ರೋಣ: ನವಿಲು ತೀರ್ಥ ಜಲಾಶಯದಿಂದ ಶನಿವಾರ ಮತ್ತೆ 70 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೊರ ಬಿಟ್ಟಿದ್ದು, ನದಿಗೆ ಹೊಂದಿಕೊಂಡಿರುವ ಹೊಳೆಆಲೂರು, ಹೊಳೆಹಡಗಲಿ, ಅಮರಗೋಳ, ಬಸರಕೋಡ, ಬಿ.ಎಸ್. ಬೇಲೇರಿ ಗ್ರಾಮಗಳಿಗೆ
ನಿಧಾನಗತಿಯಲ್ಲಿ ನೀರು ಧಾವಿಸುತ್ತಿದ್ದು, ಸಂತ್ರಸ್ತರಿಗೆ ಮತ್ತೆ ಆತಂಕ ಮೂಡಿಸಿದೆ.
ಆ. 5-6ರಿಂದ ನವಿಲು ತೀರ್ಥ ಜಲಾಶಯದಿಂದ ಕ್ರಮೇಣ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಮಲಪ್ರಭಾ ನದಿ ಅಕ್ಕಪಕ್ಕದಲ್ಲಿದ್ದ ಗ್ರಾಮಗಳು ಮುಳಗಿ ಸಾವಿರಾರು ಜನರು ಪ್ರವಾಹದಲ್ಲಿ ಸಿಲಿಕೊಂಡಿದ್ದರು. ಹೆಲಿಕಾಪ್ಟರ್, ಬೋಟ್ ಸೇರಿದಂತೆ ರಕ್ಷಣಾ ಇಲಾಖೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಜನರನ್ನು ರಕ್ಷಣೆ ಮಾಡಲಾಯಿತು. ಶುಕ್ರವಾರ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ನೆರೆ ಗ್ರಾಮಸ್ಥರು ತುಸು ನಿಟ್ಟುಹುಸಿರು ಬಿಟ್ಟಿದ್ದರು. ಆದರೆ ರವಿವಾರ ನದಿಯಲ್ಲಿ ಕ್ರಮೇಣವಾಗಿ ನೀರು ಹೆಚ್ಚಾಗುತ್ತಿರುವುದನ್ನು ನೋಡಿದರೆ ಮತ್ತೆ ನೆರೆ ಹಾವಳಿ ಸಂಭಂವಿಸಬಹುದು ಎಂದು ಸಂತ್ರಸ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ನದಿಯಿಂದ ಬಿಟ್ಟಿರುವ 70 ಸಾವಿರ ಕ್ಯೂಸೆಕ್ ನೀರು ನರಗುಂದ ತಾಲೂಕು ಕೊಣ್ಣೂರು ತಲುಪಿದ್ದು, ಯಾವ ಸಮಯದಲ್ಲಾದರೂ ಮತ್ತೆ ಗ್ರಾಮಗಳಿಗೆ ನೀರು ನುಗ್ಗಬಹುದು. ಆದ್ದರಿಂದ ಹೊಳೆಆಲೂರು ಸೇರಿದಂತೆ ಸುತ್ತ ಮುತ್ತಲಿನ ನೆರೆ ಹಾವಳಿಗೆ ತುತ್ತಾಗಿರುವ ಗ್ರಾಮಗಳ ಜನರು ಊರಲ್ಲಿರುವ ಮನೆಗೆಳಿಗೆ ತೆರಳದಂತೆ ಸೂಚನೆ ನೀಡಲಾಗಿದೆ.