Advertisement

ಬಾಯಲ್ಲಿ ನೀರೂರಿಸುವ ರೊಟ್ಟಿಗಳು

10:40 PM Sep 13, 2019 | mahesh |

ಕರ್ನಾಟಕದೆಲ್ಲೆಡೆ ಮನೆ ಮಾತಾಗಿರುವ ಒಂದು ತಿಂಡಿ ರೊಟ್ಟಿ. ಜೋಳದ ರೊಟ್ಟಿ, ಅಕ್ಕಿ ರೊಟ್ಟಿ ಹೀಗೆ ನಾನಾ ಬಗೆಗೆಯ ರೊಟ್ಟಿಗಳು ಕರ್ನಾಟಕದಲ್ಲಿ ಫೇಮಸ್‌. ಒಂದೊಂದು  ಊರಿನಲ್ಲಿ ಒಂದೊಂದು ವೆರೈಟಿಯ ರೊಟ್ಟಿ
ಸವಿಯಲು ಸಿಗುತ್ತದೆ. ಈ ರೊಟ್ಟಿಗಳು ಬಾಯಿಗೆ ರುಚಿ ನೀಡುವುದರೊಂದಿಗೆ ದೇಹಕ್ಕೆ ಶಕ್ತಿ ನೀಡುತ್ತದೆ. ಬಾಯಲ್ಲಿ ನೀರೂರಿಸುವ ಬಗೆ ಬಗೆಯ ರೊಟ್ಟಿಗಳ ರೆಸಿಪಿ ಇಲ್ಲಿದೆ.

Advertisement

ಮೆಂತೆ ಸೊಪ್ಪಿನ ರೊಟ್ಟಿ
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು: ಕಾಲು ಕೆಜಿ
ಮೆಂತ್ಯ ಸೊಪ್ಪು: ಅರ್ಧ ಕಪ್‌ (ಹೆಚ್ಚಿರಬೇಕು)
ಹಸಿಮೆಣಸು: ಮೂರು
ಬೆಳ್ಳುಳ್ಳಿ: 2 ಎಸಳು
ಜೀರಿಗೆ: ಕಾಲು ಚಮಚ
ಶುಂಠಿ: ಸ್ವಲ್ಪ
ಉಪ್ಪು: ರುಚಿಗೆ ತಕ್ಕಷ್ಟು
ಅರಶಿನ: ಅರ್ಧ ಚಮಚ
ಎಣ್ಣೆ: 4 ಚಮಚ
ಗಟ್ಟಿ ಮೊಸರು: ರಡು ಚಮಚ

ಮಾಡುವ ವಿಧಾನ
ಮೊದಲು ಹಸಿಮೆಣಸು, ಬೆಳ್ಳುಳ್ಳಿ, ಜೀರಿಗೆ, ಶುಂಠಿಯನ್ನು ಮಿಕ್ಸಿ ಜಾರಿನಲ್ಲಿ ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಅನಂತರ ಒಂದು ಪಾತ್ರೆಯಲ್ಲಿ ಮೆಂತೆ ಸೊಪ್ಪು, ಗೋಧಿ ಹುಡಿ, ರುಬ್ಬಿದ ಮಸಾಲೆ, ಉಪ್ಪು, ಅರಿಶಿನ, ಮೊಸರು ಮೊದಲಾದವುಗಳನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ನೀರು ಸೇರಿಸಿ ನಾದಿಕೊಳ್ಳಬೇಕು. ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಂಡು ಅರ್ಧ ಗಂಟೆ ನೆನೆಯಲು ಬಿಡಬೇಕು. ತೆಳುವಾಗಿ ರೊಟ್ಟಿಯನ್ನು ತಟ್ಟಿ ಹೆಂಚಿನಲ್ಲಿ ಬೇಯಿಸಿದರೆ ಮೆಂತೆ ಸೊಪ್ಪಿನ ರೊಟ್ಟಿ ಸವಿಯಲು ಸಿದ್ಧವಾಗುತ್ತದೆ.

ಮಸಾಲ ರೊಟ್ಟಿ
ಬೇಕಾಗುವ ಸಾಮಗ್ರಿಗಳು
ಈರುಳ್ಳಿ: ಎರಡು
ಕ್ಯಾರೆಟ್‌: ಒಂದು
ಮೂಲಂಗಿ: ಒಂದು
ಜೀರಿಗೆ: ಒಂದು ಚಮಚ
ಕೊತ್ತಂಬರಿ ಸೊಪ್ಪು: ಸ್ವಲ್ಪ
ಹಸಿಮೆಣಸು: ನಾಲ್ಕು
ಉಪ್ಪು: ರುಚಿಗೆ ತಕ್ಕಷ್ಟು
ಅಕ್ಕಿ ಹಿಟ್ಟು: ಒಂದು ಕಪ್‌

ಮಾಡುವ ವಿಧಾನ
ಮೊದಲು ಒಂದು ಪಾತ್ರೆಗೆ ಈರುಳ್ಳಿ, ಕ್ಯಾರೆಟ್‌, ಮೂಲಂಗಿ, ಜೀರಿಗೆ, ಹಸಿಮೆಣಸು, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಅನಂತರ ಅದಕ್ಕೆ ಅಕ್ಕಿ ಹುಡಿ ಹಾಕಿ ಚೆನ್ನಾಗಿ ನಾದಿಕೊಂಡು ಹಿಟ್ಟು ತಯಾರಿಸಿಕೊಳ್ಳಬೇಕು. ಹತ್ತು ನಿಮಿಷ ಬಿಟ್ಟು ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಬಟರ್‌ ಪೇಪರ್‌ನಲ್ಲಿ ಲಟ್ಟಿಸಿ ಕಾಯಿಸಿದರೆ ಮಸಾಲೆ ರೊಟ್ಟಿ ಸವಿಯಲು ಸಿದ್ಧವಾಗುತ್ತದೆ.
ರೊಟ್ಟಿಗಳು ವಿವಿಧ ಖಾದ್ಯಗಳ ಜತೆ ಸವಿಯಲು ಉತ್ತಮ. ಬದನೆ ಪಲ್ಯ, ಚಟ್ನಿಹುಡಿಯಂತಹ ಶಾಖಾಹಾರ ಖಾದ್ಯಗಳ ಜತೆಗೆ ಹೊಂದಿಕೊಳ್ಳುವ ಈ ರೊಟ್ಟಿಗಳು ಮಾಂಸಾಹಾರ ಖಾದ್ಯಗಳ ಜತೆ ಕೂಡ ಸವಿಯಲೂ ರುಚಿಕರವಾಗಿರುತ್ತದೆ. ಎಣ್ಣೆಯ ಪ್ರಮಾಣ ಅತೀ ಕಡಿಮೆ ಇರುವ ಈ ಆಹಾರ ಎಲ್ಲರಿಗೂ ಇಷ್ಟವಾಗುವುದರಲ್ಲಿ ಅಚ್ಚರಿಯಿಲ್ಲ.

Advertisement

ರುಮಾಲ್‌ ರೊಟ್ಟಿ
ಬೇಕಾಗುವ ಸಾಮಗ್ರಿಗಳು
ಮೈದಾ: ಒಂದು ಕಪ್‌
ಗೋಧಿ ಹಿಟ್ಟು: ಅರ್ಧ ಕಪ್‌
ಎಣ್ಣೆ: ಎರಡು ಚಮಚ
ಹಾಲು: ಒಂದು ಲೋಟ
ಉಪ್ಪು: ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಮೈದಾ ಹಾಗೂ ಗೋಧಿ ಹುಡಿಯನ್ನು ಚೆನ್ನಾಗಿ ಮಿಶ್ರ ಮಾಡಬೇಕು. ಅನಂತರ ಎಣ್ಣೆ, ಉಪ್ಪು, ಹಾಲು ಸೇರಿಸಿ ಹಿಟ್ಟು ತಯಾರಿಸಿಕೊಳ್ಳಬೇಕು. ಹಿಟ್ಟು ಚೆನ್ನಾಗಿ ನಾದಿದ ಮೇಲೆ ಒಂದು ಗಂಟೆಗಳ ಕಾಲ ನೆನೆಯಲು ಬಿಡಬೇಕು. ಅನಂತರ ಹಿಟ್ಟನ್ನು ಸಣ್ಣ, ಸಣ್ಣ ಉಂಡೆಗಳನ್ನಾಗಿ ಮಾಡಿ ತೆಳುವಾಗಿ ತಟ್ಟಬೇಕು. ದೊಡ್ಡ ಹೆಂಚಿನಲ್ಲಿ ಕಾಯಿಸಿದರೆ ರುಮಾಲ್‌ ರೊಟ್ಟಿ ಸವಿಯಲು ಸಿದ್ಧವಾಗುತ್ತದೆ.

ಅಕ್ಕಿ ರೊಟ್ಟಿ
ಬೇಕಾಗುವ ಸಾಮಗ್ರಿಗಳು
ಅಕ್ಕಿ ಹಿಟ್ಟು: ಒಂದು ಕಪ್‌
ನೀರು: ಒಂದೂವರೆ ಕಪ್‌
ಎಣ್ಣೆ: ಎರಡು ಚಮಚ
ಉಪ್ಪು: ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಮೊದಲು ನೀರನ್ನು ಕುದಿಸಬೇಕು. ಅದಕ್ಕೆ ಎಣ್ಣೆ ಹಾಗೂ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಸೇರಿಸಬೇಕು. ಅನಂತರ ಅದಕ್ಕೆ ಅಕ್ಕಿ ಹುಡಿಯನ್ನು ಸೇರಿಸಿ ಚೆನ್ನಾಗಿ ಕಲಸಬೇಕು. ಅದು ಗಟ್ಟಿಯಾಗುವಾಗ ಕೆಳಗಿಳಿಸಿ ಕೈಯಲ್ಲಿ ಚೆನ್ನಾಗಿ ನಾದಿಕೊಳ್ಳಬೇಕು. ಅನಂತರ ಅದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಅಕ್ಕಿ ಹುಡಿ ಹಾಕಿ ತಟ್ಟಿ, ಕಾದ ಹೆಂಚಿನಲ್ಲಿ ಬೇಯಿಸಿದರೆ ಅಕ್ಕಿ ರೊಟ್ಟಿ ಸವಿಯಲು ಸಿದ್ಧವಾಗುತ್ತದೆ.

ಮುಳ್ಳು ಸೌತೆ ರೊಟ್ಟಿ
ಬೇಕಾಗುವ ಸಾಮಗ್ರಿ
ಅಕ್ಕಿ ಹಿಟ್ಟು: ಒಂದು ಕಪ್‌
ತುರಿದ ಅಥವಾ
ಸಣ್ಣಗೆ ಹೆಚ್ಚಿದ ಮುಳ್ಳು
ಸೌತೆ: ಎರಡು ಕಪ್‌
ಹಸಿಮೆಣಸು: ಮೂರು
ಉಪ್ಪು, ಸಕ್ಕರೆ: ರುಚಿಗೆ ತಕ್ಕಷ್ಟು
ತೆಂಗಿನ ತುರಿ: ಅರ್ಧಕಪ್‌
ಶುಂಠಿ: ಸ್ವಲ್ಪ

ಮಾಡುವ ವಿಧಾನ
ಸಣ್ಣಗೆ ಹೆಚ್ಚಿದ ಮುಳ್ಳು ಸೌತೆಗೆ ಅಕ್ಕಿ ಹಿಟ್ಟು, ತೆಂಗಿನ ತುರಿ, ಉಪ್ಪು, ಸಕ್ಕರೆ, ಶುಂಠಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಬೇಕು. ನೀರು ಸೇರಿಸಬಾರದು. ಮುಳ್ಳುಸೌತೆಯಲ್ಲಿ ನೀರು ಅಧಿಕವಾಗಿರುವುದರಿಂದ ಹಿಟ್ಟಿಗೆ ಅದು ಸಾಕಾಗುತ್ತದೆ. ಅನಂತರ ಹತ್ತು ನಿಮಿಷ ನೆನೆಯಲು ಬಿಡಿ. ಹಿಟ್ಟನ್ನು ಸಣ್ಣ ಉಂಡೆಯನ್ನಾಗಿ ಮಾಡಿ ಬಾಳೆ ಎಲೆಯಲ್ಲಿ ತೆಳುವಾಗಿ ತಟ್ಟಿ ಕಾವಲಿಯಲ್ಲಿ ಬೇಯಿಸಿದರೆ ಮುಳ್ಳುಸೌತೆ ರೊಟ್ಟಿ ಸವಿಯಲು ಸಿದ್ಧವಾಗುತ್ತದೆ.

  ಸಂಗ್ರಹ: ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

Advertisement

Udayavani is now on Telegram. Click here to join our channel and stay updated with the latest news.

Next