೂ ಸುಧಾರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.