Advertisement

ರೋಹಿತ್‌ ಶರ್ಮ ಜೀವನಶ್ರೇಷ್ಠ ಸಾಧನೆ

11:16 PM Oct 08, 2019 | mahesh |

ದುಬಾೖ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿ ಮಿಂಚಿದ್ದ ಭಾರತದ ಹಿಟ್‌ ಮ್ಯಾನ್‌ ರೋಹಿತ್‌ ಶರ್ಮ ಅವರು ನೂತನ ಐಸಿಸಿ ಟೆಸ್ಟ್‌ ಬ್ಯಾಟ್ಸ್‌ಮನ್‌ ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಸಾಧನೆಗೈದಿದ್ದಾರೆ.

Advertisement

ಆರಂಭಿಕರಾಗಿ ತನ್ನ ಚೊಚ್ಚಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರು ರ್‍ಯಾಂಕಿಂಗ್‌ನಲ್ಲಿ ಭಾರೀ ಜಿಗಿತ ಕಂಡಿದ್ದಾರೆ. 36 ಸ್ಥಾನಗಳ ಜಿಗಿತ ಕಂಡಿರುವ ರೋಹಿತ್‌ ತನ್ನ ಜೀವನಶ್ರೇಷ್ಠ 17ನೇ ಸ್ಥಾನವನ್ನು ಪಡೆದಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ ಟೆಸ್ಟ್‌ನಲ್ಲಿ ಅವರು 176 ಮತ್ತು 127 ರನ್‌ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ರೋಹಿತ್‌ ಅವರ ಸಾಹಸದ ಬ್ಯಾಟಿಂಗ್‌ನಿಂದಾಗಿ ಟೀಂ ಇಂಡಿಯಾ 3 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಇದೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಸಾಧನೆ ಮಾಡಿದ್ದ ಕನ್ನಡಿಗ ಮಾಯಾಂಕ್‌ ಅಗರ್ವಾಲ್‌ ಕೂಡ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 25ನೇ ಸ್ಥಾನಕ್ಕೇರಿದ ಸಾಧನೆ ಮಾಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ದ್ವಿತೀಯ ಸ್ಥಾನವನ್ನು ಉಳಿಸಿಕೊಂಡಿದ್ದರೂ ರ್‍ಯಾಂಕಿಂಗ್‌ ಪಟ್ಟಿಯ ಅಂಕಗಳಲ್ಲಿ ಮೊದಲ ಬಾರಿ 900 ಪ್ಲಸ್‌ ಅಂಕಕ್ಕಿಂತ ಕಡಿಮೆ ಪಡೆದಿದ್ದಾರೆ. ಪ್ರಸ್ತುತ ಅವರು 899 ಅಂಕ ಹೊಂದಿದ್ದಾರೆ. ಕೊಹ್ಲಿ ಅವರಿಗಿಂತ 38 ಅಂಕ ಹೆಚ್ಚು ಹೊಂದಿರುವ ಆಸೀಸ್‌ ಆಟಗಾರ ಸ್ಟೀವನ್‌ ಸ್ಮಿತ್‌ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಟೆಸ್ಟ್‌ ಬೌಲಿಂಗ್‌ನಲ್ಲಿ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಅಗ್ರ ಹತ್ತ ರೊಳಗಿನ ಸ್ಥಾನಕ್ಕೆ ಮರಳಿದ್ದಾರೆ. ವಿಶಾಖಪಟ್ಟಣ ಟೆಸ್ಟ್‌ನಲ್ಲಿ 8 ವಿಕೆಟ್‌ ಕಿತ್ತಿರುವ ಅವರು ನಾಲ್ಕು ಸ್ಥಾನ ಏರಿ 10ನೇ ಸ್ಥಾನ ತಲುಪಿದ್ದಾರೆ.

ಅಗ್ರಸ್ಥಾನದಲ್ಲಿ ಭಾರತ
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಗೆದ್ದ ಕಾರಣ ಭಾರತ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ 40 ಅಂಕ ಗಳಿಸಿದ್ದು ಒಟ್ಟಾರೆ 160 ಅಂಕ ಸಂಪಾದಿಸಿದೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡು ಪಂದ್ಯಗಳ ಸರಣಿ ಗೆದ್ದ ಕಾರಣ ತಂಡ 120 ಅಂಕ ಗಳಿಸಿತ್ತು. ನ್ಯೂಜಿಲ್ಯಾಂಡ್‌ ಮತ್ತು ಶ್ರೀಲಂಕಾ ತಲಾ 60 ಅಂಕ ಹೊಂದಿದ್ದರೆ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ತಲಾ 56 ಅಂಕ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next