Advertisement

ರೋಹಿತ್‌ ದಾಖಲಿಸಿದ ಶ್ರೇಷ್ಠ ಇನ್ನಿಂಗ್ಸ್‌ : ಕೊಹ್ಲಿ

11:32 PM Jun 06, 2019 | Sriram |

ಸೌತಾಂಪ್ಟನ್‌: ಇದು ರೋಹಿತ್‌ ಏಕದಿನದಲ್ಲಿ ದಾಖಲಿಸಿದ ಶ್ರೇಷ್ಠ ಇನ್ನಿಂಗ್ಸ್‌ ಎಂಬುದಾಗಿ ನಾಯಕ ವಿರಾಟ್‌ ಕೊಹ್ಲಿ ಪ್ರಶಂಸಿಸಿದ್ದಾರೆ. ಸೌತಾಂಪ್ಟನ್‌ ಗೆಲುವಿನ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

Advertisement

“ವಿಶ್ವಕಪ್‌ನ ಮೊದಲ ಪಂದ್ಯ ಯಾವತ್ತೂ ಹೆಚ್ಚು ಒತ್ತಡದ್ದಾಗಿರುತ್ತದೆ. ರೋಹಿತ್‌ ಇದನ್ನು ನಿಭಾಯಿಸಿದ ಪರಿ ಅಮೋಘ. ನನ್ನ ಪ್ರಕಾರ ಇದು ರೋಹಿತ್‌ ಅವರ ಏಕದಿನ ಬಾಳ್ವೆಯಲ್ಲೇ ಶ್ರೇಷ್ಠ ಇನ್ನಿಂಗ್ಸ್‌ ಆಗಿದೆ’ ಎಂದು ವಿರಾಟ್‌ ಕೊಹ್ಲಿ ಅವರು ಹೇಳಿದರು.

“ರೋಹಿತ್‌ ಎಂದಿನ ಆಕ್ರಮಣಕಾರಿ ಆಟ ಬಿಟ್ಟು ಸಂದರ್ಭಕ್ಕೆ ತಕ್ಕಂತೆ ತಾಳ್ಮೆ ಹಾಗೂ ಎಚ್ಚರಿಕೆಯ ಆಟವಾಡಿದರು. ಇಂಥ ಬೌನ್ಸಿ ಟ್ರ್ಯಾಕ್‌ನಲ್ಲಿ ಇದು ಅನಿ ವಾರ್ಯವೂ ಆಗಿತ್ತು. ಹೀಗಾಗಿ ಅವರ ಉಳಿದೆಲ್ಲ ಇನ್ನಿಂಗ್ಸ್‌ಗಳಿಗಿಂತ ಇದು ಮಿಗಿಲಾದುದು’ ಎಂಬುದಾಗಿ ಕೊಹ್ಲಿ ಅಭಿಪ್ರಾಯಪಟ್ಟರು.

ಭಾರತ ತನ್ನ 2ನೇ ಪಂದ್ಯವನ್ನು ರವಿವಾರ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ವಿರುದ್ಧ ಆಡಲಿದೆ.

ಆಫ್ರಿಕಾ ಕತೆ ಮುಗಿದಿಲ್ಲ!
ಮೂರೂ ಪಂದ್ಯಗಳನ್ನು ಸೋತಿರುವ ದಕ್ಷಿಣ ಆಫ್ರಿಕಾ ತೀವ್ರ ಸಂಕಟಕ್ಕೆ ಸಿಲುಕಿದೆ. ಮುಂದೇನು ಎಂಬ ಪ್ರಶ್ನೆ ಡು ಪ್ಲೆಸಿಸ್‌ ಪಡೆಯನ್ನು ಕಾಡುತ್ತಿದೆ. ಸಶಕ್ತ ಪಡೆಯನ್ನು ಹೊಂದಿಯೂ ಆಫ್ರಿಕಾ ಬೇಗನೇ ಕೂಟದಿಂದ ಹೊರಬೀಳುವುದೇ ಎಂಬ ಆತಂಕ ಅಭಿಮಾನಿಗಳದ್ದು.

Advertisement

ಸೆಮಿಫೈನಲ್‌ ಪ್ರವೇಶಿಸಬೇಕಾದರೆ ಕನಿಷ್ಠ 5 ಗೆಲುವು ಅನಿವಾರ್ಯ. ಅಷ್ಟೇ ಅಲ್ಲ, ಉತ್ತಮ ರನ್‌ರೇಟ್‌ ಕೂಡ ಅಗತ್ಯ. ಇನ್ನೂ 6 ಪಂದ್ಯಗಳಿರುವುದರಿಂದ ಆಫ್ರಿಕಾ ಕತೆ ಮುಗಿಯಿತು ಎಂಬ ತೀರ್ಮಾನಕ್ಕೆ ಬರುವುದು ಅವಸರದ ಕ್ರಮವಾಗುತ್ತದೆ.

ಧೋನಿ ವಿಶಿಷ್ಟ ಕೀಪಿಂಗ್‌ ದಾಖಲೆ
ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ಮಹೇಂದ್ರ ಸಿಂಗ್‌ ಧೋನಿ ವಿಶಿಷ್ಟ ಕೀಪಿಂಗ್‌ ದಾಖಲೆಯೊಂದನ್ನು ನಿರ್ಮಿಸಿದರು. ಇದು ಧೋನಿ ಕೀಪಿಂಗ್‌ ನಡೆಸಿದ 600ನೇ ಅಂತಾರಾಷ್ಟ್ರೀಯ ಇನ್ನಿಂಗ್ಸ್‌ ಆಗಿತ್ತು. ಧೋನಿ ಈ ಮೈಲುಗಲ್ಲು ನೆಟ್ಟ ವಿಶ್ವದ ಮೊದಲ ಕೀಪರ್‌. ಮಾರ್ಕ್‌ ಬೌಷರ್‌ (596), ಕುಮಾರ ಸಂಗಕ್ಕರ (499) ಮತ್ತು ಗಿಲ್‌ಕ್ರಿಸ್ಟ್‌ (485) ಅನಂತರದ ಸ್ಥಾನದಲ್ಲಿದ್ದಾರೆ.

33 ಸ್ಟಂಪಿಂಗ್‌
ಇದೇ ವೇಳೆ ಧೋನಿ ವಿಶ್ವಕಪ್‌ನಲ್ಲಿ 33ನೇ ಸ್ಟಂಪಿಂಗ್‌ ನಡೆಸಿದರು. ಈ ಸಾಧನೆಯಲ್ಲಿ ಅವರಿಗೀಗ 3ನೇ ಸ್ಥಾನ. ಸಂಗಕ್ಕರ (54), ಗಿಲ್‌ಕ್ರಿಸ್ಟ್‌ (52) ಮೊದಲೆರಡು ಸ್ಥಾನ ದಲ್ಲಿದ್ದಾರೆ. ಮೆಕಲಮ್‌ (32) 4ನೇ ಸ್ಥಾನಕ್ಕಿಳಿದರು.

ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ಕೀಪರ್‌ ಧೋನಿ ಭಾರತೀಯ ಸೇನೆಯ ಪ್ಯಾರಾ ಎಸ್‌ಎಫ್ ಬೆಟಾಲಿಯನ್‌ ಲಾಂಛನವುಳ್ಳ ಗ್ಲೌಸ್‌ ಧರಿಸಿದ್ದರು.ಆದರೆ ಇದು ಐಸಿಸಿ ನಿಯಮಕ್ಕೆ ವಿರುದ್ಧವಾದ್ದ‌ರಿಂದ ಲಾಂಛನವನ್ನು ತೆಗೆಯಲು ಸೂಚಿಸಲಾಗಿದೆ.

ಎಕ್ಸ್‌ಟ್ರಾ ಇನ್ನಿಂಗ್ಸ್‌
ಭಾರತ-ದಕ್ಷಿಣ ಆಫ್ರಿಕಾ
– ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್‌ನಲ್ಲಿ ಭಾರತ 2ನೇ ಗೆಲುವು ದಾಖಲಿಸಿತು. ಇವೆರಡೂ ಸತತ ಗೆಲುವುಗಳಾಗಿವೆ. ಮೊದಲ ಜಯ 2015ರಲ್ಲಿ ಒಲಿದಿತ್ತು.
– ದಕ್ಷಿಣ ಆಫ್ರಿಕಾ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಸತತ 4 ಪಂದ್ಯಗಳನ್ನು ಸೋತಿತು. ಒಂದು ಸೋಲು ಕಳೆದ ಕೂಟದಲ್ಲಿ ಎದುರಾಗಿತ್ತು.
– ಐಸಿಸಿ ಕೂಟಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಕಳೆದ ಆರೂ ಪಂದ್ಯಗಳನ್ನು ಭಾರತ ಜಯಿಸಿತು. ವಿಶ್ವಕಪ್‌ನಲ್ಲಿ 2 (2015 ಮತ್ತು 2019), ಟಿ20 ವಿಶ್ವಕಪ್‌ನಲ್ಲಿ 2 (2012 ಮತ್ತು 2014) ಮತ್ತು ಚಾಂಪಿಯನ್ಸ್‌ ಟ್ರೋಫಿ ಕೂಟದಲ್ಲಿ 2 ಜಯ ಒಲಿದಿದೆ (2013 ಮತ್ತು 2017).
– ಯಜುವೇಂದ್ರ ಚಹಲ್‌ ವಿಶ್ವಕಪ್‌ ಪದಾರ್ಪಣ ಪಂದ್ಯದಲ್ಲೇ 4 ವಿಕೆಟ್‌ ಉರುಳಿಸಿದ ಭಾರತದ 3ನೇ ಬೌಲರ್‌ ಎನಿಸಿದರು. ಉಳಿದಿಬ್ಬರೆಂದರೆ ದೇಬಶಿಷ್‌ ಮೊಹಂತಿ (1999ರಲ್ಲಿ ಕೀನ್ಯಾ ವಿರುದ್ಧ 56ಕ್ಕೆ 4) ಮತ್ತು ಮೊಹಮ್ಮದ್‌ ಶಮಿ (2015ರಲ್ಲಿ ಪಾಕಿಸ್ಥಾನ ವಿರುದ್ಧ 35ಕ್ಕೆ 4).
– ರೋಹಿತ್‌ ಅಜೇಯ 122 ರನ್‌ ಬಾರಿಸಿದರು. ಇದು ವಿಶ್ವಕಪ್‌ ಚೇಸಿಂಗ್‌ ವೇಳೆ ದಾಖಲಾದ ಭಾರತೀಯರ 2ನೇ ಸರ್ವಾಧಿಕ ವೈಯಕ್ತಿಕ ಗಳಿಕೆ. 1996ರ ಕೀನ್ಯಾ ಎದುರಿನ ಪಂದ್ಯದಲ್ಲಿ ಸಚಿನ್‌ 127 ರನ್‌ ಬಾರಿಸಿದ್ದು ದಾಖಲೆ.
– ರೋಹಿತ್‌ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಹೊಡೆದ ಭಾರತದ 3ನೇ ಕ್ರಿಕೆಟಿಗ. ಉಳಿದಿಬ್ಬರೆಂದರೆ ತೆಂಡುಲ್ಕರ್‌ (111) ಮತ್ತು ಶಿಖರ್‌ ಧವನ್‌ (137). ಇವರಿಬ್ಬರೂ ಮೊದಲು ಬ್ಯಾಟಿಂಗ್‌ ನಡೆಸಿದ ವೇಳೆ ಶತಕ ಬಾರಿಸಿದ್ದರು.
– ಭಾರತ ವಿಶ್ವಕಪ್‌ನಲ್ಲಿ 230 ಹಾಗೂ ಇದಕ್ಕಿಂತ ಕಡಿಮೆ ಮೊತ್ತದ ಚೇಸಿಂಗ್‌ ವೇಳೆ ಎಲ್ಲ 15 ಪಂದ್ಯಗಳನ್ನು ಜಯಿಸಿತು.
– ರೋಹಿತ್‌ ಶರ್ಮ ಆರಂಭಿಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8 ಸಾವಿರ ರನ್‌ ಪೂರ್ತಿಗೊಳಿಸಿದ ಭಾರತದ 7ನೇ ಕ್ರಿಕೆಟಿಗನೆನಿಸಿದರು.
– ರೋಹಿತ್‌ ಶರ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 12 ಸಾವಿರ ರನ್‌ ಪೂರೈಸಿದರು. ಈ ಸಾಧನೆಗಾಗಿ ಅವರಿಗೆ 74 ರನ್‌ ಅಗತ್ಯವಿತ್ತು.
– ವಿರಾಟ್‌ ಕೊಹ್ಲಿ ಏಕದಿನದಲ್ಲಿ 50 ಗೆಲುವು ಸಾಧಿಸಿದ ನಾಯಕನಾಗಿ ಮೂಡಿಬಂದರು. ಇದು ನಾಯಕನಾಗಿ ಅವರ 69ನೇ ಪಂದ್ಯವಾಗಿತ್ತು. ಇವರಿಗಿಂತ ಕಡಿಮೆ ಪಂದ್ಯಗಳಲ್ಲಿ 50 ಗೆಲುವು ಕಂಡ ಕಪ್ತಾನರೆಂದರೆ ಕ್ಲೈವ್‌ ಲಾಯ್ಡ (63), ರಿಕಿ ಪಾಂಟಿಂಗ್‌ (63) ಮತ್ತು ಹ್ಯಾನ್ಸಿ ಕ್ರೋನಿಯೆ (68 ಪಂದ್ಯ).

Advertisement

Udayavani is now on Telegram. Click here to join our channel and stay updated with the latest news.

Next