Advertisement

ಕೈ ಹಿಡಿದ ರೋಹಿಣಿ; ಬಿತ್ತನೆ ಜೋರು

09:10 AM Jun 10, 2019 | Suhan S |

ಬಾಗಲಕೋಟೆ: ಆರಂಭದಲ್ಲಿ ಆತಂಕಗೊಳಿಸಿದ್ದ ಮುಂಗಾರು ಮಳೆ, ಕಳೆದ ಒಂದು ವಾರದಿಂದ ಬಿತ್ತನೆಗೆ ಸಾಕಾಗುವಷ್ಟು ಭೂಮಿ ಹಸಿಗೊಳಿಸಿದೆ. ಹೀಗಾಗಿ ಜಿಲ್ಲೆಯಾದ್ಯಂತ ರೈತರು, ಮುಂಗಾರು ಬಿತ್ತನೆ ಆರಂಭಿಸಿದ್ದಾರೆ.

Advertisement

ಹೌದು, ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಜೂನ್‌ 7ರ ಬಳಿಕ ಚುರುಕುಗೊಂಡಿದೆ. ಆರಂಭದಲ್ಲಿ ಮುಂಗಾರು ಮಳೆಗಳು ಸರಿಯಾಗಿ ಸುರಿಯದ ಕಾರಣ, ರೈತರಲ್ಲಿ ಆತಂಕ ಮೂಡಿಸಿತ್ತು. ಆದರೆ, ಕಳೆದ ಒಂದು ವಾರದಿಂದ ಒಂದು ದಿನ ಬಿಟ್ಟು ಒಂದು ದಿನ ಸುರಿಯುತ್ತಿರುವ ಮಳೆ, ಒಂದಷ್ಟು ಅಲ್ಲಲ್ಲಿ ಹಾನಿ ಮಾಡಿದರೂ, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ರೈತ ಸಮೂಹ, ಮುಂಗಾರು ಬಿತ್ತನೆಯಲ್ಲಿ ತೊಡಗಿದ್ದಾರೆ.

2.27 ಲಕ್ಷ ರೈತರು: ಜಿಲ್ಲೆಯ ಆರು ತಾಲೂಕು (ಹೊಸ ತಾಲೂಕು ಸೇರಿಸಿದರೆ 10)ಗಳಲ್ಲಿ 69,742 ಅತಿಸಣ್ಣ ರೈತರಿದ್ದು ಅವರು 40,350.07 ಹೆಕ್ಟೇರ್‌ ಭೂಮಿ ಹೊಂದಿದ್ದಾರೆ. 75,345 ಜನ ಸಣ್ಣ ರೈತರಿದ್ದು, ಅವರು 1,09,374 ಹೆಕ್ಟೇರ್‌ ಭೂಮಿ ಹೊಂದಿದ್ದು, 82,644 ದೊಡ್ಡ ರೈತರಿದ್ದು, ಅವರು 3,37,391 ಹೆಕ್ಟೇರ್‌ ಭೂಮಿಯ ಒಡೆಯರಾಗಿದ್ದಾರೆ. ಒಟ್ಟು 2,27,731 ರೈತರು ಜಿಲ್ಲೆಯಲ್ಲಿದ್ದು, 4,87,166 ಹೆಕ್ಟೇರ್‌ ಕೃಷಿ ಭೂಮಿ ಹೊಂದಿದ್ದಾರೆ. ಅದರಲ್ಲಿ 2.40 ಲಕ್ಷ ಹೆಕ್ಟೇರ್‌ ಮುಂಗಾರು ಬಿತ್ತನೆ ಭೂಮಿ ಇದ್ದು, ಅದರಲ್ಲಿ 1.25 ಲಕ್ಷ ಹೆಕ್ಟೇರ್‌ ಕಬ್ಬು ಬೆಳೆಯಲಾಗುತ್ತದೆ. ಉಳಿದ 1.15 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಮುಂಗಾರು ಬೆಳೆಗಳು ಬೆಳೆಯುವುದು ಜಿಲ್ಲೆಯ ರೈತರ ವಾಡಿಕೆ.

ಕೃಷಿ ಇಲಾಖೆಯೂ ಸಜ್ಜು: ಮುಂಗಾರು ಬಿತ್ತನೆಗೆ ರೈತರಿಗೆ ಅಗತ್ಯ ಬಿತ್ತನೆ ಬೀಜ ಹಾಗೂ ಗೊಬ್ಬರ ಪೂರೈಕೆಗೆ ಕೃಷಿ ಇಲಾಖೆಯೂ ಸಜ್ಜುಗೊಂಡಿದ್ದು, ಈಗಾಗಲೇ ಬಿತ್ತನೆ ಬೀಜ, ಗೊಬ್ಬರ ಪೂರೈಕೆ ಮಾಡುತ್ತಿದೆ. ಮೆಕ್ಕೆಜೋಳ, ಹೆಸರು, ಸೋಯಾಬಿನ್‌, ಸಜ್ಜೆ, ತೊಗರಿ, ಸೂರ್ಯಕಾಂತಿ, ಈರುಳ್ಳಿ ಮುಂತಾದ ಬೆಳೆಗಳನ್ನು ರೈತರು, ಮುಂಗಾರು ಹಂಗಾಮಿನಲ್ಲಿ ಹೆಚ್ಚು ಬಿತ್ತನೆ ಮಾಡುತ್ತಾರೆ. ರೈತರ ಬೇಡಿಕೆಗೆ ಅನುಗುಣವಾಗಿ ಬೀಜ-ಗೊಬ್ಬರ ವಿತರಣೆಗೆ ಜಿಲ್ಲೆಯ 18 ರೈತ ಸಂಪರ್ಕ ಕೇಂದ್ರಗಳಲ್ಲೂ ಅಗತ್ಯ ದಾಸ್ತಾನು ಹೊಂದಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ರಾಜಶೇಖರ ವಿಜಾಪುರ ತಿಳಿಸಿದ್ದಾರೆ. ಮುಂಗಾರು ಹಂಗಾಮಿಗಾಗಿ ಜಿಲ್ಲೆಗೆ 1.19 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರದ ಅಗತ್ಯವಿದೆ. ಸಧ್ಯ 40 ಸಾವಿರ ಮೆಟ್ರಿಕ್‌ ಟನ್‌ ರಸಗೊಬ್ಬರ ಜಿಲ್ಲೆಯಲ್ಲಿದೆ. ರೈತರ ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಕೆಗೆ ತಯಾರಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಉತ್ತಮ ಮಳೆ: ಜಿಲ್ಲೆಯಲ್ಲಿ ಈ ಬಾರಿಗೆ ಬಹುತೇಕ ಎಲ್ಲಾ ಕಡೆ ಮಳೆಯಾಗಿದೆ. ಪ್ರತಿ ಬಾರಿ ಒಂದು ತಾಲೂಕಿನಲ್ಲಿ ಮಳೆಯಾದರೆ, ಮತ್ತೂಂದು ಹೋಬಳಿಯಲ್ಲಿ ಮಳೆಯಾಗುತ್ತಿರಲಿಲ್ಲ. ಆದರೆ, ಕೃಷಿ ಇಲಾಖೆ, ಜಿಲ್ಲೆಯ ಸರಾಸರಿ ಮಳೆಯ ಪ್ರಮಾಣ ನೀಡಿ, ವಾಡಿಕೆಯಂತೆ ಮಳೆಯಾಗಿದೆ ಎಂಬ ವರದಿ ನೀಡುತ್ತಿತ್ತು. ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದ್ದು, ಅದು ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿ ವ್ಯಾಪ್ತಿಯಲ್ಲೂ ಸುರಿದಿರುವುದು ರೈತರಿಗೆ ಖುಷಿ ನೀಡಿದೆ.

Advertisement

ಬಾಗಲಕೋಟೆ-61.1 ಎಂಎಂ, ಬೀಳಗಿ-50.9, ಜಮಖಂಡಿ-29, ಬಾದಾಮಿ-29, ಮುಧೋಳ-36, ಹುನಗುಂದ-51 ಮಿಲಿ ಮೀಟರ್‌ ಮಳೆಯಾಗಿದ್ದು, ಜಮಖಂಡಿ ಮತ್ತು ಬಾದಾಮಿ ತಾಲೂಕಿನಲ್ಲಿ ಸ್ವಲ್ಪ ಕಡಿಮೆ ಮಳೆಯಾಗಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು ಸರಾಸರಿ 26.01 ಎಂಎಂ ಸಾಮಾನ್ಯ ಮಳೆಯಾಗಬೇಕಿತ್ತು, ಈವರೆಗೆ 41.08 ಎಂಎಂ ಮಳೆಯಾಗಿದೆ.

•ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next