Advertisement

ICC ODI Rankings: ಭಾರತ ನಂ.1, ರೋಹಿತ್‌ ನಂ.5

07:15 AM Oct 03, 2017 | Team Udayavani |

ದುಬಾೖ: ಐಸಿಸಿಯ ನೂತನ ಏಕದಿನ ರ್‍ಯಾಂಕಿಂಗ್‌ ಯಾದಿ ಸೋಮವಾರ ಅಧಿಕೃತವಾಗಿ ಪ್ರಕಟಗೊಂಡಿದೆ. ಭಾರತ ಒಟ್ಟು 120 ಅಂಕಗಳೊಂದಿಗೆ ನಂ.1 ತಂಡವಾಗಿ ಮೂಡಿಬಂದರೆ, ಆರಂಭಕಾರ ರೋಹಿತ್‌ ಶರ್ಮ 5ನೇ ಸ್ಥಾನ ಅಲಂಕರಿಸಿದರು.

Advertisement

ಆಸ್ಟ್ರೇಲಿಯ ವಿರುದ್ಧದ ಸರಣಿಗೂ ಮುನ್ನ ಭಾರತ 3ನೇ ಸ್ಥಾನದಲ್ಲಿತ್ತು. ಆಗ ದಕ್ಷಿಣ ಆಫ್ರಿಕಾ ನಂ.1, ಆಸ್ಟ್ರೇಲಿಯ ನಂ.2 ಆಗಿತ್ತು. ಈಗ ಈ ಮೂರೂ ತಂಡಗಳ ಸ್ಥಾನಪಲ್ಲಟವಾಗಿದೆ. ಭಾರತ ಅಗ್ರಸ್ಥಾನ ಅಲಂಕರಿಸಿದೆ (120). ದಕ್ಷಿಣ ಆಫ್ರಿಕಾ 2ನೇ ಸ್ಥಾನಕ್ಕೆ ಇಳಿದಿದೆ (119). ಆಸ್ಟ್ರೇಲಿಯ ಮೂರಕ್ಕೆ ಕುಸಿದಿದೆ (114). ಇಂಗ್ಲೆಂಡ್‌ ಕೂಡ 114 ಅಂಕ ಹೊಂದಿದ್ದರೂ ದಶಮಾಂಶ ಲೆಕ್ಕಾಚಾರದಲ್ಲಿ ಆಸೀಸ್‌ ಸ್ವಲ್ಪ ಮುಂದಿದೆ. ಇಂಗ್ಲೆಂಡ್‌ ಇತ್ತೀಚೆಗಷ್ಟೇ ವೆಸ್ಟ್‌ ಇಂಡೀಸ್‌ ಎದುರಿನ 5 ಪಂದ್ಯಗಳ ಸರಣಿಯನ್ನು 4-0 ಅಂತರದಿಂದ ಗೆದ್ದಿತ್ತು.

ಆಸ್ಟ್ರೇಲಿಯ ವಿರುದ್ಧ 3-0 ಮುನ್ನಡೆ ಸಾಧಿಸಿದಾಗ ಭಾರತ ನಂ.1 ಸ್ಥಾನಕ್ಕೆ ಏರಿತಾದರೂ ಬೆಂಗಳೂರಿನಲ್ಲಿ ಸೋತೊಡನೆ ಮತ್ತೆ ಎರಡಕ್ಕೆ ಜಾರಿತ್ತು. ನಾಗ್ಪುರ ಗೆಲುವು ಮತ್ತೆ ಟೀಮ್‌ ಇಂಡಿಯಾವನ್ನು ಅಗ್ರಸ್ಥಾನಕ್ಕೇರಿಸಿದೆ. ಭಾರತ ಟೆಸ್ಟ್‌ ಕ್ರಿಕೆಟಿನ ಅಗ್ರಮಾನ್ಯ ತಂಡವೂ ಹೌದು.

ರೋಹಿತ್‌ 790 ಅಂಕ
ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಒಂದು ಶತಕ ಸಹಿತ 296 ರನ್‌ ಬಾರಿಸಿದ ರೋಹಿತ್‌ ಶರ್ಮ ತಮ್ಮ ರೇಟಿಂಗ್‌ ಆಂಕವನ್ನು 790ಕ್ಕೆ ಹೆಚ್ಚಿಸಿಕೊಂಡರು. ಇದು ಅವರ ಜೀವನಶ್ರೇಷ್ಠ ಅಂಕವಾಗಿದೆ. ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಅವರು 9ರಿಂದ 5ನೇ ಸ್ಥಾನಕ್ಕೆ ನೆಗೆದಿದ್ದಾರೆ. 2016ರ ಫೆಬ್ರವರಿಯಲ್ಲಿ 3ನೇ ಸ್ಥಾನ ಅಲಂಕರಿಸಿದ್ದು ರೋಹಿತ್‌ ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್‌. ರೋಹಿತ್‌ ಜತೆಗಾರ ಅಜಿಂಕ್ಯ ರಹಾನೆ 4 ಸ್ಥಾನ ಮೇಲೇರಿ 24ನೇ ಕ್ರಮಾಂಕಕ್ಕೆ ಬಂದಿದ್ದಾರೆ.

ಭಾರತ-ಆಸ್ಟ್ರೇಲಿಯ, ಇಂಗ್ಲೆಂಡ್‌-ವೆಸ್ಟ್‌ ಇಂಡೀಸ್‌ ಸರಣಿ ಬಳಿಕ ರ್‍ಯಾಂಕಿಂಗ್‌ ಪ್ರಗತಿ ಸಾಧಿಸಿದ ಪ್ರಮುಖರೆಂದರೆ ಕೇದಾರ್‌ ಜಾಧವ್‌ (44ರಿಂದ 36), ಮಾರ್ಕಸ್‌ ಸ್ಟೊಯಿನಿಸ್‌ (128ರಿಂದ 54), ಜಾಸನ್‌ ರಾಯ್‌ (37ರಿಂದ 30), ಜಾನಿ ಬೇರ್‌ಸ್ಟೊ (88ರಿಂದ 40), ಮೊಯಿನ್‌ ಅಲಿ (78ರಿಂದ 56), ಜಾಸನ್‌ ಹೋಲ್ಡರ್‌ (84ರಿಂದ 73) ಮತ್ತು ಎವಿನ್‌ ಲೆವಿಸ್‌ (109ರಿಂದ 78).

Advertisement

ತಾಹಿರ್‌ ಮತ್ತೆ ನಂ.1
ಏಕದಿನ ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ದಕ್ಷಿಣ ಆಫ್ರಿಕಾದ ಇಮ್ರಾನ್‌ ತಾಹಿರ್‌ ಮತ್ತೆ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಗಾಯಾಳಾಗಿ ಭಾರತ ಸರಣಿಯಿಂದ ಹೊರಗುಳಿದ ಜೋಶ್‌ ಹ್ಯಾಝಲ್‌ವುಡ್‌ 18 ಅಂಕ ಕಳೆದುಕೊಂಡು 2ನೇ ಸ್ಥಾನಕ್ಕೆ ಇಳಿಯಬೇಕಾಯಿತು.

ಭಾರತದ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್‌ (99ರಿಂದ 75), ಕುಲದೀಪ್‌ ಯಾದವ್‌ (89ರಿಂದ 80) ರ್‍ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದಾರೆ. ಅಕ್ಷರ್‌ ಪಟೇಲ್‌ ಜೀವನಶ್ರೇಷ್ಠ 7ನೇ ಸ್ಥಾನ ಅಲಂಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next