ಮುಂಬಯಿ: ಟಿ 20 ವಿಶ್ವಕಪ್ ವಿಜೇತ ತಂಡದ ರಾಜ್ಯದ ನಾಲ್ವರು ಆಟಗಾರರಾದ ಕಪ್ತಾನ ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಅವರನ್ನು ಶುಕ್ರವಾರ ಮಾಹಾರಾಷ್ಟ್ರ ವಿಧಾನ ಭವನದಲ್ಲಿ ಅಭಿನಂದಿಸಲಾಯಿತು.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಮ್ಯಾಚ್ ಡಿಫೈನಿಂಗ್ ಕ್ಯಾಚ್ ಹಿಡಿದ ಸೂರ್ಯಕುಮಾರ್ ಯಾದವ್ ಅವರು ಮಾತನಾಡಲು ಎದ್ದು ನಿಂತಾಗ ಸಚಿವರು, ಶಾಸಕರು ಸೇರಿದಂತೆ ಸೆಂಟ್ರಲ್ ಹಾಲ್‌ನಲ್ಲಿದ್ದವರು ಕ್ಯಾಚ್ ಕುರಿತು ಮಾತನಾಡಬೇಕು ಎಂದು ಕೂಗಿದರು.
“ಕ್ಯಾಚ್ ಬಸ್ಲಾ ಹತಾತ್ (ಕ್ಯಾಚ್ ನನ್ನ ಕೈಗೆ ಬಂದು ಕೂತಿತು)” ಎಂದು ಸೂರ್ಯಕುಮಾರ್ ಮರಾಠಿಯಲ್ಲಿ ಹೇಳಿದರು, ಎಲ್ಲರೂ ಜೋರಾಗಿ ಹರ್ಷೋದ್ಗಾರ ಮಾಡಿದರು. ನಂತರ ಅವರು ಕ್ಯಾಚ್ ಅನ್ನು ಹೇಗೆ ತೆಗೆದುಕೊಂಡರು ಎಂದು ತಮ್ಮ ಕೈಗಳಿಂದ ಸನ್ನೆ ಮಾಡುತ್ತಾ ಮರು ಸೃಷ್ಟಿ ಮಾಡಿ ಭರ್ಜರಿ ಮನರಂಜನೆ ನೀಡಿದರು.
ಸೂರ್ಯಕುಮಾರ್ ನಂತರ ಮಾತನಾಡಿದ ತಂಡದ ನಾಯಕ ರೋಹಿತ್ ಶರ್ಮ, “ಬಾಲ್ ತನ್ನ ಕೈಯಲ್ಲಿ “ಕುಳಿತಿದೆ” ಎಂದು ಸೂರ್ಯ ಈಗ ಹೇಳಿದ್ದಾರೆ. ಚೆಂಡು ಅವರ ಕೈಯಲ್ಲಿ ಕುಳಿತಿರುವುದು ಒಳ್ಳೆಯದಾಯಿತು ಇಲ್ಲದಿದ್ದರೆ ನಾನು ಅವರನ್ನು ‘ತಂಡದಿಂದ ಹೊರಗೆ ಕೂರಿಸುತ್ತಿದ್ದೆ’ ಎಂದು ಹೇಳಿದಾಗ ಸಂಪೂರ್ಣ ಸದನ ನಗೆಗಡಲಲ್ಲಿ ತೇಲಿತು.
ರೋಹಿತ್ ತಮ್ಮ ಮರಾಠಿ ಭಾಷಣದಲ್ಲಿ, “ಭಾರತದಲ್ಲಿ ವಿಶ್ವಕಪ್ ಅನ್ನು ಮರಳಿ ತರುವುದು ಕನಸಾಗಿತ್ತು. ಇದಕ್ಕಾಗಿ ನಾವು 11 ವರ್ಷದಿಂದ ಕಾಯುತ್ತಿದ್ದೆವು. 2013ರಲ್ಲಿ ನಾವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದೆವು. ನನ್ನ ಸಹ ಆಟಗಾರರಾದ ಶಿವಂ ದುಬೆ, ಸೂರ್ಯ ಮತ್ತು ಯಶಸ್ವಿ ಜೈಸ್ವಾಲ್ ಮಾತ್ರವಲ್ಲದೆ ಭಾರತದ ಯಶಸ್ಸಿಗೆ ಕೊಡುಗೆ ನೀಡಿದ ಎಲ್ಲರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇಂತಹ ತಂಡ ಸಿಕ್ಕಿದ್ದು ನನ್ನ ಅದೃಷ್ಟ. ಎಲ್ಲರೂ ತಮ್ಮ ಪ್ರಯತ್ನದಲ್ಲಿ ಗಟ್ಟಿಯಾಗಿದ್ದರು. ಅವಕಾಶ ಬಂದಾಗ ಎಲ್ಲರೂ ಹೆಜ್ಜೆ ಹಾಕಿದರು ಎಂದರು.
ಶುಕ್ರವಾರದಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ತಮ್ಮ ಅಧಿಕೃತ ನಿವಾಸ ವರ್ಷಾದಲ್ಲಿ ರೋಹಿತ್ ಶರ್ಮ, ಯಶಸ್ವಿ ಜೈಸ್ವಾಲ್, ಶಿವಂ ದುಬೆ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಸನ್ಮಾನಿಸಿದರು.