ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು, ಒಳ್ಳೆಯ ನಟ, ಸ್ಟಾರ್ ಆಗಬೇಕು ಎಂಬ ಕನಸಿನೊಂದಿಗೆ ಕನ್ನಡ ಚಿತ್ರರಂಗಕ್ಕೆ ಬರುವ ಮಂದಿಗೆ ಕೊರತೆ ಇಲ್ಲ. ಹೀಗೆ ಬಂದ ಅನೇಕರು ತಮ್ಮ ಕನಸು ಈಡೇರಿಸಿಕೊಂಡಿದ್ದಾರೆ. ಈಗ ಈ ಸಾಲಿಗೆ ರೋಶನ್ ಕೂಡಾ ಸೇರುತ್ತಿದ್ದಾರೆ.
ಯಾವ ರೋಶನ್ ಎಂದರೆ “ತೂಫಾನ್’ ಸಿನಿಮಾ ಬಗ್ಗೆ ಹೇಳಬೇಕು. ಆರಂಭದಲ್ಲಿ “ಭೈರ್ಯ ಕೆಎ-07′ ಎಂಬ ಟೈಟಲ್‌ನಲ್ಲಿ ಶುರುವಾದ ಸಿನಿಮಾ ಈಗ ಟೈಟಲ್ ಬದಲಿಸಿದ್ದು, “ತೂಫಾನ್’ ಎಂದಿಟ್ಟಿದೆ. ಆಟೋ ಡ್ರೈವರ್ ಮಗನಾಗಿರುವ ರೋಶನ್ ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಕನಸು ಕಂಡಿದ್ದಾರೆ. ಈಗಾಗಲೇ ಭರ್ಜರಿಯಾಗಿ ಚಿತ್ರೀಕರಣವಾಗುತ್ತಿರುವ ಈ ಚಿತ್ರಕ್ಕೆ ಬಿಟೌನ್‌ನಿಂದಲೂ ಬೇಡಿಕೆ ಬರುತ್ತಿದೆ. ಈ ಮೂಲಕ ಹೊಸಬರ ತಂಡ ಖುಷಿಯಾಗಿದೆ. ಚಿತ್ರತಂಡ ಕೂಡಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ಸಿನಿಮಾ ಕಟ್ಟಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
ಇನ್ನು, ರೋಷನ್ ಈ ಹಿಂದೆ “ತಲ್ವಾರ್’ ಎಂಬ ಕಿರುಚಿತ್ರದಲ್ಲೂ ಅಭಿನಯಿಸಿದ್ದರು. ಬಾಗಲಕೋಟೆಯ ಶರೀಫ ಬೇಗಂ ನದಾಫ್, ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಆರ್. ಚಂದ್ರಕಾಂತ್ ಈ ಸಿನಿಮಾದ ನಿರ್ದೇಶಕರು. ಚಿತ್ರದಲ್ಲಿ ಅನುಷಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ.
“ಬೆಂಗಳೂರಿನ ಭೂಗತ ಲೋಕ ಇಲ್ಲಿನ ಡಾನ್‌ಗಳ ಕುರಿತಂತೆ ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ ಚಿಕ್ಕಬಳ್ಳಾಪುರ, ಕೋಲಾರ, ಕೆಜಿಎಫ್, ಚಿಂತಾಮಣಿ, ಶಿಡ್ಲಘಟ್ಟವನ್ನು ಜನರು ಮರೆತು ಹೋಗಿರುವ ಭೂಗತ ಲೋಕದ ವಿಷಯ ಈ ಸಿನಿಮಾದಲ್ಲಿದೆ. ಸಾಕಷ್ಟು ವಿಷಯ ಗಳನ್ನು ಸಂಶೋಧನೆ ನಡೆಸಿ, ಅಧ್ಯಯನ ಮಾಡಿ ಚಿತ್ರಕಥೆ ಸಿದ್ದಪಡಿಸಲಾಗಿದೆ. 1970 ರಿಂದ 1985ರ ಕಾಲಘಟ್ಟದಲ್ಲಿ ಸಿನಿಮಾ ಸಾಗುತ್ತದೆ’ ಎನ್ನುವುದು ಚಿತ್ರತಂಡದ ಚಿತ್ರದ ಬಗ್ಗೆ ನೀಡುವ ವಿವರ.
“ಒಂದು ಗುಣಮಟ್ಟದ ಸಿನಿಮಾ ಕಟ್ಟಿಕೊಡಲು ನಾವೆಲ್ಲರೂ ಶ್ರಮಿಸುತ್ತಿದ್ದೇವೆ. ಅದಕ್ಕೆ ಒಳ್ಳೆಯ ಪ್ರತಿಫಲ ಸಿಗುತ್ತದೆ ಎಂಬ ನಂಬಿಕೆಯೂ ಇದೆ’ ಎನ್ನುವುದು ನಾಯಕ ರೋಶನ್ ಮಾತು.