Advertisement
ಕಬ್ಬಿನ ಕೃಷಿ ಮಾಡಿದರೆ ವರ್ಷಕ್ಕೊಮ್ಮೆ ಆದಾಯ. ಆ ಬೆಳೆ ಕೈಗೆ ಬರುವ ತನಕ ಏನು ಮಾಡೋದು? ಈ ಪ್ರಶ್ನೆ ಎದ್ದಾಗಲೇ ಪತಿಯ ಮನವೊಲಿಸಿದರು ಬೆಳಗಾವಿಯ ಅಂಬೇವಾಡಿ ಗ್ರಾಮದ ಅಂಜನಾ ಭುಜಂಗ ಕೋವಾಡಕರ. ಈಗ ನೋಡಿ, ದಿನೇ ದಿನೇ ಕಾಂಚಾಣ ಎಣಿಸುತ್ತಿದ್ದಾರೆ.
ಹೂವಿನ ಕೃಷಿಗೆಂದೇ ಕಬ್ಬಿನ ಬೆಳೆಯನ್ನು ಮೂರರಿಂದ, ಎರಡು ಎಕರೆಗೆ ಇಳಿಸಿ, ಆ ಒಂದು ಎಕರೆ ಭೂಮಿಯನ್ನು ಹೂವಿನ ಕೃಷಿಗೆ ಸಿದ್ಧಪಡಿಸಿದರು. ಗಿಡದಿಂದ ಗಿಡಕ್ಕೆ ಎರಡು ಅಡಿ ಸಾಲಿನ ಮಧ್ಯೆ ನಾಲ್ಕು ಅಡಿ ಅಂತರದಲ್ಲಿ ಗುಲಾಬಿ ಗಿಡಗಳನ್ನು ನಾಟಿ ಮಾಡಿದ್ದಾರೆ. ಮುಳ್ಳು ಹೈಬ್ರಿಡ್ ತಳಿಯ 2000 ಗಿಡಗಳಿವೆ. ನಾಟಿ ಪೂರ್ವ ಕೊಟ್ಟಿಗೆಯ ತಿಪ್ಪೆ ಗೊಬ್ಬರ ಯಥೇತ್ಛವಾಗಿ ಬಳಸಿದ್ದಾರೆ. ಜೂನ್ ತಿಂಗಳ ಎರಡನೆಯ ವಾರದಲ್ಲಿ ನಾಟಿ. ಮೂರು ತಿಂಗಳ ನಂತರ ರಸಗೊಬ್ಬರ ಹಾಕಿದ್ದಾರೆ. ಉತ್ತಮ ಗುಣಮಟ್ಟದ ಗಿಡಗಳಿದ್ದುದರಿಂದ ನೆಟ್ಟ ಒಂದೂವರೆ ತಿಂಗಳಿಗೆ ಹೂವು ಬರಲು ಆರಂಭಿಸಿದೆ. ಮೂರು ತಿಂಗಳವರೆಗೆ ಮೊಗ್ಗು ಚಿವುಟಿದ್ದಾರೆ. ಬಲಿಷ್ಟವಾಗಿ ಬೆಳೆದ ಗಿಡಗಳು ಆರು ತಿಂಗಳ ನಂತರ ಪ್ರತಿ ಗಿಡದಿಂದ ಸರಾಸರಿ 2-3 ಹೂವುಗಳನ್ನು ನೀಡತೊಡಗಿವೆ.
Related Articles
ಸಾಮಾನ್ಯವಾಗಿ ರೈತರು ಗುಲಾಬಿ ಗಿಡಗಳನ್ನು ವರ್ಷಕ್ಕೆ ಒಂದು ಬಾರಿ ಕತ್ತರಿಸುವುದು ವಾಡಿಕೆ. ಆದರೆ ಇವರು ಎರಡು ಬಾರಿ ಕತ್ತರಿಸುತ್ತಾರೆ. ಜೂನ್ ಮೊದಲನೆ ವಾರ ಹಾಗೂ ಡಿಸೆಂಬರ್ ತಿಂಗಳಲ್ಲಿ ಗಿಡಗಳನ್ನು ಬುಡದಿಂದ ಒಂದು ಅಡಿ ಅಂತರ ಬಿಟ್ಟು ಕತ್ತರಿಸುತ್ತಾರೆ. ನಂತರ ಆ ಗಿಡವು 45 ದಿನಕ್ಕೆ ಹೂವು ಬಿಡುತ್ತದೆ. ವರ್ಷಕ್ಕೆ ಒಮ್ಮೆ ಮಾತ್ರ ರಸಗೊಬ್ಬರ ಬಳಕೆ. ಆಮೇಲೆ ಮೂರು ತಿಂಗಳಿಗೊಮ್ಮೆ ಕೊಟ್ಟಿಗೆ ಗೊಬ್ಬರ ಹಾಕುತ್ತಾರೆ. ವರ್ಷಕ್ಕೊಮ್ಮೆ ಕತ್ತರಿಸಿದರೆ ಹೂವಿನ ಇಳುವರಿ ಕಡಿಮೆ. ಅಲ್ಲದೇ ಗಿಡಗಳು ಬೃಹತ್ ಗಾತ್ರದಲ್ಲಿ ಬೆಳೆದು ನಿಲ್ಲುವುದರಿಂದ ಮುಳ್ಳಿನ ನಡುವೆ ಹೂವು ಆಯ್ದುಕೊಳ್ಳಲು ಕಸರತ್ತು ಮಾಡಬೇಕಾಗುತ್ತದೆ. ವರ್ಷಕ್ಕೆ ಬುಡ ಕತ್ತರಿಸುವ ಗುರಿ ಇದ್ದರೆ ಗಿಡಗಳ ನಡುವೆ ಐದು ಅಡಿ ಹಾಗೂ ಸಾಲಿನ ನಡುವೆ ಎಂಟು ಅಡಿ ಅಂತರ ಇರಬೇಕಾಗುತ್ತದೆ. ಆರು ತಿಂಗಳಿಗೆ ಒಮ್ಮೆ ಕತ್ತರಿಸುವುದಾದರೆ ಕಡಿಮೆ ಸ್ಥಳದಲ್ಲಿ ಹೆಚ್ಚು ಗಿಡ ನಾಟಿ ಮಾಡಿ, ಇಳುವರಿಯನ್ನೂ ಜಾಸ್ತಿ ಪಡೆಯಬಹುದು ಎನ್ನುತ್ತಾರೆ ಅಂಜನಾ ಬುಜಂಗ ಕೋವಾಡಕರ.
Advertisement
ಭರ್ತಿ ಇಳುವರಿಉತ್ತಮ ನಿರ್ವಹಣೆಯಿಂದ ಇಳುವರಿ ಹೆಚ್ಚು. ಎಷ್ಟೆಂದರೆ, ದಿನಕ್ಕೆ 300-500 ಹೂವು ಕೊಯ್ಲು ಮಾಡುತ್ತಾರೆ. ಪ್ರತಿದಿನ ಸಾಯಂಕಾಲ ಹತ್ತು ಹೂವಿನಂತೆ ಒಂದೊಂದು ಸಿವುಡು ಕಟ್ಟಿ, ಬುಟ್ಟಿಯಲ್ಲಿ ಜೋಡಿಸಿಟ್ಟು ನೀರು ಸಿಂಪಡಿಸಿಟ್ಟು, ನಸುಕಿನಲ್ಲೇ ಮಾರುಕಟ್ಟೆಗೆ ಒಯ್ಯುತ್ತಾರೆ. ಹೂವೊಂದಕ್ಕೆ ಮೂರು ರೂಪಾಯಿ ಬೆಲೆ ಇದೆ. ಆಗಸ್ಟ್ ಸೆಪ್ಟೆಂಬರ್, ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಹೂವಿನ ಇಳುವರಿ ಜಾಸ್ತಿ. ದಿನವೊಂದಕ್ಕೆ 800-1000 ಹೂವು ಕೊಯ್ಲು ಮಾಡಿದ್ದೂ ಇದೆಯಂತೆ. ಅಂಜನಾ ಅವರದ್ದು ಉಸುಕು ಮಿಶ್ರಿತ ಕೆಂಪು ಮಣ್ಣಿನ ಭೂಮಿಯಾಗಿರುವುರಿಂದ ಎರಡು ದಿನಕ್ಕೊಮ್ಮೆ ನೀರು ಹಾಯಿಸುವುದು ಅನಿವಾರ್ಯ. ಗುಲಾಬಿ ಗಿಡಗಳಿಗೆ ವಾರಕ್ಕೊಮ್ಮೆ ಔಷಧ ಸಿಂಪಡಿಸುತ್ತಾರೆ. ಗಿಡಗಳನ್ನು ಕತ್ತರಿಸಿದ ಸಂದರ್ಭದಲ್ಲಿ ಬುಡಗಳ ನಡುವೆ ಟಿಲ್ಲರ್ ಸಹಾಯದಿಂದ ಉಳುಮೆ ಮಾಡುತ್ತಾರೆ. ಬಿಸಿಲುಂಡ ಭೂಮಿ, ಮುಂದಿನ ಹೂವು ಇಳುವರಿ ಇಮ್ಮಡಿಗೊಳಿಸಲು ಸಹಕರಿಸುತ್ತದೆ. ಒಮ್ಮೆ ನಾಟಿ ಮಾಡಿದ ಗಿಡಗಳಿಂದ 8-10 ವರ್ಷಗಳ ವರೆಗೆ ಇಳುವರಿ ಪಡೆಯಬಹುದು. ಹೀಗಾಗಿ ಭುಜಂಗ ಕೋವಾಡಕರ್ ಕುಟುಂಬ ನೆಮ್ಮದಿಯಾಗಿದೆ. – ಜೈವಂತ ಪಟಗಾರ