Advertisement
ಗ್ರಾಹಕ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಸಕಾಲ, ಬ್ಯಾಂಕಿಂಗ್ ಒಂಬುಡ್ಸ್‌ಮನ್ ಥರಹದ ಹಲವಾರು ಅರೆನ್ಯಾಯಿಕ ವ್ಯವಸ್ಥೆಗಳು ನಮ್ಮಲ್ಲಿವೆ. ಅವುಗಳನ್ನು ಹುಟ್ಟುಹಾಕಲು ಅಗತ್ಯವಾದ ಕಾಯ್ದೆಗಳನ್ನು ಮಾಡಲಾಗಿದೆ. ಕಾನೂನಿನ ಬಲ ಇದ್ದರೂ, ಹಲವು ಸಂದರ್ಭಗಳಲ್ಲಿ ನ್ಯಾಯ ವ್ಯವಸ್ಥೆ ಸಂತ್ರಸ್ತರ ಪರ ಬರುವುದು ನಿರೀಕ್ಷಿತವಲ್ಲ. ಒಂದು ಸಾಮಾನ್ಯ ಸತ್ಯಕ್ಕೆ ಹೊರತಾದ ವಿಚಾರದಲ್ಲಿ ತೀರ್ಪು ಕೊಡಲು ನ್ಯಾಯ ವ್ಯವಸ್ಥೆಗಳು ಹಿಂದಿನ ತೀರ್ಪಿನ ಅನುಸರಣೆಗೆ ಒತ್ತು ನೀಡುತ್ತವೆ. ಅಂತಹವಿದ್ದರೆ ನ್ಯಾಯ ತೀರ್ಪು ಸುಲಭ.
ಮಾಲೀಕತ್ವ ಬದಲಾಗದ ವಿಮೆ!: ಮೋಹನ, ತೀರ್ಥಹಳ್ಳಿ ನಿವಾಸಿ. ಅವರು ಮಾರುತಿ ಓಮ್ನಿ ಕಾರ್‌ಅನ್ನು ಸಾಗರದ ವೆಂಕಪ್ಪಗೌಡರಿಂದ 2006ರಲ್ಲಿ ಖರೀದಿಸುತ್ತಾರೆ. ಮಾಲೀಕತ್ವವನ್ನು(ಆರ್‌ಸಿ) ತಮ್ಮ ಹೆಸರಿಗೆ ಬದಲಾಯಿಸಿಕೊಳ್ಳುತ್ತಾರೆ. ಕಾರಣಾಂತರದಿಂದ ವಾಹನ ವಿಮೆ ಅವರ ಹೆಸರಿಗೆ ವರ್ಗಾವಣೆಗೊಂಡಿರುವುದಿಲ್ಲ. 2006ರ ಜೂನ್ ಹದಿನೇಳರಂದು ಅಪಘಾತದಲ್ಲಿ ಅವರ ಕಾರು ಜಖಂಗೊಳ್ಳುತ್ತದೆ. ಶಿವಮೊಗ್ಗದ ದಿ ಓರಿಯಂಟಲ್ ವಿಮಾ ಕಂಪನಿಗೆ ಮಾಹಿತಿ ನೀಡಿ ವಾಹನ ತಪಾಸಣೆ ಮಾಡಲು ವಿನಂತಿಸುತ್ತಾರೆ. ಅವರ ಪ್ರತಿನಿಧಿ ವಾಹನವನ್ನು ಪರಿಶೀಲಿಸಿ ದುರಸ್ತಿಗೆ ಅಂದಾಜು 22,147 ರೂ.ಗಳು ಆಗಬಹುದೆಂದು ತಿಳಿಸುತ್ತಾರೆ. ಅವರು ಅಧಿಕೃತ ಸೇವಾಕೇಂದ್ರದಲ್ಲಿ ದುರಸ್ತಿ ಮಾಡಿಸಿ ಒಟ್ಟು ವೆಚ್ಚ 40,832 ರೂ.ಗಳನ್ನು ಪಾವತಿಸಿದ ನಂತರ ದುರಸ್ತಿ ವೆಚ್ಚ ಭರಿಸಲು ಅಗತ್ಯ ದಾಖಲೆಗಳೊಂದಿಗೆ ಮನವಿಯನ್ನು ಸಲ್ಲಿಸುತ್ತಾರೆ.
Related Articles
Advertisement
ತಮ್ಮ ಅನಾರೋಗ್ಯದ ಕಾರಣ ಅರ್ಜಿ ಸಲ್ಲಿಕೆ ತಡವಾಗಿದೆ. ಇದನ್ನು ಮನ್ನಿಸಿ ತಮಗೆ ವಿಮೆ ಕೊಡಿಸಿ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಮೋಹನ್ ದೂರನ್ನು ಸಲ್ಲಿಸುತ್ತಾರೆ. ತಡವಾದ ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಧೀಶರು ದೂರುದಾರರ ಮತ್ತು ವಿಮಾ ಕಂಪನಿಯ ದಾಖಲಾತಿಗಳನ್ನು ವಿವರವಾಗಿ ಪರಿಶೀಲಿಸುತ್ತಾರೆ.
ವಿಮಾ ಪಾಲಿಸಿಯ ನಿಯಮದಂತೆ ವಾಹನ ವರ್ಗಾವಣೆಗೊಂಡ ಹದಿನಾಲ್ಕು ದಿನಗಳೊಳಗಾಗಿ ವಿಮೆಯನ್ನೂ ಸಹ ವರ್ಗಾಯಿಸಿಕೊಳ್ಳಬೇಕಿತ್ತು. ಈಗಿನ ಮಾಲೀಕರು ಹಾಗೆ ಮಾಡದೆ ತಪ್ಪೆಸಗಿದ್ದಾರೆ. ಈ ಕಾರಣದಿಂದ ವಿಮಾ ಪಾವತಿಗೆ ಮೋಹನ ಅರ್ಹರಲ್ಲ ಎಂದು ಕಂಪನಿ ವಾದಿಸುತ್ತದೆ. ಮೋಟಾರು ವಾಹನ ನಿಯಮಾವಳಿಯಂತೆ ವಾಹನದ ಮಾಲೀಕತ್ವ ವರ್ಗಾವಣೆಗೊಂಡ ಕೂಡಲೇ ವಾಹನ ವಿಮೆಯೂ ಕೂಡ ವರ್ಗಾವಣೆಗೊಂಡಂತೆ.
ದಾಖಲೆಗಳಲ್ಲಿ ತಿದ್ದುಪಡಿ ಮಾಡಲು 14 ದಿನಗಳ ಕಾಲಾವಕಾಶ ನೀಡಲಾಗಿದೆ ಹಾಗೂ ರಾಜ್ಯ ಉತ್ಛ ನ್ಯಾಯಾಲಯ ಸಹ ಹಲವಾರು ಪ್ರಕರಣಗಳಲ್ಲಿ ಇದನ್ನು ಧೃಡೀಕರಿಸಿದೆ. ಈ ಆಧಾರದ ಮೇಲೆ ವಿಮಾ ಕಂಪನಿ ವಿಮೆ ತಿರಸ್ಕರಿಸಿರುವುದು ಖಂಡನೀಯ. ಅಲ್ಲದೇ ದೂರುದಾರರಿಗೆ ಅವರ ವಿಮಾ ಕೋರಿಕೆಯನ್ನು ತಿರಸ್ಕರಿಸಿದ್ದಕ್ಕೆ ಯಾವುದೇ ಪತ್ರ ಬರೆಯದೇ ಹಿಂದಿನ ಮಾಲೀಕರಿಗೆ ಒಂದು ಪತ್ರ ಬರೆದು ಪ್ರಕರಣವನ್ನು ಮುಕ್ತಾಯ ಮಾಡಿರುವುದೂ ಸಹ ಸರಿಯಲ್ಲ.
ದೂರುದಾರರಿಗೆ ಪೂರ್ಣ ಮಾಹಿತಿ ನೀಡಿ, ಅಗತ್ಯ ದಾಖಲಾತಿಗಳನ್ನು ಪಡೆಯುವುದು ವಿಮಾ ಕಂಪನಿಯ ಜವಾಬ್ದಾರಿಯಾಗಿತ್ತು. ಅದನ್ನು ಅದು ನಿರ್ವಹಿಸಿಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಿ ಈ ಕೆಳಗಿನಂತೆ ತೀರ್ಪು ನೀಡಲಾಯಿತು.
ತೀರ್ಪು: ವಾಹನದ ದುರಸ್ತಿ ವೆಚ್ಚ 22147.65 ರೂ.ಗಳನ್ನು 2006 ಮೇ ಹದಿನೇಳರಿಂದ ಶೇ. 10ರ ಬಡ್ಡಿಯೊಂದಿಗೆ 30 ದಿನಗಳೊಳಗಾಗಿ ಪಾವತಿಸಬೇಕು. ಸೇವಾ ನ್ಯೂನ್ಯತೆಗಾಗಿ ರೂ. 3000 ಹಾಗೂ ವ್ಯಾಜ್ಯದ ಖರ್ಚು ರೂ. 1000ನ್ನು ಪಾವತಿಸಬೇಕು. ಸಿಸಿ ನಂ 147/12 ದಿ. 3.11.2012
ಚೆಕ್ ಕಳೆದುದಕ್ಕೆ ನಾವು ಜವಾಬ್ದಾರರಲ್ಲ!: ಗ್ರಾಹಕರಿಗೆ ಉತ್ತಮ ಸೇವೆ ನೀಡುವುದಕ್ಕಿಂತ ತಾವು ಬಚಾವಾಗಲು ಮಾರ್ಗ ಹುಡುಕುವುದೇ ಸೇವಾಕಂಪನಿಗಳ ಏಕೋದ್ದೇಶದ ಕಾರ್ಯಕ್ರಮವಾಗಿರುವುದು ನಮ್ಮ ದುರಂತ. ಅದಕ್ಕೆ ಇನ್ನೊಂದು ಸೇರ್ಪಡೆ ಹಾವೇರಿಯ ಬ್ಯಾಡಗಿಯಲ್ಲಿ ನಡೆದ ಒಂದು ಪ್ರಕರಣ.
ಹಾವೇರಿ ಜಿಲ್ಲೆಯ ಕದರಮಂಡಲಗಿಯ ಕಾಂತೇಶ್, ಬ್ಯಾಡಗಿಯ ಎಸ್‌ಬಿಐನಲ್ಲಿ ಒಂದು ಎಸ್‌ಬಿ ಖಾತೆ ಹೊಂದಿರುತ್ತಾರೆ. 2011ರ ಮೇ 4ರಂದು ಅವರು ಒಟ್ಟು ಎರಡೂವರೆ ಲಕ್ಷ ರೂ. ಮೊತ್ತದ ಎರಡು ಚೆಕ್‌ಗಳನ್ನು ತಮ್ಮ ಖಾತೆಗೆ ನಗದೀಕರಿಸಲು ಬ್ಯಾಂಕ್‌ಗೆ ಸಲ್ಲಿಸುತ್ತಾರೆ. ನಾಲ್ಕು ತಿಂಗಳು ಕಳೆದರೂ ಹಣ ಮಾತ್ರ ಖಾತೆಗೆ ಬರದು!
ಸುಮಾರು ಐದೂವರೆ ತಿಂಗಳ ನಂತರ ಲಿಖೀತವಾಗಿ ಇವರು ದೂರು ಸಲ್ಲಿಸಿದಾಗ ಅಕ್ಟೋಬರ್ 17ರಂದು ಎಸ್‌ಬಿಐ ಪತ್ರ ಪರೆದು, ಸದರಿ ಚೆಕ್‌ಗಳು ಕಳೆದುಹೋಗಿವೆ. ಈ ಚೆಕ್‌ಗಳ ನಕಲನ್ನು ಕೊಡಲಾಗುತ್ತದೆ ಎಂದು ತಿಳಿಸುತ್ತದೆ. ಚೆಕ್ ನಕಲು ಸ್ವೀಕಾರಕ್ಕೆ ನಿರಾಕರಿಸುವ ಗ್ರಾಹಕ, ಹಾವೇರಿಯ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸುತ್ತಾರೆ. ಈ ವೇಳೆ ತನ್ನ ವಿಶಿಷ್ಟ ವಾದ ಮಂಡಿಸುವ ಬ್ಯಾಂಕ್ ಅಧಿಕಾರಿಗಳು,
ಸದರಿ ಚೆಕ್‌ಅನ್ನು ನಿಯಮಗಳನುಸಾರವಾಗಿ ಎಸ್‌ಬಿಎಂ ತಿಮ್ಮೇನಹಳ್ಳಿಯ ಶಾಖೆಗೆ ಕಳುಹಿಸಲಾಗಿದೆ. ಆಲ್ಲಿಂದ ಚೆಕ್ ಮರಳಿಬಂದಿಲ್ಲ. ಗ್ರಾಹಕರು ಸದರಿ ಬ್ಯಾಂಕ್ ವಿರುದ್ಧ ಪ್ರಕರಣ ದಾಖಲಿಸಬಹುದೇ ವಿನಃ ನಮ್ಮ ವಿರುದ್ಧ ಅಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ವಜಾ ಮಾಡಬೇಕು ಎಂದು ವಾದಿಸಿದರು.
ವಿಚಾರಣೆ ನಡೆಸಿದ ನ್ಯಾಯಾಲಯ, ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು. ಖಾತೆಯನ್ನು ಹೊಂದಿರುವ ಗ್ರಾಹಕನೊಂದಿಗೆ ನೇರ ಸಂಪರ್ಕದಲ್ಲಿದ್ದು, ಚೆಕ್ ನಗದೀಕರಣಕ್ಕೆ ಕಳುಹಿಸುವ ಬ್ಯಾಂಕ್ ಹಣದ ವರ್ಗಾವಣೆ ಆಗುವವರೆಗೂ ಜವಾಬ್ದಾರರಾಗಿರುತ್ತದೆ. ಈ ನಿಟ್ಟಿನಲ್ಲಿ ತಿಮ್ಮೇನಹಳ್ಳಿಯ ಎಸ್‌ಬಿಎಂ ಶಾಖೆ ಚೆಕ್ ಕಳೆದಿರುವುದು ನಿಜ ಎಂದುಕೊಂಡರೂ ಅದನ್ನು ಗ್ರಾಹಕ ನ್ಯಾಯಾಲಯದ ಮುಖ್ಯ ಆರೋಪಿ ಎಂದು ಪರಿಗಣಿಸುವಂತಿಲ್ಲ.
ವಾಸ್ತವವಾಗಿ ಚೆಕ್ ಕಳೆದಿರುವುದು ದೃಡಪಟ್ಟಾಗ ಎಸ್‌ಬಿಐ ಚೆಕ್‌ನ ಜೆರಾಕ್ಸ್ ಅನ್ನು ಒದಗಿಸಲು ಮುಂದಾಗಿತ್ತು. ಇದನ್ನು ಅರ್ಜಿದಾರರು ನಿರಾಕರಿಸಿದ್ದರು. ಎಸ್‌ಬಿಎಂ ಗ್ರಾಹಕ ನ್ಯಾಯಾಲಯದ ಮುಂದೆ ಹೇಳಿದ್ದು ಕೂಡ ಇದನ್ನೇ. ಸಮಸ್ಯೆ ಪರಿಹಾರಕ್ಕೆ ನಾವು ಇನ್ನಿಲ್ಲದಂತೆ ಪ್ರಯತ್ನಿಸಿದ್ದೇವೆ. ನಕಲು ಕೊಡುವ ಭರವಸೆ ಕೊಟ್ಟರೂ ದುರುದ್ದೇಶ ಹೊಂದಿದ ಗ್ರಾಹಕ ನಿರಾಕರಿಸಿದ್ದಾನೆ. ಅಷ್ಟಕ್ಕೂ ಇವರು ಚೆಕ್ ನಗದೀಕರಣ ಸಂದರ್ಭದಲ್ಲಿ ಚೆಕ್ ಕ್ಯಾಷ್ ಆಗಬೇಕಾದಾಗ ಚೆಕ್ ದಾತಾರರ ಖಾತೆಯಲ್ಲಿ ನಿರೀಕ್ಷಿತ ಹಣವಿರಲಿಲ್ಲ ಎಂದು ಸ್ಪಷ್ಟನೆ ನೀಡಿತು.
ಈ ವಾದಗಳನ್ನೆಲ್ಲ ತಿರಸ್ಕರಿಸಿದ ಹಾವೇರಿ ಗ್ರಾಹಕ ನ್ಯಾಯಾಲಯ, ಯಾವುದೇ ಸಂದರ್ಭದಲ್ಲಿ ಚೆಕ್ ನಗದೀಕರಣದ ಜವಾಬ್ದಾರಿ ಹೊಂದಿರುವ ಬ್ಯಾಂಕ್ ನಗದೀಕರಣ ಆಗದಿದ್ದರೆ ಅದಕ್ಕೆ ಸ್ಪಷ್ಟ ಕಾರಣ ನೀಡಿ ಚೆಕ್ ಮರಳಿಸಬೇಕಿತ್ತು. ಐದಾರು ತಿಂಗಳ ವಿಳಂಬದ ಸಮಜಾಯಿಷಿಯನ್ನು ಒಪ್ಪಲಾಗುವುದಿಲ್ಲ. ಅಷ್ಟಕ್ಕೂ ನಕಲು ಚೆಕ್ ಸಮಸ್ಯೆಯನ್ನು ಬಗೆಹರಿಸುವುದಿಲ್ಲ.
ಈ ಚೆಕ್‌ನ ದಿನಾಂಕ, ಚೆಕ್ ನಂಬರ್, ಮೊತ್ತ ಬದಲಾಗಬಹುದು. ಈ ವೇಳೆಗೆ ಆವರ ಖಾತೆಯಲ್ಲಿ ಹಣ ಇರದಿರಬಹುದು ಎಂದು ಪ್ರತಿಪಾದಿಸಿತು. ಚೆಕ್‌ಗೆ ಕೇವಲ ಮೂರು ತಿಂಗಳ ಆವಧಿಯಿರುವಾಗ ಹಳೆ ಚೆಕ್‌ನ ನಗದೀಕರಣ ಸುಲಭಸಾಧ್ಯವಿಲ್ಲ. ಈ ಕಾರಣ ಬ್ಯಾಂಕ್‌ನ ನಿರ್ಲಕ್ಷ್ಯ ಗುರುತರವಾಗಿದ್ದು, ಚೆಕ್ ಮೊತ್ತ ಎರಡೂವರೆ ಲಕ್ಷ ರೂ. ಹಾಗೂ 10 ಸಾವಿರ ರೂ. ಮತ್ತು 5 ಸಾವಿರ ರೂ.ಗಳನ್ನು ವೆಚ್ಚವಾಗಿ ಪಾವತಿಸಬೇಕು ಎಂದು ಕೋರ್ಟ್ ಆದೇಶಿಸಿತು.
ಜನಪರವಾಗಿರಲು ತಿರಸ್ಕಾರ!: ತುಮಕೂರಿನ ಶಿಲ್ಪಾ ರಾಘವೇಂದ್ರ ಎಲ್‌ಐಸಿಯ ಹೆಲ್ತ್ ಪ್ಲಸ್‌ನ ವಿಮೆ ಮಾಡಿಸಿದ್ದರು. 2008ರ ಡಿ. ಏಳರಂದು ಸ್ಕೂಟರಿನಲ್ಲಿ ಹೋಗುತ್ತಿರುವಾಗ ಅಪಘಾತಕ್ಕೊಳಗಾಗಿ ಎಡಗೈ ಮೂಳೆ ಮುರಿತಕ್ಕೊಳಗಾದರು. ಡಿ. 17ರವರೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಮೇಜರ್ ಶಸ್ತ್ರಚಿಕಿತ್ಸೆಗೆ ಒಳಪಡುತ್ತಾರೆ. ಆದರೂ ಮೂಳೆ ಪುಡಿಪುಡಿ ಆಗಿದ್ದರಿಂದ ಕೈ ಮೊದಲಿನ ಸ್ಥಿತಿಗೆ ಬರುವುದಿಲ್ಲ.
ವಿಮಾ ಪರಿಹಾರಕ್ಕಾಗಿ ದಾಖಲೆ ಕೊಟ್ಟಾಗ, ವಿಮಾ ಕಂಪನಿ ಪಾಲಿಸಿ ಇಳಿಸಿದ ಕೇವಲ 2 ತಿಂಗಳಲ್ಲಿ ವಿಮಾದಾರರು ಅಪಘಾತಕ್ಕೊಳಗಾಗಿದ್ದಾರೆ ಹಾಗೂ ಪಾಲಿಸಿ ನಿಯಮಗಳಲ್ಲಿ ಶಿಲ್ಪಾರಿಗೆ ವೈದ್ಯರು ನಡೆಸಿದ ಶಸ್ತ್ರಚಿಕಿತ್ಸೆ ನಮೂದಾಗಿಲ್ಲ. ಹಾಗಾಗಿ ಪರಿಹಾರಕ್ಕೆ ಅವರು ಅರ್ಹರಿರುವುದಿಲ್ಲ ಎಂದು ಅವರ ಅರ್ಜಿಯನ್ನು ತಿರಸ್ಕರಿಸಿತು. ಇದನ್ನು ಪ್ರಶ್ನಿಸಿ ದೂರುದಾರರು ತುಮಕೂರು ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಯ ಮೊರೆಹೋಗುತ್ತಾರೆ.
ವೇದಿಕೆ ದಾಖಲಾತಿಗಳನ್ನು ಗಮನಿಸಿ, ಪಾಲಿಸಿದಾರರು ಅಪಘಾತದಿಂದ ತಮ್ಮ ಕೈ ಮುರಿದುಕೊಂಡಿದ್ದು ಮೇಜರ್ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುತ್ತಾರೆ. ಪಾಲಿಸಿಯಲ್ಲಿ ಈ ತರಹದ ಅನಿವಾರ್ಯ ಮೇಜರ್ ಸರ್ಜರಿಗೆ ವಿಮಾ ಪರಿಹಾರ ನೀಡಬಹುದಾಗಿದ್ದು ಎಲ್‌ಐಸಿ ಇದನ್ನು ಪರಿಗಣಿಸದೇ ಇರುವುದು ಕಂಡುಬಂದಿದೆ.
ಆದ್ದರಿಂದ ಶಿಲ್ಪಾರವರಿಗೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ 1,01,565 ರೂ.ಗಳನ್ನು ಹಾಗೂ ಮಾನಸಿಕ ಹಿಂಸೆಗೆ ಪರಿಹಾರದ ರೂಪದಲ್ಲಿ 10 ಸಾವಿರ ರೂ.ಗಳನ್ನು ಪಾವತಿಸಲು ತೀರ್ಪು ನೀಡುತ್ತದೆ. ಈ ತೀರ್ಪನ್ನು ಪ್ರಶ್ನಿಸಿ ಎಲ್‌ಐಸಿ ರಾಜ್ಯ ಗ್ರಾಹಕರ ವೇದಿಕೆಯಲ್ಲಿ ಸಲ್ಲಿಸಿದ ಮೇಲ್ಮನವಿಗೆ ಜಿಲ್ಲಾ ವೇದಿಕೆಯ ತೀರ್ಪನ್ನು ಎತ್ತಿಹಿಡಿಯುತ್ತದೆ.
* ಮಾ.ವೆಂ.ಸ.ಪ್ರಸಾದ್