ವಿಜಯಪುರ: ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆ ನೀರು ರೈತರ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡಿದ್ದು, ಬಾಧಿತ ರೈತರು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದ ನಾಗಯ್ಯ ಹಿರೇಮಠ ಎಂಬವರ ಜಮೀನಿಗೆ ನುಗ್ಗಿರುವ ನೀರು 8 ಎಕರೆಯಲ್ಲಿ ಬೆಳೆದಿರುವ ಮೆಕ್ಕೆಜೋಳ ಬೆಳೆಯನ್ನು ಆವರಿಸಿದೆ. ಇದರಿಂದ ಬೆಳವಣಿಗೆ ಹಂತದಲ್ಲಿರುವ ಮೆಕ್ಕೆಜೋಳದ ಬೆಳೆ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಜಮೀನಿನ ಪಕ್ಕದಲ್ಲಿರುವ ನಾಗಯ್ಯ ಅವರಿಗೆ ಸೇರಿದ ಜಮೀನು ಮಾತ್ರವಲ್ಲದೇ ಅವರ ಜಮೀನಿನ ಮೂಲಕ ಇತರೆ ರೈತರ ಜಮೀನಿಗೂ ನುಗ್ಗಿ ಬೆಳೆಯನ್ನು ಆವರಿಸುತ್ತಿದ್ದು, ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದಾರೆ.
ರೋಣಿಹಾಳ ಪರಿಸರದಲ್ಲಿ ಮುಳವಾಡ ಏತ ನೀರಾವರಿಯ ಕಾಲುವೆ ಮೂಲಕ ಹರಿಸುತ್ತಿರುವ ನೀರು ರೈತರ ಜಮೀನಿಗೆ ನುಗ್ಗುತ್ತಿದೆ. ನಿರ್ಮಿಸಿರುವ ಕಾಲುವೆಗಳು ಕೆಳ ಹಂತದಲ್ಲಿರುವ ಕಾರಣದಿಂದ ಪ್ರತಿ ಬಾರಿ ನೀರು ಹರಿಸಿದಾಗಲೂ ಕಾಲುವೆಯ ಮೇಲ್ಭಾಗದಿಂದ ಭಾರಿ ಪ್ರಮಾಣದ ನೀರು ರೈತರ ಜಮೀನಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿದೆ.
ಇದಲ್ಲದೇ ಕಾಲುವೆಯ ನೀರು ನಿರಂತರವಾಗಿ ಜಮೀನು ಆವರಿಸಿ ತೇವಾಂಶ ಹೆಚ್ಚಾದ ಕಾರಣ ಈ ಭಾಗದ ಜಮೀನುಗಳಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸವಾಗಿರುವ ರೈತರೂ ಸಮಸ್ಯೆ ಎದುರಿಸುವಂತಾಗಿದೆ. ಜಮೀನಿನಲ್ಲಿ ನಿರಂತರ ನೀರು ನಿಲ್ಲುವ ಕಾರಣ ಮನೆಗಳ ಗೋಡೆಗಳು ಹಾಗೂ ನೆಲಹಾಸು ತೇವಾಂಶ ಆವರಿಸಿ ಹಾನಿಯಾಗುತ್ತಿದೆ ಎಂದು ರೈತರು ಆತಂಕ ತೋಡಿಕೊಂಡಿದ್ದಾರೆ.
ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಅವೈಜ್ಞಾನಿವಕಾಗಿ ನಿರ್ಮಿಸಿರುವ ಕಾಲುವೆಗಳಿಂದ ಈ ಭಾಗದಲ್ಲಿ ರೈತರು ಸಮಸ್ಯೆ ಎದುರಿಸುವಂತಾಗಿದೆ. ನೀರು ಹರಿಸುವ ಸಾಮರ್ಥ್ಯಕ್ಕಿಂತ ಕಡಿಮೆ ಗಾತ್ರದ ಕಾಲುಗೆ ನಿರ್ಮಿಸಲಾಗಿದೆ. ನಿರ್ಮಿತ ಕಾಲುಗೆ ಸಮಾನಾಂತರವಾಗಿರದೇ ಏರು-ಇಳುವಿನಲ್ಲಿದ್ದು, ರೈತರ ಜಮೀನಿಗೆ ನೀರು ನುಗ್ಗಲು ಕಾರಣವಾಗಿದೆ ಎಂದು ದೂರಿದ್ದಾರೆ.
ಇಡೀ ಯೋಜನೆ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿ ಮಾಡಿದ್ದು, ಪ್ರತಿ ವರ್ಷ ಬೆಳೆ ನಷ್ಟ ಅನುಭವಿಸುವ ದುಸ್ಥಿತಿ ಇದೆ. ಕಾರಣ ಬೆಳೆಹಾನಿಯಾದ ರೈತರಿಗೆ ಪರಿಹಾರ ನೀಡುವ ಜೊತೆಗೆ ಅವೈಜ್ಞಾನಿಕ-ಕಳಪೆ ಕಾಮಗಾರಿ ಮಾಡಿರುವ ಅಧಿಕಾರಿಗಳು-ಗುತ್ತೇದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.