Advertisement

ಕಂಬಳ ವೀರ ರಾಕೆಟ್‌ ಮೋಡೆಗೆ ಅಮೃತ ಶಿಲೆಯ ಗೋರಿ

02:35 AM Nov 23, 2018 | Karthik A |

ಕಾರ್ಕಳ: ರಾಕೆಟ್‌ ಮೋಡೆ.. ಹೆಸರಿಗೆ ತಕ್ಕ ವೇಗದ ಓಟ.. ಕಂಬಳದ ಗಂತಿನಲ್ಲಿ ನಿಂತರೆ ರಾಜ.. ಮನೆಮಂದಿಯ ಪ್ರೀತಿಯ ಮನೆ ಸದಸ್ಯ.. ಕಂಬಳ ಕ್ಷೇತ್ರದಲ್ಲಿ ಪದಕಗಳ ಮೇಲೆ ಪದಕ ಗೆದ್ದು, ಓಟದಲ್ಲಿ ಐತಿಹಾಸಿಕ ದಾಖಲೆ… ಹೀಗೆ ದಾಖಲೆ ಬರೆದ ಕೋಣ ರಾಕೆಟ್‌ ಮೋಡೆಯ ಹೆಸರಿನಲ್ಲಿ ಅವನ ನೆನಪಿಗಾಗಿ ಅಮೃತ ಶಿಲೆಯ ಗೋರಿ ನಿರ್ಮಿಸಲು ಮನೆಮಂದಿ ಚಿಂತನೆ ನಡೆಸಿದ್ದಾರೆ. ಕಂಬಳ ಸಾಧಕ ನಂದಳಿಕೆಯ ಶ್ರೀಕಾಂತ್‌ ಭಟ್‌ ಅವರ ಮನೆಯಲ್ಲಿ ನ. 20ರಂದು ಮೃತಪಟ್ಟ 20 ವರ್ಷ ಪ್ರಾಯದ ರಾಕೆಟ್‌ ಮೋಡೆಗೆ ಅವರು ಸಲ್ಲಿಸುವ ಗೌರವ ಇದು. ಅವರ ಮನೆಯ ಸಮೀಪದಲ್ಲೇ ಕೋಣಗಳ ಈಜು ಕೊಳವಿದೆ. ಅದರ ಬಳಿಯೇ ರಾಕೆಟ್‌ ಮೋಡೆ ಅಂತ್ಯಸಂಸ್ಕಾರ ನಡೆಸಿದ್ದು, ಅಲ್ಲಿಯೇ ಗೋರಿ ನಿರ್ಮಿಸಿ ಮೋಡೆಯ ಪ್ರತಿಮೆಯನ್ನು ಅಳವಡಿಸಲು ಭಟ್‌ ಚಿಂತನೆ ನಡೆಸಿದ್ದಾರೆ.

Advertisement


ಕಂಬಳ ಕ್ಷೇತ್ರದಲ್ಲಿ ಕಿರಿಯ ವಿಭಾಗದಲ್ಲಿ ಹಾಗೂ ಹಿರಿಯ ವಿಭಾಗದಲ್ಲಿ ನೂರಾರು ಬಹುಮಾನಗಳನ್ನು ಮೋಡೆ ಗೆದ್ದಿದ್ದು, ನೇಗಿಲು ಹಿರಿಯ, ಹಗ್ಗ ಹಿರಿಯ ವಿಭಾಗದಲ್ಲಿ ಭಾರಿ ಪದಕ ಪಡೆದು ಕಂಬಳದಲ್ಲಿ ಪ್ರತಿಯೊಬ್ಬರಿಗೂ ಚಿರಪರಿಚಿತವಾಗಿತ್ತು. ಕೊಂಡೊಟ್ಟು ಮೋಡೆ, ರಾಕೆಟ್‌ ಮೋಡೆ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿತ್ತು.  ನೇಗಿಲು ಹಿರಿಯ ವಿಭಾಗದಲ್ಲಿ ಪ್ರತಿಷ್ಠಿತ ಕಂಬಳ ಮನೆತನದ ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್‌, ಅನಂತರ ಹಗ್ಗ ಹಿರಿಯ ವಿಭಾಗದಲ್ಲಿ ಕೊಳಚ್ಚಾರು ಕೊಂಡೆಟ್ಟು ಸುಕುಮಾರ ಶೆಟ್ಟಿ ಅವರ ಮನೆಯಲ್ಲಿದ್ದು, ಆ ಬಳಿಕ ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್‌ ಭಟ್‌ ಅವರ ಮನೆ ಸೇರಿತ್ತು.

ಮೋಡೆಗೆ ಶಾಸ್ತ್ರಬದ್ಧ ಅಂತ್ಯಸಂಸ್ಕಾರ 
ಮಂಗಳವಾರ ಮೃತಪಟ್ಟ ಮೋಡೆಯ ಅಂತ್ಯಸಂಸ್ಕಾರವನ್ನು ಶಾಸ್ತ್ರಬದ್ಧವಾಗಿ ಮಾಡಲಾಗಿದೆ. ಸ್ನಾನ ಮಾಡಿಸಿ, ಹೂ ಮಾಲೆ, ಬಟ್ಟೆಯಿಂದ ಶೃಂಗಾರ ಮಾಡಿ ನೂರಾರು ಮಂದಿಯ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. 500ಕ್ಕೂ ಅಧಿಕ ಮಂದಿ ಮಂದಿ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು.ಸಾಮಾಜಿಕ ಜಾಲಾತಾಣಗಳಾದ ಫೇಸ್‌ಬುಕ್‌, ವ್ಯಾಟ್ಸಪ್‌ಗ್ಳಲ್ಲಿ ಸಾವಿರಾರು ಮಂದಿ ದಾಖಲೆಯ ಸರದಾರನ ಸಾವಿಗೆ ಕಂಬನಿ ಮಿಡಿದಿದ್ದಾರೆ.

ದಾಖಲೆಯ ಸರದಾರ 
ಕಂಬಳ ಕ್ಷೇತ್ರದ ನೂತನ ದಾಖಲೆ ಇದೇ ಮೋಡೆ ಹೆಸರಿನಲ್ಲಿದೆ. ಕುಟ್ಟಿ ಹೆಸರಿನ ಕೋಣದ ಜತೆಯಾಗಿ 2014ರಲ್ಲಿ ಮೀಯ್ಯಾರು ಕಂಬಳ ಗದ್ದೆಯಲ್ಲಿ 144 ಮೀ. ಓಟವನ್ನು 13.76 ಸೆಕೆಂಡ್‌ನ‌ಲ್ಲಿ ಪೂರೈಸಿ ದಾಖಲೆ ಮಾಡಿದೆ. ಆ ದಾಖಲೆ ಇನ್ನೂ ಹಾಗೆಯೇ ಇದೆ. ಇದುವರೆಗೆ 150ಕ್ಕೂ ಅಧಿಕ ಪದಕ ಗೆದ್ದಿದೆ. ಕಳೆದ ವರ್ಷವೂ ಕಂಬಳದಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ ಪದಕ ಗಳಿಸಿದೆ.

ಕುಟ್ಟಿಗೆ ಜೂ| ಮೋಡೆ
ರಾಕೆಟ್‌ ಮೋಡೆಯ ಜತೆಯಾಗಿದ್ದ ಕುಟ್ಟಿ ಅದರ ಸಾವಿನಿಂದ ಆಹಾರವನ್ನೂ ಸೇವಿಸಿರಲಿಲ್ಲ. ಕೊನೆಗೂ ಈಗ ಮನೆಯವರ, ಸಾಕುವವರ ಒತ್ತಾಯದ ಮೇರೆಗೆ ಆಹಾರ ಸೇವಿಸಲು ಶುರು ಮಾಡಿದೆ. ಮೋಡೆ ಸಾವಿನ ಬಳಿಕ ಕುಟ್ಟಿಗೆ ಓಟಕ್ಕಾಗಿ ಶ್ರೀಕಾಂತ್‌ ಭಟ್‌ ಅವರ ಮನೆಯಲ್ಲೇ ಇರುವ ಸಣ್ಣ ಮೋಡೆಯನ್ನು ಜತೆ ಮಾಡಲಾಗಿದೆ. ಪ್ರಾರಂಭದಲ್ಲಿ ರಾಕೆಟ್‌ ಮೋಡೆ ಜತೆಯಷ್ಟು ವೇಗ ಪಡೆಯದಿದ್ದರೂ ಕ್ರಮೇಣ ಉತ್ತಮ ರೀತಿಯಲ್ಲಿ ಓಡಬಲ್ಲವು ಎನ್ನುವುದು ಭಟ್‌ ಅವರ ಮಾತು.

Advertisement

ನಮ್ಮ ಮನೆಯ ಸದಸ್ಯ
ಅದು ಬರೀ ಕೋಣವಲ್ಲ. ನಮ್ಮ ಮನೆಯ ಹಾಗೂ ಕೊಳಚ್ಚಾರು ಕೊಂಡೆಟ್ಟು ಮನೆಯ ಸದಸ್ಯ. ಸಾವಿರಾರು ಮಂದಿಯ ಪ್ರೀತಿಗೆ ಪಾತ್ರನಾಗಿದ್ದ ಅವನ ಅಗಲಿಕೆ ಬೇಸರ ತಂದಿದೆ. ಅವನ ನೆನಪಿಗಾಗಿ ಅಮೃತ ಶಿಲೆಯ ಘೋರಿ ಕಟ್ಟಲು ಚಿಂತನೆ ನಡೆಸಿದ್ದೇವೆ. 
– ಶ್ರೀಕಾಂತ್‌ ಭಟ್‌ ನಂದಳಿಕೆ, ಕೋಣದ ಯಜಮಾನ

— ಜಿವೇಂದ್ರ ಶೆಟ್ಟಿ  ಗರ್ಡಾಡಿ

Advertisement

Udayavani is now on Telegram. Click here to join our channel and stay updated with the latest news.

Next