ರೋಣ: ನೆರೆಯ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕು ಡಾಣಕಶಿರೂರ ಗ್ರಾಮದ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆ ಮಹಿಳೆಯ ಸಂಪರ್ಕದಲ್ಲಿದ್ದ ತವರೂರಾದ ರೋಣ ಪಟ್ಟಣದ 20ನೇ ವಾರ್ಡ್ ವ್ಯಾಪ್ತಿಯ ಕೃಷ್ಣಾಪೂರ ಗ್ರಾಮವನ್ನು ತಾಲೂಕು ಆಡಳಿತ ಸೀಲ್‌ಡೌನ್ ಮಾಡಿದೆ.
ಬಾದಾಮಿ ತಾಲೂಕು ಡಾಣಕಶಿರೂರ ಗ್ರಾಮದ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲ್ಲೆಯಲ್ಲಿ ಗ್ರಾಮಕ್ಕೆ ಪುರಸಭೆ ಮುಖ್ಯಾಧಿ ಕಾರಿ ಭೇಟಿ ನೀಡಿ ಗ್ರಾಮದಲ್ಲಿ ದ್ರಾವಣ ಸಿಂಪಡಣೆ ಮಾಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಂತೆ ಜನತೆ ಆತಂಕಗೊಂಡರು. ಅಲ್ಲದೇ ತಾಲೂಕು ಟಾಸ್ಕ್ ಪೋರ್ಸ್ ಸಮಿತಿಯಿಂದ ಮನೆಯಿಂದಾಚೆ ಬರದಂತೆ ಧ್ವನಿವರ್ಧಕ ಮೂಲಕ ಗ್ರಾಮಸ್ಥರಿಗೆ ಸೂಚನೆ ನೀಡಿದರು.
ಎಲ್ಲ ರಸ್ತೆಗಳಿಗೆ ಬ್ಯಾರಿಕೇಡ್ ಹಾಕುವ ಮೂಲಕ 180 ಕುಟುಂಬಗಳಿರುವ ಗ್ರಾಮವನ್ನು ಸೀಲ್‌ಡೌನ್ ಮಾಡಿದ್ದಾರೆ. ಸೋಂಕಿತ ಮಹಿಳೆ ಪ್ರಥಮ ಸಂಪರ್ಕದಲ್ಲಿದ್ದ ಕುಟುಂಬದ 14 ಜನರನ್ನು ವಶಕ್ಕೆ ಪಡೆದು ಹೆಚ್ಚಿನ ಪರೀಕ್ಷೆಗಾಗಿ ಗದಗ ಜಿಲ್ಪಾಸ್ಪತ್ರೆ ಕಳಿಸಿದ್ದಾರೆ. ಕೊರೊನಾ ಸೋಂಕು ದೃಢಪಟ್ಟ ಬಾದಾಮಿ ತಾಲೂಕಿನ ಡಾಣಕಶಿರೂರ ಗ್ರಾಮದ ಮಹಿಳೆ ಇತ್ತೀಚೆಗೆ ತವರೂರಾದ ಕೃಷ್ಣಾಪೂರಕ್ಕೆ ಬಂದು ಹೋಗಿದ್ದಾರೆ. ಆದ್ದರಿಂದ ಮಹಿಳೆ ಸಂಪರ್ಕದಲ್ಲಿದ್ದ ಕುಟುಂಬಸ್ಥರು ಹಾಗೂ ಅವಳ ಆರೋಗ್ಯವನ್ನು ವಿಚಾರಿಸಲು ಮನೆಗೆ ಬಂದಿದ್ದ 14 ಜನ ಸಂಬಂಧಿ ಕರನ್ನು ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ಉಳಿದಂತೆ ದ್ವಿತೀಯ ಸಂಪರ್ಕದಲ್ಲಿದ ಸುಮಾರು 100ಕ್ಕೂ ಹೆಚ್ಚು ಜನರನ್ನು ವಸತಿ ನಿಲಯಕ್ಕೆ ಕಳುಹಿಸಲಾಗುವುದು
ಎಂದು ರೋಣ ತಹಶೀಲ್ದಾರ್ ಜೆ.ಬಿ. ಜಕ್ಕನಗೌಡ್ರ ತಿಳಿಸಿದರು. ಗ್ರಾಮಕ್ಕೆ ಡಿವೈಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಸುನೀಲ ಸವದಿ, ಪಿಎಸ್‌ಐ ಪರಮೇಶ್ವರ ಕವಟಗಿ ಗ್ರಾಮದಲ್ಲಿ ಮೊಕಾಂ ಹೂಡಿದ್ದಾರೆ.