Advertisement

ರೋಷನ್‌ ಬೇಗ್‌ ಎಸ್‌ಐಟಿ ವಶ

01:52 AM Jul 16, 2019 | Team Udayavani |

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಸಂಬಂಧ ಶಾಸಕ ಆರ್‌. ರೋಷನ್‌ ಬೇಗ್‌ ಅವರನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಸೋಮವಾರ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣ ದಲ್ಲಿ ವಶಕ್ಕೆ ಪಡೆದಿದೆ.

Advertisement

ಇದರ ಬೆನ್ನಲ್ಲೇ ಸಿಎಂ ಕುಮಾರ ಸ್ವಾಮಿ ಮತ್ತು ಬಿಜೆಪಿ ನಡುವೆ ರಾಜಕೀಯ ಟ್ವೀಟ್ ಸಮರ ನಡೆದಿದೆ.

ಈ ಬೆಳವಣಿಗೆ ಕುರಿತಂತೆ ತತ್‌ಕ್ಷಣವೇ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, ರೋಷನ್‌ ಬೇಗ್‌ ತಪ್ಪಿಸಿಕೊಳ್ಳಲು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಆಪ್ತ ಸಂತೋಷ್‌ ಸಹಾಯ ಮಾಡುತ್ತಿರುವುದು ಕಂಡು ಬಂದಿದೆ. ಇವರಿಬ್ಬರು ಬಾಡಿಗೆ ವಿಮಾನದಲ್ಲಿ ಮುಂಬಯಿಗೆ ತೆರಳಲು ಯತ್ನಿಸುತ್ತಿದ್ದರು. ಈ ವೇಳೆ ಎಸ್‌ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಬಿಎಸ್‌ವೈ ಆಪ್ತ ಎನ್‌.ಆರ್‌.ಸಂತೋಷ್‌ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಜತೆಗೆ ವಿಮಾನ ನಿಲ್ದಾಣದಲ್ಲಿ ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್‌ ಅವರೂ ಇದ್ದರು ಎಂದಿರುವ ಸಿಎಂ, ಬಿಜೆಪಿ ನೇರವಾಗಿಯೇ ಕುದುರೆ ವ್ಯಾಪಾರಕ್ಕಿಳಿದು ಸರಕಾರವನ್ನು ಪತನಗೊಳಿಸುವ ಯತ್ನಕ್ಕೆ ಕೈಹಾಕಿರುವುದು ಕಂಡು ಬಂದಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ತಿರುಗೇಟು
ಸಿಎಂ ಮಾಡಿರುವ ಟ್ವೀಟ್‌ಗೆ ಬಿಜೆಪಿ ಟ್ವೀಟ್‌ನಲ್ಲಿಯೇ ತೀಕ್ಷ್ಣ ತಿರುಗೇಟು ನೀಡಿದೆ. ಸಿಎಂ ಕುಮಾರಸ್ವಾಮಿ ಅವರು ಸರಕಾರವನ್ನು ಉಳಿಸಿಕೊಳ್ಳಲು ಆಡಳಿತ ಯಂತ್ರವನ್ನು ಸಂಪೂರ್ಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದೆ. ಜು. 19ರಂದು ಹಾಜರಾಗುವುದಾಗಿ ರೋಷನ್‌ ಬೇಗ್‌ ಹೇಳಿ, ಎಸ್‌ಐಟಿ ಒಪ್ಪಿಗೆಯನ್ನೂ ಪಡೆದಿದ್ದರು. ಹೀಗಿದ್ದೂ ನಿಮ್ಮ ಸರಕಾರ ಶಾಸಕರನ್ನು ಹೇಗೆ ಬ್ಲ್ಯಾಕ್‌ ಮೇಲ್ ಮಾಡುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಆರೋಪಿಸಿದೆ. ಬಿಎಸ್‌ವೈ ಆಪ್ತ ಸಂತೋಷ್‌ ಅವರು ಈ ಸಂದರ್ಭ ಇರಲಿಲ್ಲ. ಬೇಗ್‌ ಒಬ್ಬರೇ ಹೋಗುತ್ತಿದ್ದರು. ಸಿಎಂ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ
ರೋಷನ್‌ ಬೇಗ್‌ ಅವರು ಖಾಸಗಿ ವಿಮಾನದಲ್ಲಿ ಬೆಂಗಳೂರು ಬಿಟ್ಟು ಗೌಪ್ಯ ಸ್ಥಳಕ್ಕೆ ಹೋಗಲು ತಯಾರಿ ನಡೆಸಿರುವ ಬಗ್ಗೆ ಎಸ್‌ಐಟಿಗೆ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next