ಕರ್ನಾಟಕ ಮತ್ತೆ ಐಎಎಸ್-ಐಪಿಎಸ್ ಅಧಿಕಾರಿಗಳೀರ್ವರ ಬಹಿರಂಗ ವಾಕ್ಸಮರಕ್ಕೆ ಸಾಕ್ಷಿಯಾಗುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಉನ್ನತ ಅಧಿಕಾರಿಗಳೇ ಹೀಗೆ ಸಾರ್ವಜನಿಕವಾಗಿ ರಂಪಾಟ ನಡೆಸುತ್ತಿರುವುದು ಇಡೀ ರಾಜ್ಯವನ್ನು ಮುಜುಗರಕ್ಕೀಡು ಮಾಡಿದೆ. ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಈ ಮುಸುಕಿನ ಗುದ್ದಾಟ ರವಿವಾರ ಧುತ್ತನೆ ಭುಗಿಲೆದ್ದಿರುವುದೇ ಅಲ್ಲದೇ ಎಲ್ಲ ಸೇವಾ ನಿಯಮಾವಳಿಗಳು ಮತ್ತು ನೈತಿಕತೆಯ ಎಲ್ಲೆಯನ್ನು ಮೀರಿದೆ.
ಈ ಹಿಂದೆಯೂ ಇವರೀರ್ವರ ನಡುವೆ ಕೆಸರೆರಚಾಟ ನಡೆದಿತ್ತಾದರೂ ಸರಕಾರ ಮತ್ತು ಉನ್ನತ ಅಧಿಕಾರಿಗಳ ಮಧ್ಯಪ್ರವೇಶದಿಂದಾಗಿ ಒಂದಿಷ್ಟು ಶಾಂತ ವಾಗಿತ್ತು. ರವಿವಾರ ಏಕಾಏಕಿಯಾಗಿ ಡಿ. ರೂಪಾ ಮೌದ್ಗಿಲ್ ಸರಣಿ ಟ್ವೀಟ್‌ಗಳ ಮೂಲಕ ರೋಹಿಣಿ ಸಿಂಧೂರಿ ಅವರ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದೇ ಅಲ್ಲದೆ ರೋಹಿಣಿ ಅವರು ಕೆಲವೊಂದು ಪುರುಷ ಅಧಿಕಾರಿಗಳಿಗೆ ಕಳುಹಿಸಿರುವ ರೆನ್ನಲಾಗಿರುವ ರೋಹಿಣಿ ಅವರ ವೈಯಕ್ತಿಕ ಫೋಟೋಗಳನ್ನು ಕೂಡ ಅಪ್‌ಲೋಡ್ ಮಾಡುವ ಮೂಲಕ ಕೊಳಚೆಯನ್ನು ಮತ್ತಷ್ಟು ಕೆದಕಿದ್ದಾರೆ. ಐಜಿಪಿ ಯಾಗಿರುವ ರೂಪಾ ಮೌದ್ಗಿಲ್ ಅವರ ಈ ನಡೆ ತೀರಾ ಅತಿರೇಕವಾಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಐಎಎಸ್ ಅಧಿಕಾರಿಯಾಗಿದ್ದ ಡಿ.ಕೆ.ರವಿ ಅವರ ಆತ್ಮಹತ್ಯೆ ಪ್ರಕರಣದ ಸಂದರ್ಭ ದಲ್ಲಿ ರೋಹಿಣಿ ಸಿಂಧೂರಿ ಅವರ ಹೆಸರು ತಳಕು ಹಾಕಿಕೊಂಡು ಒಂದಿಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು. ಇದಾದ ಬಳಿಕ ನಿರಂತರವಾಗಿ ರೋಹಿಣಿ ಸಿಂಧೂರಿ ಒಂದಲ್ಲ ಒಂದು ವಿವಾದದಲ್ಲಿ ಸಿಲುಕುತ್ತಲೇ ಬಂದಿದ್ದಾರೆ. ಸತತ ವರ್ಗಾವಣೆಯ ಹೊರತಾಗಿಯೂ ಅವರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳುತ್ತಿಲ್ಲ. ಅಷ್ಟು ಮಾತ್ರವಲ್ಲದೆ ಹಿರಿಯ ಮತ್ತು ಸಹವರ್ತಿ ಅಧಿಕಾರಿಗಳು, ಆಯಾಯ ಜಿಲ್ಲೆಗಳ ಶಾಸಕರು, ಸಂಸದರನ್ನು ಎದುರು ಹಾಕಿಕೊಳ್ಳುತ್ತಲೇ ಬಂದಿರುವ ಅವರು ಈ ಕಾರಣದಿಂದಾಗಿಯೇ ಯಾವುದೇ ಜಿಲ್ಲೆ ಅಥವಾ ಇಲಾಖೆಯಲ್ಲಾಗಲಿ ಒಂದಿಷ್ಟು ತಿಂಗಳುಗಳ ಕಾಲ ಕರ್ತವ್ಯ ನಿರ್ವಹಿಸಲಾಗದ ಅನಿವಾರ್ಯ ಪರಿಸ್ಥಿತಿ ಯನ್ನು ತಾವೇ ಸೃಷ್ಟಿಸಿಕೊಂಡಿದ್ದಾರೆ ಎಂಬ ಮಾತುಗಳೂ ಅಧಿಕಾರಿ ವರ್ಗದಿಂದ ಕೇಳಿಬಂದಿದ್ದವು. ಐಪಿಎಸ್ ಅಧಿಕಾರಿಯಾಗಿರುವ ಐಜಿಪಿ ಡಿ. ರೂಪಾ ಮೌದ್ಗಿಲ್ ಈ ಬಾರಿ ಕೆಲವೊಂದು ಗಂಭೀರವಾದ ಆರೋಪಗಳನ್ನು ರೋಹಿಣಿ ಸಿಂಧೂರಿ ವಿರುದ್ಧ ಮಾಡಿರುವುದೇ ಅಲ್ಲದೆ ರಾಜಕೀಯ ಮತ್ತು ಆಡಳಿತಾತ್ಮಕವಾದ ಕೆಲವೊಂದು ಸೂಕ್ಷ್ಮ ವಿಷಯಗಳನ್ನು ಪ್ರಸ್ತಾವಿಸಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ ಈ ಎಲ್ಲ ಆರೋಪಗಳನ್ನು ರೋಹಿಣಿ ಸಿಂಧೂರಿ ತಳ್ಳಿಹಾಕಿದ್ದು ಸಕ್ಷಮ ಪ್ರಾಧಿಕಾರದ ಮುಂದೆ ವೈಯಕ್ತಿಕ ನಿಂದೆ ಮತ್ತು ತೇಜೋವಧೆ ಆರೋಪಗಳಡಿ ರೂಪಾ ವಿರುದ್ಧ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಇಬ್ಬರು ಹಿರಿಯ ಅಧಿಕಾರಿಗಳು ಇಡೀ ರಾಜ್ಯದ ಜನತೆಗೆ ಪುಕ್ಕಟೆ ಮನೋರಂಜನೆ ಒದಗಿಸುತ್ತಿದ್ದಾರೆ. ಈ ಅಧಿಕಾರಿಗಳ ತಿಳಿಗೇಡಿ ಮತ್ತು ನಾಚಿಕೆಗೇಡಿನ ವರ್ತನೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸ ತೊಡಗಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಸರಕಾರ ಮೌನಕ್ಕೆ ಶರಣಾಗಿರುವುದು ಸಹಜವಾಗಿಯೇ ಜನರಲ್ಲಿ ಒಂದಿಷ್ಟು ಅಚ್ಚರಿ ಮೂಡಿಸಿದೆ. ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ತತ್‌ಕ್ಷಣ ಮಧ್ಯಪ್ರವೇಶಿಸಿ ರಾಜಿ ಸಂಧಾನ, ಎಚ್ಚರಿಕೆಯ ಬದಲಾಗಿ ಈ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿéಣ್ಯ ಕ್ರಮ ಕೈಗೊಳ್ಳಬೇಕು. ಈರ್ವ ರನ್ನೂ ತತ್‌ಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಕರ್ತವ್ಯದಿಂದ ಅಮಾನತುಗೊಳಿಸಿ ಕಾನೂನು ಮತ್ತು ಸೇವಾ ನಿಯಮಾವಳಿಗಳಿಗೆ ಅನು ಸಾರವಾಗಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಈ ಮೂಲಕ ಸರಕಾರ, ಕಾನೂನು ನಿಯಮಾವಳಿಗಳು ಮತ್ತದರ ವ್ಯಾಪ್ತಿಯನ್ನು ಅಧಿಕಾರಿಗಳಿಗೆ ನೆನಪಿಸಿಕೊಡುವ ತನ್ನ ಹೊಣೆಗಾರಿಕೆಯನ್ನು ಸೂಕ್ತವಾಗಿ ನಿಭಾಯಿಸಬೇಕು. ಇದು ಎಲ್ಲ ಅಧಿಕಾರಿವರ್ಗಕ್ಕೆ ಪಾಠವಾಗಬೇಕು.