ನೆಲಮಂಗಲ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿ ಶೀಟರ್ ಪುಟ್ಟರಾಜುನನ್ನು ಹಸಿರುವಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಹಂತಕರು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ತಾಲೂಕಿನ ತ್ಯಾಮಗೊಂಡ್ಲು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ: ಕಳೆದ 2 ವರ್ಷಗಳ ಹಿಂದೆ ಉಮೇಶ್ ಎಂಬಾತನಿಗೆ ಪುಟ್ಟರಾಜು ಚಾಕುಹಾಕಿದ್ದ ಎನ್ನಲಾಗಿದ್ದು ತನ್ನ ಹಳೆಯದ್ವೇಷ ತೀರಿಸಿಕೊಳ್ಳಲು ಸ್ನೇಹಿತರಾದ ಹನುಮಂತರಾಯಪ್ಪ ಹಾಗೂ ರಾಜೇಶ್ ಜೊತೆ ಸೇರಿ ಭಾನುವಾರ ರಾತ್ರಿ ಪುಟ್ಟರಾಜು ಮೇಲೆ ಜಗಳ ಮಾಡಿ ಗ್ರಾಮದ ಬಸ್ ನಿಲ್ದಾಣದ ಬಳಿ ಆತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕುತ್ತಿಗೆ ಭಾಗಕ್ಕೆ ಚಾಕುನಿಂದ ತಿವಿದು ಹತ್ಯೆಗೈದು ಪರಾರಿಯಾಗಿದ್ದಾರೆ.
ತ್ಯಾಮಗೊಂಡ್ಲು ಹೋಬಳಿಯ ಹಸಿರುಹಳ್ಳಿ ಗ್ರಾಮದ ನಿವಾಸಿ ಪುಟ್ಟರಾಜು ಕಳೆದ 5-6 ವರ್ಷಗಳಿಂದ ಗ್ರಾಮದಲ್ಲಿ ಅನೇಕ ಕೃತ್ಯಗಳನ್ನು ಮಾಡಿಕೊಂಡು ಗ್ರಾಮಸ್ಥರನ್ನು ಹೆದರಿಸಿಕೊಂಡಿದ್ದ. ಕಳೆದ 2 ವರ್ಷಗಳ ಹಿಂದೆ ಗ್ರಾಮದ ನಿವಾಸಿ ಉಮೇಶನಿಗೆ ಚಾಕು ಹಾಕಿ ಸಿಕ್ಕಿಹಾಕಿಕೊಂಡಿದ್ದ ಈತ, ನಂತರ 3-4 ಪ್ರಕರಣಗಳಲ್ಲಿ ಠಾಣೆ ಮೆಟ್ಟಿಲೇರಿದ್ದ. ಗ್ರಾಮದ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಿಂದ 2017ರಲ್ಲಿ ಈತನ ವಿರುದ್ಧ ತ್ಯಾಮಗೊಂಡ್ಲು ಠಾಣೆಯಲ್ಲಿ ಪೊಲೀಸರು ರೌಡಿಶೀಟ್ ತೆರೆದಿದ್ದರು.
ಗಡಿಪಾರಿಗೆ ಆಗ್ರಹಿಸಿದ್ದರು: ಕೊಲೆಯಾದ ಪುಟ್ಟರಾಜುನನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ತ್ಯಾಮಗೊಂಡ್ಲು ಠಾಣೆ ಪಿಎಸ್‌ಐ ಮಂಜೇಗೌಡ ಇಲಾಖೆ ಮೇಲಿನ ಅಧಿಕಾರಿಗಳಿಗೆ ಈ ಹಿಂದೆಯೇ ಪತ್ರ ಬರೆದಿದ್ದರು. ಆತನನ್ನು ಗಡಿಪಾರು ಮಾಡುವ ಮೊದಲೇ ರೌಡಿ ಪುಟ್ಟರಾಜು ಹತ್ಯೆಯಾಗಿ ಹೋಗಿದ್ದಾನೆ.
ಬಂಧನ: ರಾತ್ರಿ ಕೊಲೆಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ ಉಮೇಶ್ ಸೋಮವಾರ ಮುಂಜಾನೆಯೇ ಪೊಲೀಸರು ಬೀಸಿದ ಬಲೆಗೆ ಬಿದ್ದಿದ್ದಾನೆ. ಇನ್ನು ಉಳಿದ ಆರೋಪಿಗಳಾದ ಜಕ್ಕನಹಳ್ಳಿ ರಾಜೇಶ ಮತ್ತು ಹನುಮಂತರಾಯಪ್ಪ ತಲೆ ಮರೆಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ತ್ಯಾಮಗೊಂಡ್ಲು ಪೊಲೀಸರು ಇನ್ನುಳಿದ ಆರೋಪಿಗಳಾದ ರಾಜೇಶ್ ಮತ್ತು ಹನುಮಂತರಾಯಪ್ಪನಿಗೆ ಬಲೆ ಬೀಸಿದ್ದಾರೆ.