ಮೆಲ್ಬರ್ನ್: ಭಾರತದ ಟೆನಿಸ್ ಸ್ಟಾರ್ ರೋಹನ್ ಬೋಪಣ್ಣ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ 2024 ರ ಪುರುಷರ ಡಬಲ್ಸ್ ನಲ್ಲಿ ಸೆಮಿಫೈನಲ್‌ಗೆ ಮುನ್ನಡೆಯುವ ಮೂಲಕ ಗ್ರ್ಯಾಂಡ್‌ಸ್ಲಾಮ್ ನಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ.
ಬೋಪಣ್ಣ ಮತ್ತು ಅವರ ಜತೆಗಾರ ಮ್ಯಾಥ್ಯೂ ಎಬ್ಡೆನ್ ಬುಧವಾರ ಅರ್ಜೆಂಟೀನಾದ ಜೋಡಿ ಮ್ಯಾಕ್ಸಿಮೊ ಗೊನ್ಜಾಲೆಜ್ ಮತ್ತು ಆಂಡ್ರೆಸ್ ಮೊಲ್ಟೆನಿ ವಿರುದ್ಧ 6-4, 7-6 (5) ನೇರ ಸೆಟ್‌ಗಳ ಜಯದೊಂದಿಗೆ ಸೆಮಿಫೈನಲ್ ತಲುಪಿದ್ದಾರೆ.
43 ನೇ ವಯಸ್ಸಿನಲ್ಲಿ ಕೊಡಗು ಮೂಲದ ಬೋಪಣ್ಣ ವಿಶ್ವದ ನಂ.1 ಪುರುಷರ ಡಬಲ್ಸ್ ಆಟಗಾರ ಎನಿಸಿಕೊಂಡಿದ್ದಾರೆ ಶ್ರೇಯಾಂಕಗಳನ್ನು ನವೀಕರಿಸಿದಾಗ ಕ್ರೀಡಾ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಬೋಪಣ್ಣ ಅವರು ಓಪನ್ ಯುಗದಲ್ಲಿ ಗ್ರ್ಯಾಂಡ್ ಸ್ಲಾಮ್ ಫೈನಲ್‌ಗೆ ಅರ್ಹತೆ ಪಡೆದ ಅತ್ಯಂತ ಹಿರಿಯ ಆಟಗಾರರಾಗಿದ್ದು ಒಂದು ವರ್ಷದ ನಂತರ ಈ ಸಾಧನೆ ಮಾಡಿದ್ದಾರೆ. ಅವರ ಜತೆಗಾರ ಮ್ಯಾಥ್ಯೂ ಎಬ್ಡೆನ್ ಯುಎಸ್ ಓಪನ್ 2023 ಫೈನಲ್‌ನಲ್ಲಿ ಸೋತಿದ್ದರು.
ಬೋಪಣ್ಣ ಅವರು 20 ವರ್ಷಗಳ ಹಿಂದೆ ಪದಾರ್ಪಣೆ ಮಾಡಿದ್ದರು ಎನ್ನುವುದು ವಿಶೇಷ. ಬೋಪಣ್ಣ 17 ಪ್ರಯತ್ನಗಳಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್‌ನ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.