Advertisement

ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌: ಟಾಪ್‌-10 ಯಾದಿಯಲ್ಲಿ ರೋಹಿತ್‌

09:52 AM Oct 25, 2019 | Sriram |

ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಬುಧವಾರ ಬಿಡುಗಡೆ ಮಾಡಿದ ನೂತನ ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ರೋಹಿತ್‌ ಶರ್ಮ ಮೊದಲ ಸಲ ಟಾಪ್‌-10 ಯಾದಿಯಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 3 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮೊದಲ ಸಲ ಆರಂಭಿಕನ ಜವಾಬ್ದಾರಿ ಹೊತ್ತ ರೋಹಿತ್‌ ಶರ್ಮ 529 ರನ್‌ ಪೇರಿಸಿದ್ದರು. ಇದರಲ್ಲಿ 2 ಶತಕ ಹಾಗೂ ಚೊಚ್ಚಲ ದ್ವಿಶತಕ ಸೇರಿತ್ತು. ಈ ಸಾಧನೆಯಿಂದ 12 ಸ್ಥಾನಗಳ ಜಿಗಿತ ಕಂಡ ರೋಹಿತ್‌, 10ನೇ ಸ್ಥಾನ ಅಲಂಕರಿಸಿದ್ದಾರೆ.


ರಾಂಚಿ ಟೆಸ್ಟ್‌ ಪಂದ್ಯದಲ್ಲಿ ಅಮೋಘ ಶತಕದೊಂದಿಗೆ ಮೆರೆದ ಉಪನಾಯಕ ಅಜಿಂಕ್ಯ ರಹಾನೆ 4 ಸ್ಥಾನಗಳ ಭಡ್ತಿ ಪಡೆದು 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ನಾಯಕ ವಿರಾಟ್‌ ಕೊಹ್ಲಿ ನಂ. 2 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಆದರೆ ಅವರ ಅಂಕವೀಗ 926ಕ್ಕೆ ಇಳಿದಿದೆ. ಹೀಗಾಗಿ ಸ್ಮಿತ್‌-ಕೊಹ್ಲಿ ನಡುವಿನ ಅಂಕಗಳ ಅಂತರವೀಗ 11ಕ್ಕೆ ಏರಿದೆ.

ಉಳಿದಂತೆ ಚೇತೇಶ್ವರ ಪೂಜಾರ 4ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆರಂಭಕಾರ ಮಾಯಾಂಕ್‌ ಅಗರ್ವಾಲ್‌ 18ನೇ ಸ್ಥಾನದಲ್ಲಿದ್ದಾರೆ.

ಶಮಿ, ಯಾದವ್‌ ಅತ್ಯಧಿಕ ಅಂಕ
ಬೌಲಿಂಗ್‌ ವಿಭಾಗದಲ್ಲಿ ಮೊಹಮ್ಮದ್‌ ಶಮಿ ಮತ್ತು ಉಮೇಶ್‌ ಯಾದವ್‌ ಗರಿಷ್ಠ ಅಂಕ ಸಂಪಾದಿಸಿದ್ದಾರೆ. ಶಮಿ 751 ಅಂಕಗಳೊಂದಿಗೆ 15ನೇ ಸ್ಥಾನದಲ್ಲಿದ್ದರೆ, ಯಾದವ್‌ 624 ಅಂಕಗಳೊಂದಿಗೆ 24ನೇ ಸ್ಥಾನಿಯಾಗಿದ್ದಾರೆ.

Advertisement

ತಂಡ ರ್‍ಯಾಂಕಿಂಗ್‌ನಲ್ಲಿ ಭಾರತ ಅಗ್ರಸ್ಥಾನದಲ್ಲೇ ವಿರಾಜಮಾನವಾಗಿದೆ (119 ಅಂಕ). ದಕ್ಷಿಣ ಆಫ್ರಿಕಾ ನಾಲ್ಕರಲ್ಲಿದೆ (102).

Advertisement

Udayavani is now on Telegram. Click here to join our channel and stay updated with the latest news.

Next