ಕೊಪ್ಪಳ: ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಪ್ರಗತಿ ತುಂಬಾ ಕಡಿಮೆಯಿದೆ. ಇದನ್ನು ಪ್ರಗತಿಯತ್ತ ಮುನ್ನಡೆಸಲು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸದೊಂದು ಯೋಜನೆ ರೂಪಿಸಿದೆ. 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಬಡ ಮಕ್ಕಳಿಗೆ ಶಾಲಾ ಅವ ಧಿ ನಂತರ ಓದಿಕೊಳ್ಳಲು ಶಾಲೆಯ ಒಂದು ಕೊಠಡಿಯನ್ನೇ ಮೀಸಲಿಡಲು ಉದ್ದೇಶಿಸಿದೆ. ಹೈ.ಕ.ಭಾಗದ ಎಲ್ಲ ಶಾಲೆಯ ಮುಖ್ಯ ಶಿಕ್ಷಕರು ಇದರ ಜವಾಬ್ದಾರಿ ನಿರ್ವಹಿಸಬೇಕಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಹೈ-ಕರ್ನಾಟಕದ ಎಲ್ಲ ಜಿಲ್ಲೆಗಳ ಫಲಿತಾಂಶವನ್ನು ನಾವು ಕೆಳಗಿನಿಂದ ಮೇಲೆ ನೋಡುವಂತಹ ಪರಿಸ್ಥಿತಿ ಪ್ರತಿ ವರ್ಷವೂ ಕಾಣುತ್ತಿದ್ದೇವೆ. ಶಿಕ್ಷಣ ಇಲಾಖೆ ಏನೆಲ್ಲ ಪ್ರಯತ್ನ ನಡೆಸಿ ಶಿಕ್ಷಕರಿಗೆ ತರಬೇತಿ ನೀಡಿದರೂ ಫಲಿತಾಂಶದಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತಿಲ್ಲ. ಇದನ್ನರಿತ ಕಲಬುರ್ಗಿ ಶಿಕ್ಷಣ ಇಲಾಖೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಯೋಜನೆ ರೂಪಿಸಿದೆ.
ಇದರ ಉದ್ದೇಶವೇನು?: ಹೈಕ ಭಾಗದ ಜನರು ದುಡಿಮೆ ಇಲ್ಲದೆ ಗುಳೇ ಹೋಗುವುದು ಸಾಮಾನ್ಯ. ಕೆಲವು ಪಾಲಕರಂತೂ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಹೀಗಾಗಿ ಮಕ್ಕಳು ಅಭ್ಯಾಸಕ್ಕೆ ತೊಂದರೆಯಾಗಿ ಶಿಕ್ಷಣದ ಬಗ್ಗೆ ಕಾಳಜಿಯನ್ನೇ ಕಡಿಮೆ ಮಾಡುತ್ತಾರೆ. ಇನ್ನೂ ಕೆಲವು ಪಾಲಕರು ಮನೆಗೆ ನಿತ್ಯ ಮದ್ಯ ಸೇವಿಸಿ ಬಂದು ಜಗಳವಾಡುವ ಪ್ರಕರಣ ಎಲ್ಲೆಡೆ ಬೆಳಕಿಗೆ ಬರುತ್ತಿವೆ. ಇದರಿಂದ ಮಕ್ಕಳ ಅಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲವರ ಮನೆಯಲ್ಲಿ ಸರಿಯಾದ ವಿದ್ಯುತ್ ಸೌಕರ್ಯ ಇರುವುದಿಲ್ಲ. ಇದೆಲ್ಲವನ್ನೂ ನಿವಾರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮಕ್ಕಳ ಅಭ್ಯಾಸಕ್ಕೆ ಸೂಕ್ತ ವಾತಾವರಣ ಕಲ್ಪಿಸಿ ಉತ್ತಮ ಫಲಿತಾಂಶ ತರುವ ಜತೆಗೆ ಶೈಕ್ಷಣಿಕ ಪ್ರಗತಿ ಕಾಣಲು ಶಾಲಾ ಅವ ಧಿ ನಂತರ ವಿದ್ಯಾರ್ಥಿಗಳಿಗೆ ಸಂಜೆ ಓದಿಕೊಳ್ಳಲು ಒಂದು ಕೊಠಡಿ ಮೀಸಲಿಟ್ಟು ಅದರ ಮೇಲುಸ್ತುವಾರಿಗೆ ಮುಂದಾಗಿದೆ.
ಶಾಲೆ ಮುಖ್ಯ ಶಿಕ್ಷಕರ ಜವಾಬ್ದಾರಿ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಹತ್ತಿರ ಬರುತ್ತಿವೆ. ಹಾಗಾಗಿ ಶಿಕ್ಷಣ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿ ಈ ಯೋಜನೆ ರೂಪಿಸಿ, ಈಗಾಗಲೆ ಹೈಕ ಭಾಗದ ಎಲ್ಲ ಡಿಡಿಪಿಐ, ಬಿಇಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ ಹಾಗೂ ಎಲ್ಲ ಶಾಲೆ ಮುಖ್ಯೋಪಾಧ್ಯಾಯರು ಇದರ ಬಗ್ಗೆ ಕಾಳಜಿ ವಹಿಸಬೇಕೆಂದು ಸೂಚಿಸಿದೆ. ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರು ಸೇರಿ ಕೆಲವು ಸೌಕರ್ಯ ಕಲ್ಪಿಸುವ ಜವಾಬ್ದಾರಿ ಶಿಕ್ಷಕರ ಮೇಲೂ ಇದೆ. ಶಿಕ್ಷಣ ಇಲಾಖೆ ಅಂದುಕೊಂಡಂತೆ ಈ ಯೋಜನೆ ಅನುಷ್ಠಾನವಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ನಿರ್ಮಿಸಿಕೊಡಬೇಕಿದೆ. ಇದರಿಂದ ಬಡ ಮಕ್ಕಳಿಗೂ ತುಂಬ ಅನುಕೂಲವಾಗಲಿದೆ.
ಹೈ-ಕ ಭಾಗದ ಜಿಲ್ಲೆಗಳಲ್ಲಿ ಪ್ರತಿ ವರ್ಷವೂ ನಾವು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಕೆಳಗಿನಿಂದ ಮೇಲೆ ನೋಡುವಂತಹ ಪರಿಸ್ಥಿತಿಯಿದೆ. ಇದನ್ನು ಹೋಗಲಾಡಿಸಲು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಂಜೆ ಸಮಯದಲ್ಲಿ ಅಭ್ಯಾಸ ಮಾಡಿಕೊಳ್ಳಲು ಶಾಲೆಗಳಲ್ಲೇ ಒಂದು ಕೊಠಡಿ ಮೀಸಲಿಟ್ಟು ಅವರಿಗೆ ಬಳಕೆಗೆ ಅನುಕೂಲ ಮಾಡಿಕೊಡಲು ಈಗಾಗಲೇ ಹೈ.ಕ. ಭಾಗದ ಎಲ್ಲ ಡಿಡಿಪಿಐ, ಬಿಇಒಗಳಿಗೆ ಸೂಚಿಸಿದ್ದೇವೆ.
– ಫಾತೀಮಾ ಬಿ., ಕಲಬುರ್ಗಿ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕಿ
– ದತ್ತು ಕಮ್ಮಾರ