ಬೆಂಗಳೂರು: ನಗರದ ಜಯನಗರ ಪೊಲೀಸ್ ಠಾಣೆಯ ರೌಡಿಶೀಟರ್ ಸುರೇಶ್ ಬಾಬು ಅಲಿಯಾಸ್ ಅಲ್ಯೂಮಿನಿಯಂ ಬಾಬು(46) ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಸಮೀಪದ ಅರಣ್ಯ ಪ್ರದೇಶದಲ್ಲಿ ಹತ್ಯೆಗೈಯಲಾಗಿದ್ದು, ಮೃತದೇಹ ಪತ್ತೆಯಾಗಿದೆ.
ಕೆಂಗೇರಿ ಸಮೀಪದ ಕೆಎಚ್‌ಬಿ ಕಾಲೊನಿಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ ಚಂದನಾ ಮತ್ತು ಮಗಳ ಜತೆ ವಾಸವಾಗಿದ್ದ ಸುರೇಶ್‌ಬಾಬು, ರಿಯಲ್ ಎಸ್ಟೇಟ್, ಹಾಲೋ ಬ್ರಿಕ್ಸ್ ಮತ್ತು ಹಳೆ ಕಾರುಗಳ ಮಾರಾಟ ವ್ಯವಹಾರ ಮಾಡುತ್ತಿದ್ದ. ಅಪರಾಧ ಹಿನ್ನೆಲೆಯುಳ್ಳ ಸುರೇಶ್‌ಬಾಬು ವಿರುದ್ಧ ಜಯನಗರ, ವಿಲ್ಸನ್ ಗಾರ್ಡನ್, ತಿಲಕ್‌ನಗರ, ಬನಶಂಕರಿ ಸೇರಿ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಜಯನಗರ ಠಾಣೆ ಈತನ ವಿರುದ್ಧ ರೌಡಿಪಟ್ಟಿ ತೆರೆಯಲಾಗಿದೆ.
ಸುರೇಶ್ ಬಾಬು, ಮೇ 16ರಂದು ಬೆಳಗ್ಗೆ ಸ್ನೇಹಿತನ ಜತೆ ಕಾರಿನಲ್ಲಿ ಮನೆಯಿಂದ ಹೊರ ಹೋಗಿದ್ದ. ಬಳಿಕ 2 ದಿನ ಕಳೆದರೂ ವಾಪಸ್ ಬಂದಿರಲಿಲ್ಲ. ಅದರಿಂದ ಆತಂಕಗೊಂಡ ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ, ಸುರೇಶ್‌ಬಾಬು ಪತ್ನಿ ಚಂದನಾ ಮೇ 18 ರಂದು ಕೆಂಗೇರಿ ಠಾಣೆಯಲ್ಲಿ ಪತಿ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು. ಈ ಮಧ್ಯೆ ಶನಿವಾರ ತಮಿಳುನಾಡಿನ ಡೆಂಕಣಿಕೋಟೆ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಸುರೇಶ್‌ಬಾಬು ಶವ ಪತ್ತೆಯಾಗಿದೆ.
ದುಷ್ಕರ್ಮಿಗಳು ಸುರೇಶ್‌ಬಾಬುನನ್ನು ಅಪಹರಿಸಿ ಕೊಲೆ ಮಾಡಿ ಶವವನ್ನು ಪ್ಲಾಸ್ಟಿಕ್ ಚೀಲಕ್ಕೆ ಹಾಕಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಈ ಸಂಬಂಧ ತಮಿಳುನಾಡಿನ ತಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸರು ಹೇಳಿದರು.
ಸುರೇಶ್‌ಬಾಬು ಮೇ 16ರಂದು ಬೆಳಗ್ಗೆ 10.18ಕ್ಕೆ ಕೆಎಚ್‌ಬಿ ಕಾಲೊನಿಯ ಅಪಾರ್ಟ್‌ಮೆಂಟ್‌ನಿಂದ ಸ್ನೇಹಿತನ ಜತೆ ಕಾರಿನಲ್ಲಿ ಹೋಗಿರುವ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಳಿಕ ಸ್ವಲ್ಪ ಸಮಯದಲ್ಲೇ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆ ಬಳಿಕ ಶನಿವಾರ ಬಳಿ ಪೊಲೀಸರು ಸುರೇಶ್‌ಬಾಬು ಕೊಲೆಯಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಹಣಕಾಸು ವಿಚಾರ ಮತ್ತು ಹಳೇ ದ್ವೇಷಕ್ಕೆ ಕೊಲೆಯಾಗಿರುವ ಸಾಧ್ಯತೆಯಿದೆ. ಹೆಚ್ಚಿನ ಮಾಹಿತಿಯನ್ನು ತಳಿ ಠಾಣೆ ಪೊಲೀಸರಿಂದ ಪಡೆಯಬೇಕಿದೆ ಎಂದು ಪೊಲೀಸರು ಹೇಳಿದರು.
ಪ್ರಭಾವಿಗಳನ್ನು ಎದುರು ಹಾಕಿಕೊಂಡಿದ್ದ ಬಾಬು: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಸುರೇಶ್‌ಬಾಬು, ಚಂದನಾರನ್ನು ಪ್ರೀತಿಸಿ ವಿವಾಹವಾಗಿದ್ದ. ಕುಖ್ಯಾತ ರೌಡಿಗಳಾಗಿದ್ದ ಅರಸಯ್ಯ ಮತ್ತು ಜಲ್ಲಿ ವೆಂಕಟೇಶ್ ಜತೆ ಗುರುತಿಸಿಕೊಂಡಿದ್ದ ಸುರೇಶ್‌ಬಾಬು, ಕೊಲೆ, ಸುಲಿಗೆ, ಬೆದರಿಕೆ, ದರೋಡೆಯಂತಹ ಕೃತ್ಯಗಳನ್ನು ಎಸಗಿದ್ದ. ಕೊತ್ತನೂರು ದಿಣ್ಣೆಯಲ್ಲಿ ಹಾಲೋಬ್ರಿಕ್ಸ್ ಕಾರ್ಖಾನೆ ನಡೆಸುತ್ತಿದ್ದ ಸುರೇಶ್‌ಬಾಬು, ಹಣಕಾಸು ವ್ಯವಹಾರದ ಸಂಬಂಧ ಸಾಕಷ್ಟು ಜನರೊಂದಿಗೆ ದ್ವೇಷ ಕಟ್ಟಿಕೊಂಡಿದ್ದ. ನಗರದ ಪ್ರಭಾವಿ ಜನಪ್ರತಿನಿಧಿಗಳು ಸೇರಿ ಹಲವು ರಾಜಕಾರಣಿಗಳನ್ನು ಎದುರು ಹಾಕಿಕೊಂಡಿದ್ದ ಎನ್ನಲಾಗಿದೆ.