ಮುಂಬಯಿ: ತುಳು-ಕನ್ನಡಿಗ ರೋಹಿತ್ ಪೂಜಾರಿ ಡಾನ್ಸ್ ಅಕಾಡೆಮಿಯ ಮೂರನೇ ವಾರ್ಷಿಕೋತ್ಸವ ಸಂಭ್ರಮವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಬೊರಿವಲಿ ಪಶ್ಚಿಮದ ಪ್ರಬೋಧನ್ ಠಾಕ್ರೆ ಸಭಾಗೃಹದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ದೂರದರ್ಶನ ಕಲಾವಿದೆ ನೀಲು ವಾಗೇಲ ಅವರು ಮಾತನಾಡಿ, ರೋಹಿತ್ ಪೂಜಾರಿ ಡಾನ್ಸ್ ಅಕಾಡೆಮಿಯು ಮಕ್ಕಳಿಗೆ ಕ್ರಮಬದ್ಧವಾಗಿ ನೃತ್ಯ ಪ್ರಕಾರಗಳ ಶಿಕ್ಷಣವನ್ನು ನೀಡುತ್ತಿದ್ದು, ನನ್ನ ಮಗು ಕೂಡ ಇದೇ ಅಕಾಡೆಮಿಯಲ್ಲಿ ನೃತ್ಯವನ್ನು ಅಭ್ಯಸಿಸುತ್ತಿದ್ದಾನೆ. ಬೊರಿವಲಿ ಪರಿಸರದ ಮಕ್ಕಳನ್ನು ರೋಹಿತ್ ಪೂಜಾರಿ ಡಾನ್ಸ್ ಅಕಾಡೆಮಿಗೆ ಕಳುಹಿಸುವ ಮೂಲಕ ನೃತ್ಯ ಕಲೆಯನ್ನು ಉಳಿಸಿ-ಬೆಳೆಸುವಲ್ಲಿ ಎಲ್ಲರೂ ಸಹಕರಿಸಬೇಕು. ಎಲ್ಲಾ ಮಕ್ಕಳಲ್ಲಿ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪೋಷಿಸುವ ಕಾರ್ಯ ಪಾಲಕರು, ಪೋಷಕರಿಂದ ಆಗಬೇಕು. ಕಳೆದ ಮೂರು ವರ್ಷಗಳಿಂದ ಪುಟಾಣಿಗಳಿಂದ ಹಿಡಿದು ಹಿರಿಯರವರೆಗೆ ಶಿಸ್ತುಬದ್ಧವಾಗಿ ಭಾರತೀಯ ಕಲಾಪ್ರಕಾರಗಳ ಅರಿವು ಮೂಡಿಸುತ್ತಿರುವ ಈ ಅಕಾಡೆಮಿಯ ಕಾರ್ಯ ಸ್ತುತ್ಯರ್ಹವಾಗಿದೆ ಎಂದರು.
ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಎಳೆಯ ಮಕ್ಕಳಿಂದ ಹಿಡಿದು ಹಿರಿಯವರೆಗೆ ಸುಮಾರು 300 ಮಂದಿ ಕಲಾವಿದರು ವೈವಿಧ್ಯಮಯ ನೃತ್ಯಗಳನ್ನು ಪ್ರದರ್ಶಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಅಕಾಡೆಮಿಯ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಗಣ್ಯರು ವಿತರಿಸಿದರು.
ಕಾರ್ಯಕ್ರಮದಲ್ಲಿ ಮದರ್ ಇಂಡಿಯಾ ಬಳಗದ ಸುಂದರ ಮೊಲಿ ದಂಪತಿ, ಹರೀಶ್ ಮೈಂದನ್, ಮಂದಾರ್ ಎನ್. ಹೆಗ್ಡೆ, ಅಶೋಕ್ ಸುವರ್ಣ, ಜಯ ಸಿ. ಪೂಜಾರಿ, ಯಶವಂತ್ ಎನ್. ಪೂಜಾರಿ, ಸುಕೇಶಿನಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಲಾವಿದರನ್ನು ಹಾಗೂ ಅತಿಥಿಗಳನ್ನು ಸಪ್ನಾ ಅವರು ಪರಿಚಯಿಸಿದರು. ಟಿ. ವಿ. ಪೂಜಾರಿ ವಂದಿಸಿದರು. ರೋಹಿತ್ ಪೂಜಾರಿ ಅವರು ಕಾರ್ಯಕ್ರಮ ನಿರ್ವಹಿಸಿದರು.
ಮದರ್ ಇಂಡಿಯಾ ರಾತ್ರಿ ಶಾಲೆಯ ಹಳೆವಿದ್ಯಾರ್ಥಿ ಟಿ. ವಿ. ಪೂಜಾರಿ ಮತ್ತು ಲತಾ ಪೂಜಾರಿ ದಂಪತಿಯ ಪುತ್ರರಾದ ರೋಹಿತ್ ಪೂಜಾರಿ ಅವರು ಒಂಭತ್ತು ವರ್ಷಗಳ ಹಿಂದೆ ದೇಶ-ವಿದೇಶಗಳಲ್ಲಿ ಟೆರೆನ್ಸ್ ಲೇವಿಸ್ ಸಂಸ್ಥೆಯ ಮೂಲಕ ನೃತ್ಯ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದು, ಆನಂತರ ಬೊರಿವಲಿ ಪರಿಸರದಲ್ಲಿ ನೃತ್ಯ ನಿರ್ದೇಶಕರಾಗಿ ಸಹಕರಿಸಿ ನೃತ್ಯ ಅಕಾಡೆಮಿಯನ್ನು ಸ್ಥಾಪಿಸಿ ಮಕ್ಕಳಿಗೆ ನೃತ್ಯ ತರಬೇತಿಯನ್ನು ನೀಡುತ್ತಿದ್ದಾರೆ.