ಹೊಸದಿಲ್ಲಿ: ಭಾರತದ ಮಾಜಿ ಟೆನಿಸಿಗ, ರಾಷ್ಟ್ರೀಯ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ರಾಜ್‌ಪಾಲ್ ಅವರನ್ನು ಮುಂಬರುವ ಪಾಕಿಸ್ಥಾನ ವಿರುದ್ಧದ ಡೇವಿಸ್ ಕಪ್ ಪಂದ್ಯಾವಳಿಗಾಗಿ ಭಾರತ ತಂಡದ “ಆಡದ ನಾಯಕ’ನ ನ್ನಾಗಿ ನೇಮಿಸಲಾಗಿದೆ. ಇದರೊಂದಿಗೆ ಮಹೇಶ್ ಭೂಪತಿ ನಾಯಕತ್ವ ಕೊನೆಗೊಂಡಿದೆ.
ರಾಜಕೀಯ ಕಾರಣಗಳಿಂದ ಮುಂದೂಡಲ್ಪಟ್ಟ ಈ ಪಂದ್ಯಾವಳಿ ನ. 29 ಮತ್ತು 30ರಂದು ಇಸ್ಲಾಮಾ ಬಾದ್‌ನಲ್ಲಿ ನಡೆಯಬೇಕಿದೆ.
“ಅಖೀಲ ಭಾರತ ಟೆನಿಸ್ ಅಸೋ.ನ (ಎಐಟಿಎ) ಮಾಜಿ ಅಧ್ಯಕ್ಷ ಅನಿಲ್ ಖನ್ನಾ ಮತ್ತು ಅಧಿಕಾರಿ ಪ್ರವೀಣ್ ಮಹಾಜನ್ ಅವರು ರೋಹಿತ್ ರಾಜ್‌ಪಾಲ್ ಹೆಸರನ್ನು ಸೂಚಿಸಿದ್ದು, ಇದಕ್ಕೆ ಎಲ್ಲರೂ ಸಮ್ಮತಿಸಿದರು. ಅವರು ಆಡದ ನಾಯಕರಾಗಿ ಪಾಕಿಸ್ಥಾನಕ್ಕೆ ತೆರಳಲಿದ್ದಾರೆ ಹಾಗೂ ಈ ಸರಣಿಗಷ್ಟೇ ನಾಯಕರಾಗಿ ಇರುತ್ತಾರೆ’ ಎಂಬುದಾಗಿ ಎಐಟಿಎ ಮೂಲಗಳು ತಿಳಿಸಿವೆ.
ಆದರೆ ಈ ಕೂಟವನ್ನು ಇಸ್ಲಾಮಾಬಾದ್‌ನಿಂದ ಸ್ಥಳಾಂತರಿ ಸುವಂತೆ ಎಐಟಿಎ ಈಗಾಗಲೇ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್‌ಗೆ (ಐಟಿಎಫ್) ಮನವಿ ಮಾಡಿದ್ದು, ಶೀಘ್ರವೇ ಐಟಿಎಫ್ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ.
90ರ ದಶಕದ ಆಟಗಾರ
ರೋಹಿತ್ ರಾಜ್‌ಪಾಲ್ 1990ರಲ್ಲಿ ಕೊರಿಯಾ ವಿರುದ್ಧ ಸಿಯೋಲ್‌ನಲ್ಲಿ ಡೇವಿಸ್ ಕಪ್‌ಗೆ ಪದಾರ್ಪಣೆ ಮಾಡಿದ್ದರು. ಅವರು ಭಾರತವನ್ನು ಪ್ರತಿನಿಧಿಸಿದ ಏಕೈಕ ಸಂದರ್ಭ ಇದಾಗಿದೆ. ಅಂದಿನ ಕೂಟದಲ್ಲಿ ಭಾರತ 0-5 ಹೀನಾಯ ಸೋಲುಂಡಿತ್ತು.
48ರ ಹರೆಯದ ರೋಹಿತ್ ರಾಜ್‌ಪಾಲ್ ಕಳೆದ ವರ್ಷ ಟೆನಿಸ್ ಆಯ್ಕೆ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಬಿಜೆಪಿ ರಾಜ್ಯ ಘಟಕದ ಸದಸ್ಯನೂ ಆಗಿರುವ ರಾಜ್‌ಪಾಲ್, ಪ್ರಸ್ತುತ ದಿಲ್ಲಿ ಲಾನ್ ಟೆನಿಸ್ ಅಸೋಸಿಯೇಸನ್‌ನ ಅಧ್ಯಕ್ಷರಾಗಿದ್ದಾರೆ.