ನವದೆಹಲಿ: ಪ್ರವಾಸಿ ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಉಪನಾಯಕ ಅಜಿಂಕ್ಯ ರಹಾನೆ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ.
ಗುರುವಾರ ಬಿಸಿಸಿಐ ಹಾಗೂ ರಾಷ್ಟ್ರೀಯ ಆಯ್ಕೆ ವಲಯದಲ್ಲಿ ನಡೆದ ಸುದೀರ್ಘ ಚರ್ಚೆಯ ಬಳಿಕ ರಹಾನೆ ಹೆಸರನ್ನು ಅಂತಿಮಗೊಳಿಸಲಾಗಿದೆ.
ಇದು 2 ಪಂದ್ಯಗಳ ಕಿರು ಟೆಸ್ಟ್ ಸರಣಿ. ಮೊದಲ ಟೆಸ್ಟ್ ಪಂದ್ಯ ನ. 25ರಿಂದ ಕಾನ್ಪುರದಲ್ಲಿ ನಡೆಯಲಿದ್ದು, ಇಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ಈಗಾಗಲೇ ನಿರ್ಧರಿಸಿತ್ತು. ಉಪನಾಯಕ ರಹಾನೆ ಅವರಿಗೆ ನಾಯಕತ್ವ ನೀಡುವುದು ಸೂಕ್ತ ನಿರ್ಧಾರವಾದರೂ ಅವರ ಇತ್ತೀಚಿನ ಕಳಪೆ ಫಾರ್ಮ್ ತೀವ್ರ ಚಿಂತೆಗೆ ಕಾರಣವಾಗಿದೆ.
ಇದನ್ನೂ ಓದಿ:ಪೇಜಾವರ ಶ್ರೀ ಪದ್ಮವಿಭೂಷಣಕ್ಕೆ ಭವ್ಯ ಸ್ವಾಗತ
ಟೆಸ್ಟ್ ಸರಣಿಗೆ ಬುಮ್ರಾ, ಶಮಿ, ಪಂತ್, ಠಾಕೂರ್ ಅವರಿಗೆಲ್ಲ ವಿಶ್ರಾಂತಿ ನೀಡುವುದು ಬಹುತೇಕ ಖಚಿತಗೊಂಡಿದೆ. ಹಾಗೆಯೇ ರೋಹಿತ್ ಶರ್ಮ ಕೂಡ ಹೊರಗುಳಿಯಲು ನಿರ್ಧರಿಸಿದ್ದಾರೆ. ಆಗ ಅಗರ್ವಾಲ್-ಗಿಲ್ ಓಪನರ್‌ಗಳಾಗಿ ಕಣಕ್ಕಿಳಿಯಬಹುದು. ರಾಹುಲ್, ವಿಹಾರಿ, ಸಹಾ ಟೆಸ್ಟ್ ತಂಡದ ಇತರ ಸದಸ್ಯರು ಎಂಬ ಮಾಹಿತಿ ಲಭಿಸಿದೆ. ಮುಂಬೈನಲ್ಲಿ ನಡೆಯುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ವಾಪಸಾಗಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.