ಕೆಲವು ಕ್ರಿಕೆಟಿಗರನ್ನು ಹೀಗೆಯೇ ಎಂದು ಹೇಳಲು ಸಾಧ್ಯವಿಲ್ಲ. ಅವರನ್ನು ಹೇಗೆ ಭಾವಿಸ ಬೇಕು ಎಂದು ಗೊತ್ತಾಗುವುದಿಲ್ಲ. ಇವರು ಆಡಲು ಸಾಧ್ಯವೇ ಇಲ್ಲ, ಅದರಲ್ಲೂ ಇಂತಹ ತಂಡದೆದುರು, ಇಂತಹ ಅಂಕಣದಲ್ಲಂತೂ ಸಾಧ್ಯವೇ ಇಲ್ಲ ಎಂದು ತಜ್ಞರು ಹೇಳಿ ಮುಗಿಸುವಷ್ಟರಲ್ಲೇ ವಿಶ್ವದಾಖಲೆಗಳ ಮೇಲೆ ವಿಶ್ವದಾಖಲೆ ನಿರ್ಮಿಸುತ್ತಾರೆ. ಇಂತಹ ಆಟಗಾರರ ಸಾಲಿನಲ್ಲಿ ಬರುವುದು ರೋಹಿತ್ ಶರ್ಮ.
ವಿಶ್ವಕಪ್‌ಗ್ೂ ಮುಂಚೆ ಭಾರತ ತನ್ನದೇ ನೆಲದಲ್ಲಿ ಆಸ್ಟ್ರೇಲಿಯ ವಿರುದ್ಧ 3 ಟಿ20 ಮತ್ತು 5 ಏಕದಿನ ಪಂದ್ಯಗಳನ್ನಾಡಿತ್ತು. ಅದರಲ್ಲಿ ಕ್ರಮವಾಗಿ ರೋಹಿತ್ ಸಾಧನೆ ಹೀಗಿದೆ ನೋಡಿ: 5, 37 (ಟಿ20), 37, 0, 14, 95, 56 (ಏಕದಿನ). ಕೊನೆಯೆರಡು ಪಂದ್ಯಗಳನ್ನು ಹೊರತುಪಡಿಸಿ, ಅವರ ಸಾಧನೆ ಸಂಪೂರ್ಣ ಶೂನ್ಯ. ಅನಂತರ ರೋಹಿತ್ ಐಪಿಎಲ್ನಲ್ಲಿ ಆಡಿದರು. ಅವರ ತಂಡವೇ ಪ್ರಶಸ್ತಿ ಗೆದ್ದರೂ, ರೋಹಿತ್ ಸಾಧನೆ ಹೇಳಿಕೊಳ್ಳುವ ಮಟ್ಟಕ್ಕೆ ಬರಲೇ ಇಲ್ಲ. ಇಂತಹ ರೋಹಿತ್ ಶರ್ಮ ಅವರನ್ನಿಟ್ಟುಕೊಂಡ ಭಾರತ ತಂಡ ವಿಶ್ವಕಪ್‌ಗೆ ಬಂದಾಗ ರೋಹಿತ್ ಮೇಲೆ ನಂಬಿಕೆಯಿಡಲೇಬೇಕಾದ ಅನಿವಾರ್ಯ ಹೊಂದಿತ್ತು. ರೋಹಿತ್ ಮೇಲೆ ನಿರೀಕ್ಷೆಯಿದ್ದರೂ, ನಂಬಿಕೆಯಿರಲಿಲ್ಲ.
ವಿಶ್ವಕಪ್ ಮೊದಲ ಪಂದ್ಯದಲ್ಲಿ ಭಾರತ ದ.ಆಫ್ರಿಕಾವನ್ನು ಎದುರಿಸುತ್ತಿದ್ದಂತೆ, ಎಲ್ಲ ಲೆಕ್ಕಾಚಾರಗಳೂ ಬದಲಾದವು. ಅದನ್ನು ಸಾಧಿಸಿದ್ದು ರೋಹಿತ್ ಶರ್ಮ. ಅಚ್ಚರಿಯೆಂದರೆ ನಾಯಕ ಕೊಹ್ಲಿಗೆ ಕೆಲಸವೇ ಇಲ್ಲದಂತೆ ರೋಹಿತ್ ಮಾಡಿದರು.
ಮೊದಲ ಪಂದ್ಯದಲ್ಲೇ ರೋಹಿತ್ ಶರ್ಮ ಅದ್ಭುತ ಶತಕ ಬಾರಿಸಿದರು ಮುಂದೆ ಆಸ್ಟ್ರೇಲಿಯ ವಿರುದ್ಧ ಅರ್ಧಶತಕ, ಪಾಕಿಸ್ಥಾನದ ವಿರುದ್ಧ ಸೆಂಚುರಿ ಹೊಡೆದರು. ಆಫ್ಘಾನಿಸ್ಥಾನ, ವೆಸ್ಟ್ ಇಂಡೀಸ್ ವಿರುದ್ಧ ವಿಫಲರಾದರು. ಅನಂತರ ನಡೆದ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ರೋಹಿತ್ ತಿರುಗಿಬಿದ್ದರು. ಒಂದರ ಹಿಂದೊಂದರಂತೆ ಶತಕ ಬಾರಿಸಿದರು. ಸಾಲುಸಾಲು ದಾಖಲೆಗಳನ್ನು ರೋಹಿತ್ ನಿರ್ಮಿಸಿದರು. ಕೊಹ್ಲಿ ಹೇಗೆ ಆಡಿದ ಪಂದ್ಯಗಳಲ್ಲೆಲ್ಲ ಒಂದು ವಿಶ್ವದಾಖಲೆ ನಿರ್ಮಿಸುವ ತಾಕತ್ತು ಹೊಂದಿದ್ದಾರೊ ಹಾಗೆಯೇ ರೋಹಿತ್ ಕೂಡ. ಏಕದಿನದಲ್ಲಿ ಗರಿಷ್ಠ ಶತಕ ಗಳಿಸಿದ ಆಟಗಾರರ ಪೈಕಿ ರೋಹಿತ್ ಈಗ 6ನೇ ಸ್ಥಾನದಲ್ಲಿದ್ದಾರೆ. ಅವರ ಶತಕಗಳ ಸಂಖ್ಯೆ 26. ಇನ್ನು 5 ಶತಕ ಬಾರಿಸಿದರೆ ರೋಹಿತ್ ವಿಶ್ವದಲ್ಲಿ 3ನೇ ಗರಿಷ್ಠ ಶತಕಧಾರಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ. ಮುಂದೆ ಅವರು ನೇರವಾಗಿ ಸವಾಲೊಡ್ಡುವುದು ವಿರಾಟ್ ಕೊಹ್ಲಿ ಹಾಗೂ ಸಚಿನ್ ತೆಂಡುಲ್ಕೂರ್‌ಗೆ. ಈ ಪೈಕಿ ಸಚಿನ್ ನಿವೃತ್ತಿಯಾಗಿರುವುದರಿಂದ ರೋಹಿತ್‌ಗೆ ಅವರನ್ನು ಮೀರುವುದು ಅಸಾಧ್ಯವಾಗುವುದಿಲ್ಲ. ಆದರೆ ಕೊಹ್ಲಿ ಮಾತ್ರ ಸವಾಲಾಗಿಯೇ ಉಳಿಯಬಹುದು. ಇವರಿಬ್ಬರ ಶತಕಗಳ ಸಂಖ್ಯೆಯಲ್ಲಿ ಅಗಾಧ ಅಂತರವಿದೆ.
ಸಚಿನ್ ಭವಿಷ್ಯ ಸತ್ಯವಾಯ್ತು
ಕೆಲವು ವರ್ಷಗಳ ಹಿಂದೆ ಸಚಿನ್ ತೆಂಡಲ್ಕರ್‌ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದೇ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರೂ ಇದ್ದರು. ಆಗಿನ್ನೂ ಈ ಇಬ್ಬರು ತೀರಾ ಕಿರಿಯರು. ಅಂತಾರಾಷ್ಟ್ರೀಯ ಕ್ರಿಕೆಟಿನ ಕೂಸುಗಳು. ಅಂತಹ ಹೊತ್ತಿನಲ್ಲಿ ಕಾರ್ಯಕ್ರಮದ ನಿರೂಪಕರು, ನಿಮ್ಮ ದಾಖಲೆಗಳನ್ನೆಲ್ಲ ಮುರಿಯಬಲ್ಲವರೆಲ್ಲ ಯಾರಾದರೂ ಇದ್ದಾರಾ ಎಂದು ಸಚಿನ್ ಅವರಲ್ಲಿ ಪ್ರಶ್ನಿಸಿದರು. ಅದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಸಚಿನ್, ಇಲ್ಲೇ ಇದ್ದಾರೆ ನೋಡಿ ಅವರಿಬ್ಬರು ಎನ್ನುತ್ತ, ಕೊಹ್ಲಿ, ರೋಹಿತ್‌ರತ್ತ ಕೈತೋರಿದ್ದರು. ಅವರು ಹಾಗೆ ಹೇಳಿದ ಕೆಲವೇ ತಿಂಗಳುಗಳಲ್ಲಿ ಈ ಇಬ್ಬರು ಅದನ್ನು ಸಾಬೀತು ಮಾಡುತ್ತ ಸಾಗಿದರು. ವಿಶ್ವ ಕ್ರಿಕೆಟಿನಲ್ಲಿ ಮೂರು ದ್ವಿಶತಕ ಹೊಡೆದು ಯಾರೂ ಮಾಡದ ಸಾಧನೆಯನ್ನು ರೋಹಿತ್ ಮಾಡಿದರೆ, ಶತಕಗಳ ಮೇಲೆ ಶತಕ ಬಾರಿಸಿ ಕೊಹ್ಲಿ ಸಮಕಾಲೀನ ಕ್ರಿಕೆಟಿನ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.