Advertisement

ಅಪರಾಧ ಪ್ರಕರಣ: 8 ವರ್ಷದ ಬಳಿಕ ರೌಡಿಶೀಟರ್‌ ಸೆರೆ

02:42 PM Sep 03, 2021 | Team Udayavani |

ಬೆಂಗಳೂರು: ಗಾಂಜಾ ಮಾರಾಟ, ಕೊಲೆ ಯತ್ನ, ಸುಲಿಗೆ, ದರೋಡೆ ಸೇರಿ 16ಕ್ಕೂ ವಿವಿಧ ಅಪರಾಧ ಪ್ರಕರಣಗಳ ಮೋಸ್ಟ್‌ ವಾಡೆಂಟ್‌ ರೌಡಿಶೀಟರ್‌ ಹಾಗೂ ಆತನ ಸಹೋದರನನ್ನು ಪಶ್ಚಿಮ ವಿಭಾಗದ ಪೊಲೀಸರು ಎಂಟು ವರ್ಷಗಳ ಬಳಿಕ ಬಂಧಿಸಿದ್ದಾರೆ.

Advertisement

ಉಳ್ಳಾಲ ನಿವಾಸಿ ಹಮೀದ್‌(35) ಮತ್ತು ಆತನ ಸಹೋದರ ಸಾದಿಕ್‌(24) ಬಂಧಿತರು. ಸಹೋದರರು ಸುಮಾರು ಎಂಟು ವರ್ಷಗಳಿಂದ ಜ್ಞಾನಭಾರತಿ, ಅನ್ನಪೂರ್ಣೇಶ್ವರಿನಗರ, ಬ್ಯಾಡರಹಳ್ಳಿ ಠಾಣೆಗಳ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ, ಕೊಲೆ, ಕೊಲೆ ಯತ್ನ, ಸುಲಿಗೆ ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

ಈ ಪೈಕಿ ಹಮೀದ್‌ ಉಳ್ಳಾಲ ವ್ಯಾಪ್ತಿಯಲ್ಲಿ ತನ್ನದೆ ರೌಡಿಪಡೆ ಕಟ್ಟಿಕೊಂಡು ಗಾಂಜಾ ಮಾರಾಟ ದಂಧೆಯನ್ನೆ ವೃತ್ತಿಯನ್ನಾಗಿಸಿಕೊಂಡಿದ್ದ. ತಮಿಳುನಾಡು,ಆಂಧ್ರಪ್ರದೇಶ ಸೇರಿ ವಿವಿಧ ರಾಜ್ಯಗಳಿಂದ ಗಾಂಜಾ ತರಿಸಿಕೊಂಡು ನಗರ ಹೊರವಲಯದ ಮನೆಯೊಂದರಲ್ಲಿ ಶೇಖರಿಸುತ್ತಿದ್ದ. ಇಲ್ಲಿಂದ ನಗರದ ಬೇರೆ ಬೇರೆ ಪ್ರದೇಶಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ. ಅದಕ್ಕಾಗಿ ತಂಡಕಟ್ಟಿಕೊಂಡಿದ್ದು, ಆತನ ತಂಡ ಗಾಂಜಾವನ್ನು ಸಣ್ಣ-ಸಣ್ಣ ಪ್ಯಾಕೇಟ್‌ಗಳಲ್ಲಿ ತುಂಬಿ ಮಾರಾಟ ಮಾಡುತ್ತಿತ್ತು ಎಂದು ಪೊಲೀಸರು ಹೇಳಿದರು.

ಕಳೆದ ವರ್ಷ ಉಳ್ಳಾಲ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡ್ರಗ್ಸ್‌ ಚಟುವಟಿಕೆ ಹೆಚ್ಚಾಗಿತ್ತು. ಜತೆಗೆ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಖುದ್ದು ಸ್ಥಳೀಯರ ಕುಂದು-ಕೊರತೆ ಆಲಿಸಿದಾಗ ಡ್ರಗ್ಸ್‌ ಚಟುವಟಿಕೆಗಳ ಬಗ್ಗೆ ದೂರು ಕೇಳಿಬಂದಿದ್ದವು. ಈ ಸಂಬಂಧ ದಂಧೆಕೋರರ ಬಂಧನಕ್ಕೆ ಸೂಚಿಸಿದ್ದರು. ಈ ಸಂಬಂಧ ಕೆಂಗೇರಿ ಉಪವಿಭಾಗದ ಎಸಿಪಿ ಕೃಷ್ಣಕುಮಾರ್‌ ನೇತೃತ್ವದಲ್ಲಿ ಜ್ಞಾನಭಾರತಿ ಠಾಣೆಯ ಇನ್ಸ್‌ಸ್ಪೆಕ್ಟರ್‌ ಲಕ್ಷ್ಮಣ್‌ ನಾಯಕ್‌ ಹಾಗೂ ಅನ್ನಪೂರ್ಣೇಶ್ವರಿ ನಗರ ಠಾಣೆಯ ಇನ್ಸ್‌ಸ್ಪೆಕ್ಟರ್‌ ಲೋಹಿತ್‌ ಕುಮಾರ್‌ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ
ತಂಡ ಕಳೆದ ವರ್ಷ ಹಮೀದ್‌ನ ಸಹಚರ ಕಾರ್ತಿಕ್‌ ಅಲಿಯಾಸ್‌ ಉಳ್ಳಾಲ ಕಾರ್ತಿಕ್‌ನನ್ನು ಬಂಧಿಸಿತ್ತು.

ಇದನ್ನೂ ಓದಿ:ಕುಡಿಯುವ ನೀರಿಗೆ ಸೇರುತ್ತಿದೆ ಕೋಳಿ ತ್ಯಾಜ್ಯ: ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಜನತೆ

Advertisement

ಇತ್ತೀಚೆಗೆ ಆತನ ಸಹಚರರನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು. ಹೀಗಾಗಿ ಎಂಟು ತಿಂಗಳಿಂದ ಉಳ್ಳಾಲ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ಕಡಿಮೆಯಾಗಿದ್ದವು. ಆದರೆ, ಹಮೀದ್‌ ಮತ್ತು ಆತನ ಸಹೋಹದರ ಸಾದಿಕ್‌ ನೆರೆ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದರು. ಅವರ ಬಂಧನಕ್ಕಾಗಿ ಈ ವಿಶೇಷ ತಂಡ ಕಳೆದ ಆರು ತಿಂಗಳಿಂದ ನಿರಂತರ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದರು. ಆರೋಪಿ ಹಮೀದ್‌ಗೆ ಇಬ್ಬರು ಪತ್ನಿಯರು,ಏಳು ಮಕ್ಕಳಿದ್ದಾರೆ.

ನೆರೆ ರಾಜ್ಯಗಳಲ್ಲಿ ಆಶ್ರಯ
ಸಹಚರರ ಹೇಳಿಕೆಯನ್ನಾಧರಿಸಿ ಆರೋಪಿಗಳ ಬಂಧನಕ್ಕೆ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಶೋಧಕ್ಕೆ ತೆರಳಿದಾಗ ಒಂದೆಡೆಯಿಂದ ಮತ್ತೊಂದೆಡೆ ತಲೆಮರೆಸಿಕೊಳ್ಳುತ್ತಿದ್ದರು. ಈ ಮಧ್ಯೆ ಉಳ್ಳಾಲದಲ್ಲಿ ಸರ್ಕಾರದಿಂದ ಮಂಜೂರಾದ ಮನೆ ನಿರ್ಮಾಣಕ್ಕೆ ಆತನ ಕುಟುಂಬ ಮುಂದಾಗಿತ್ತು. ಹೀಗಾಗಿ ಇಬ್ಬರು ಸಹೋದರರುಕೆಲ ದಿನಗಳ ಹಿಂದೆ ಬಂದಿದ್ದು, ಬುಧವಾರ ಉಳ್ಳಾಲ ಕೆರೆ ಸಮೀಪದಲ್ಲಿ ಅಡಗಿರುವ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿ ಹಮೀದ್‌ ವಿರುದ್ಧ ಕೊಲೆ, ಕೊಲೆಯತ್ನ, ಡಕಾಯಿತಿ ಯತ್ನ, ಸುಲಿಗೆ, ಬೆದರಿಕೆ, ಸೇರಿ 16 ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ.ಈತನ ಬಂಧನದಿಂದ ತಾವರೆಕೆರೆ,ಕುಂಬಳಗೋಡು, ಬ್ಯಾಡರಹಳ್ಳಿ, ಜ್ಞಾನಭಾರತಿ ಸೇರಿ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 16 ಅಪರಾಧ ಪ್ರಕರಣಗಳು ಪತ್ತೆಯಾಗಿವೆ. ಆತನ ಸಹೋದರ ಸಾಧಿಕ್‌ ವಿರುದ್ಧ ದಾಖಲಾಗಿದ್ದ ನಾಲ್ಕು ಪ್ರಕರಣ ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್‌ ಎಂ.ಪಾಟೀಲ್‌, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲದಲ್ಲಿ ಗಾಂಜಾ ಮಾರಾಟ, ರೌಡಿ ಚಟುವಟಿಕೆಗಳು ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಉಳ್ಳಾಲದ ಕೆಲವೆಡೆ ದಾಳಿ ನಡೆಸಲಾಗಿತ್ತು.
ಅಲ್ಲದೆ, ಬಾತ್ಮೀದಾರರ ಮೂಲಕ ಖಾಲಿ ಪ್ರದೇಶಗಳಲ್ಲಿ ಗಾಂಜಾ ಪೂರೈಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಈ ಪ್ರದೇಶದಲ್ಲಿ ಬಿಬಿಎಂಪಿಯಿಂದ ಒಂದು ಪೋಸ್ಟ್‌ ನಿರ್ಮಾಣ ಮಾಡಲಾಗಿತ್ತು. ಪೊಲೀಸ್‌ ಗಸ್ತು ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.

ತೂಕದ ಯಂತ್ರದಲ್ಲಿ ವಂಚನೆ
ಬೆಂಗಳೂರು: ತೂಕದ ಯಂತ್ರದಲ್ಲಿರುವ ಸಂಖ್ಯೆಗಳನ್ನು ಅಕ್ರಮವಾಗಿ ಬದಲಾಯಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಮೂವರು
ಆರೋಪಿಗಳನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.

ರವೀಂದ್ರ, ನಾಗೇಶ್‌ ಹಾಗೂ ರಾಘವೇಂದ್ರ ಎಂಬುವರನ್ನು ಬಂಧಿಸಲಾಗಿದೆ. ತೂಕ ಯಂತ್ರದ ತಂತ್ರಜ್ಞಾನವನ್ನು ಬದಲಿಸಿ ಸಂಖ್ಯೆಗಳನ್ನು ತಮ್ಮಿಷ್ಟದಂತೆ ಮಾರ್ಪಡಿಸಿ ಜನರನ್ನು ವಂಚಿಸಲಾಗುತ್ತಿತ್ತು. ಮಾನ್ಯತೆ ಪಡೆದ ಕಂಪನಿಯಿಂದ ಖರೀದಿಸಿದ್ದ ಯಂತ್ರಗಳನ್ನು ಅಕ್ರಮವಾಗಿ ಮಾರ್ಪಡಿಸುತ್ತಿದ್ದ ಆರೋಪದಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ವಿಚಾರಣೆಗೆ ಬರುವಂತೆ ಅಂಗಡಿಗಳ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next