Advertisement

ಹಳಿ ತಪ್ಪಿದ ಉತ್ಕಾಲ್‌ ಎಕ್ಸ್‌ಪ್ರೆಸ್‌ 23 ಬಲಿ

07:40 AM Aug 20, 2017 | Harsha Rao |

ಮುಜಾಫ‌ರನಗರ: ಉತ್ತರಪ್ರದೇಶದ ಮುಜಾಫ‌ರನಗರದಲ್ಲಿ ಶನಿವಾರ ಸಂಜೆ ಭೀಕರ ರೈಲು ದುರಂತ ಸಂಭವಿಸಿ, ಕನಿಷ್ಠ 23 ಮಂದಿ ಸಾವಿಗೀಡಾಗಿದ್ದಾರೆ. ಪುರಿ-ಹರಿದ್ವಾರ ಉತ್ಕಾಲ್‌ ಎಕ್ಸ್‌ಪ್ರೆಸ್‌ನ 14 ಬೋಗಿಗಳು ಹಳಿ ತಪ್ಪಿದ ಪರಿಣಾಮ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Advertisement

ಶನಿವಾರ ಸಂಜೆ 5.45ರ ವೇಳೆಗೆ ಮುಜಾ ಫ‌ರನಗರದಿಂದ 40 ಕಿ.ಮೀ. ದೂರದಲ್ಲಿನ ಖಟೌಲಿ ಎಂಬಲ್ಲಿ ಈ ದುರಂತ ಸಂಭವಿಸಿದ್ದು, ಹಳಿತಪ್ಪಿದ ಬೋಗಿಗಳು ಸುತ್ತಮುತ್ತಲಿದ್ದ ಮನೆಗಳ ಮೇಲೆ ಹೋಗಿ ಬಿದ್ದಿವೆ. ಇದರಿಂದಾಗಿ ಹಲವು ಮನೆಗಳಿಗೂ ಹಾನಿಯಾಗಿವೆ. ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ಜತೆಗೆ, ಸರಕಾರವು ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಘಟನೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ರೈಲ್ವೆ ಸಚಿವ ಸುರೇಶ್‌ ಪ್ರಭು ಅವರು ತನಿಖೆಗೆ ಆದೇಶಿಸಿದ್ದಾರೆ. ಏನಾದರೂ ಲೋಪಗಳು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದ್ದಾರೆ. ರೈಲ್ವೆ ಖಾತೆ ಸಹಾಯಕ ಸಚಿವ ಮನೋಜ್‌ ಸಿನ್ಹಾ, ರೈಲ್ವೆ ಮಂಡಳಿ ಮುಖ್ಯಸ್ಥರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನೋಡಿ ಕೊಳ್ಳುತ್ತಿದ್ದಾರೆ ಎಂದೂ ಸಚಿವ ಪ್ರಭು ಟ್ವೀಟಿಸಿದ್ದಾರೆ. ಜತೆಗೆ, ಮೃತರ ಕುಟುಂಬಗಳಿಗೆ ತಲಾ 3.5 ಲಕ್ಷ ರೂ, ಗಂಭೀರ ಗಾಯಗೊಂಡವರಿಗೆ 50 ಸಾವಿರ ರೂ., ಅಲ್ಪಪ್ರಮಾಣದಲ್ಲಿ ಗಾಯಗೊಂಡವರಿಗೆ 25 ಸಾವಿರ ಪರಿಹಾರ ವನ್ನೂ ಘೋಷಿಸಿದ್ದಾರೆ. ಇನ್ನೊಂದೆಡೆ ಒಡಿಶಾ ಸರಕಾರವೂ ಮೃತರಿಗೆ ತಲಾ 5 ಲಕ್ಷ, ಗಾಯಾಳುಗಳಿಗೆ 50 ಸಾವಿರ ಪರಿಹಾರ ಘೋಷಿಸಿದೆ. ಕತ್ತಲಾದ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಇದೇ ವೇಳೆ, ಉತ್ತರಪ್ರದೇಶ ಸಿಎಂ ಯೋಗಿ ಅವರು ತಮ್ಮ ಇಬ್ಬರು ಸಚಿವರನ್ನು ಸ್ಥಳಕ್ಕೆ ಕಳುಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next