Advertisement
ನಾಯಕನಾಗಿ ಮತ್ತು ವೈಯಕ್ತಕವಾಗಿಯೂ ಭರ್ಜರಿ ಯಶಸ್ಸು ಕಾಣುತ್ತಿರುವ ವಿರಾಟ್ ಕೊಹ್ಲಿಗೆ ಯಾರೂ ಸವಾಲಾಗಲು ಸಾಧ್ಯವಿಲ್ಲ ಅನ್ನುವ ವಾತಾವರಣ ಕೆಲವೇ ತಿಂಗಳುಗಳ ಹಿಂದೆ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಲಂಕಾ ವಿರುದ್ಧದ ಪಂದ್ಯಗಳಲ್ಲಿ ನಾಯಕನಾಗಿ ರೋಹಿತ್ ಶರ್ಮ ಏಕದಿನ ಮತ್ತು ಟಿ20 ಸರಣಿ ಗೆಲ್ಲುವ ಮೂಲಕ ನಾಯಕ ಪಟ್ಟಕ್ಕೆ ಕೊಹ್ಲಿಗೆ ಪ್ರತಿಸ್ಪರ್ಧಿಯಾಗುವ ಸೂಚನೆ ನೀಡಿದ್ದಾರೆ.
Related Articles
Advertisement
ಕೊಹ್ಲಿ ಸಮರ್ಥನಾಯಕ ಸ್ಥಾನಕ್ಕೆ ಮಹೇಂದ್ರ ಸಿಂಗ್ ಧೋನಿ ವಿದಾಯ ಹೇಳಿದ ನಂತರ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ವಿರಾಟ್ ಕೊಹ್ಲಿ, ಈವರೆಗೆ ಎಲ್ಲ ಮಾದರಿಗಳಲ್ಲಿಯೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಇದರೊಂದಿಗೆ ಉತ್ತಮ ಫಾರ್ಮ್ ಮುಂದುವರಿಸಿರುವ ಕೊಹ್ಲಿ ಎರಡೂ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಹೀಗಾಗಿ ತಂಡದ ಆಯ್ಕೆ ಹಾಗೂ ಪ್ರಮುಖ ನಿರ್ಧಾರಗಳಲ್ಲಿ ಕೊಹ್ಲಿ ನಿರ್ಧಾರವೇ ಅಂತಿಮ ಎನ್ನುವ ಪರಿಸ್ಥಿತಿ ಸದ್ಯ ಬಿಸಿಸಿಐನಲ್ಲಿದೆ. ಇದರಿಂದಾಗಿ ಕ್ರಿಕೆಟ್ ಮಂಡಳಿಯ ಕೆಲ ಸದಸ್ಯರಿಗೆ ಕೊಹ್ಲಿ ಮೇಲೆ ಮುನಿಸಿದ್ದರೂ, ಕೊಹ್ಲಿ ಉತ್ತಮ ಫಾರ್ಮ್ನಲ್ಲಿರುವುದರಿಂದ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸಲಾಗಿದೆ ಸುಮ್ಮನಿದ್ದಾರೆ ಎಂಬ ಮಾತುಗಳಿವೆ. ಅವಕಾಶ ಸಿಕ್ಕರೆ ಅವರೆಲ್ಲ ಕೊಹ್ಲಿ ಮೇಲೆ ಮುಗಿಬೀಳುವುದು ಖಚಿತ. ರೋಬೋಟ್ ಅಲ್ಲ ಎಂದ ಕೊಹ್ಲಿ
ನ್ಯೂಜಿಲೆಂಡ್ ವಿರುದ್ಧ ಸರಣಿ ಜಯಿಸಿದ ವಿರಾಟ್ ಕೊಹ್ಲಿ, ತಾನೇನು ರೋಬೋಟ್ ಅಲ್ಲ. ತನಗೂ ವಿಶ್ರಾಂತಿ ಬೇಕಿದೆ ಎಂದಿದ್ದರು. ಜತೆಗೆ ಅನುಷ್ಕಾ ಜತೆ ವಿವಾಹ ಇದ್ದುದರಿಂದ ಟೂರ್ನಿಯಿಂದ ಹಿಂದೆ ಸರಿದಿದ್ದರು. ಅದನ್ನೇ ಕಾದಿದ್ದ ಬಿಸಿಸಿಐ ಶ್ರೀಲಂಕಾ ನಡುವಿನ ಏಕದಿನ ಹಾಗೂ ಟಿ20 ಸರಣಿಗೆ ಕೊಹ್ಲಿ ಜಾಗದಲ್ಲಿ ರೋಹಿತ್ ಶರ್ಮಾ ಅವರನ್ನು ತಂದು ಕೂರಿಸಿತು. ಅದಕ್ಕೆ ತಕ್ಕಂತೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ರೋಹಿತ್ ತಂಡವನ್ನು ಜಯದ ಹಾದಿಯಲ್ಲಿ ತೆಗೆದುಕೊಂಡು ಹೋಗುವ ಜತೆಗೆ, ವೈಯಕ್ತಿಕವಾಗಿಯೂ ಉತ್ತಮ ರನ್ ಕಲೆಹಾಕಿದ್ದಾರೆ. ಯುವಕರಿಗೆ ಅವಕಾಶ
ಶ್ರೀಲಂಕಾ ಸರಣಿಗೆ ಆಯ್ಕೆಯಾಗಿದ್ದ ಎಲ್ಲ ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಳ್ಳಲು ರೋಹಿತ್ ಅವಕಾಶ ನೀಡಿದರು. ತಂಡಕ್ಕೆ ಆಯ್ಕೆಯಾಗಿದ್ದ ವಾಷಿಂಗ್‌ಟನ್ ಸುಂದರ್, ಜಯದೇವ್ ಉನಡ್ಕಟ್, ಮೊಹಮದ್ ಸಿರಾಜ್‌ಗೆ ಅವಕಾಶ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಿದ್ದು ವಿಶೇಷವಾಗಿತ್ತು. ಅಂದೇ ಭವಿಷ್ಯ ನುಡಿದಿದ್ದ ಪಾಂಟಿಂಗ್
ರೋಹಿತ್ ಶರ್ಮಾ 2013ರಿಂದಲೂ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ಹಿಂದೆ ಸಚಿನ್ ತೆಂಡುಲ್ಕರ್ ಹಾಗೂ ಹರ್ಭಜನ್ ಸಿಂಗ್ ನಾಯಕತ್ವ ಬೇಡ ಎಂದಾಗ, ರೋಹಿತ್ ಆ ಜವಾಬ್ದಾರಿ ವಹಿಸಿಕೊಂಡಿದ್ದರು. ರೋಹಿತ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಸೀಮಿತ ಓವರ್‌ಗಳಲ್ಲಿ ವಿರಾಟ್ ಕೊಹ್ಲಿಗೆ ರೋಹಿತ್ ಪರ್ಯಾಯವಾಗಬಲ್ಲರು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಟಿಂಗ್ 2015ರಲ್ಲಿ ಮುಂಬೈ ಐಪಿಎಲ್ ಟ್ರೋಫಿ ಗೆದ್ದಾಗ ಹೇಳಿದ್ದರು. 3 ಐಪಿಎಲ್ ಕಪ್ ಗೆದ್ದ ಶ್ರೇಯಸ್ಸು
ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂಬೈ ಇಂಡಿಯನ್ಸ್ ತಂಡದ ನಾಯಕನಾದ ಬಳಿಕ ರೋಹಿತ್ ಶರ್ಮಾ 2013, 2015 ಹಾಗೂ 2017ರಲ್ಲಿ ತಂಡವನ್ನು ಚಾಂಪಿಯನ್ ಮಾಡುವ ಮೂಲಕ ತಾನೊಬ್ಬ ಉತ್ತಮ ನಾಯಕ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆದರೆ, ಟೀಂ ಇಂಡಿಯಾ ನಾಯಕನಾಗಿರುವ ವಿರಾಟ್ ಕೊಹ್ಲಿ ಈವರೆಗೆ ರಾಯಲ್ ಚಾಲೆಂಜರ್ ಬೆಂಗಳೂರು ತಂಡವನ್ನು ಚಾಂಪಿಯನ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ರೋಹಿತ್ ಶರ್ಮಾಗೆ ಐಪಿಎಲ್ ಸಾಧನೆ ಬೆನ್ನಿಗಿದ್ದು, ಕೊಹ್ಲಿ ಫಾರ್ಮ್ ಕಳೆದುಕೊಂಡರೆ ಭಾರತ ತಂಡದ ನಾಯಕತ್ವ ಸ್ಥಾನ ರೋಹಿತ್‌ಗೆ ಒಲಿದರೂ ಅಚ್ಚರಿ ಇಲ್ಲ. ವೆಂ.ಸುನೀಲ್ ಕುಮಾರ್