ಟೆಕ್ಸಾಸ್: ತುರ್ತಾಗಿ ಔಷಧ ಬೇಕು ಅಂದರೆ ಆನ್‌ಲೈನ್ ಬುಕ್ ಮಾಡಿ ಹೋಂಡೆಲಿವರಿಗೆ ಕೊಟ್ಟರೆ ಸಾಕು ಮನೆ ಎದುರು ಕಾರು ಬಂದು ನಿಲ್ಲುತ್ತದೆ. ಗ್ರಾಹಕ ಕೋಡ್ ಹಾಕುತ್ತಿದ್ದಂತೆಯೇ ಅದರ ಡಿಕ್ಕಿ ತೆರೆಯುತ್ತದೆ. ಅಲ್ಲಿಂದ ಔಷಧ ತೆಗೆದುಕೊಂಡರಾಯಿತು.
ಇಂಥದ್ದೊಂದು ರೊಬೋಟ್ ವ್ಯವಸ್ಥೆಗೆ ಅಮೆರಿಕದಲ್ಲಿ ಚಾಲನೆ ಸಿಕ್ಕಿದೆ. ಅಮೆಜಾನ್ ಕ್ವಾಡ್‌ಕಾಪ್ಟರ್‌ಗಳ ಮೂಲಕ ಡೆಲಿವರಿ ಮಾಡಿದಂತೆಯೇ ಇಲ್ಲಿ ಸ್ವಯಂಚಾಲಿತ ಕಾರು ರೊಬೋಟ್‌ಗಳು ಔಷಧಗಳನ್ನು ಮನೆಗೆ ತಲುಪಿಸುತ್ತಿವೆ.
ನ್ಯೂರೋ ಹೆಸರಿನ ಕಂಪೆನಿ ಟೆಕ್ಸಾಸ್‌ನಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಇಂದೊಂದು ಚಾಲಕ ರಹಿತ ಕಾರು ಕಂಪೆನಿಯಾಗಿದ್ದು ಮೊದಲ ಬಾರಿಗೆ ಔಷಧ ಡೆಲಿವರಿ ಸೇವೆ ಒದಗಿಸುತ್ತಿದೆ. ಸದ್ಯದ ಮಟ್ಟಿಗೆ ಈ ಕಾರುಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಓರ್ವ ವ್ಯಕ್ತಿಯನ್ನು ಕಳುಹಿಸಿ ಕೊಡಲಾಗುತ್ತದೆ. ಆದರೆ ಆತ ಚಾಲನೆಯ ಯಾವುದೇ ಕೆಲಸವನ್ನೂ ಮಾಡುವುದಿಲ್ಲ. ಇದು ಸಂಪೂರ್ಣ ಸ್ವಯಂಚಾಲಿತವಾಗಿದೆ.
ಆನ್‌ಲೈನ್ ಆರ್ಡರ್ ಆದ ಬಳಿಕ ಮೂರು ತಾಸಿನ ಒಳಗೆ ಈ ರೊಬೋಟ್ ಕಾರು ಔಷಧದೊಂದಿಗೆ ಮನೆ ಬಾಗಿಲಿನಲ್ಲಿರುತ್ತದೆ. ಸರಿಯಾದ ವ್ಯಕ್ತಿಗೇ ಡೆಲಿವರಿ ನೀಡಲಾಗಿದೆ ಎಂಬುದನ್ನು ಗ್ರಾಹಕರು ರೊಬೋಟ್ ಎದುರು ನಿಂತು ಮೊಬೈಲ್‌ನಲ್ಲಿ ಕೋಡ್ ಹಾಕಿದರಷ್ಟೇ ಅದರ ಡಿಕ್ಕಿ ತೆರೆದುಕೊಳ್ಳುತ್ತದೆ ಮತ್ತು ಔಷಧ ಪಡೆಯಬಹುದು.
ಕಳೆದ ವರ್ಷ ನ್ಯೂರೋ ಕಂಪೆನಿ ಈ ವ್ಯವಸ್ಥೆಯನ್ನು ಪಿಜ್ಜಾ ಡೆಲಿವರಿಯಲ್ಲಿ ಪರೀಕ್ಷೆ ನಡೆಸಿತ್ತು. ಆ ಬಳಿಕ ಪೂರ್ಣ ಪ್ರಮಾಣದ ರೊಬೋಟ್ ಕಾರು ಉತ್ಪಾದನೆಗೆ ತೊಡಗಿತ್ತು. ಡ್ರೈವರ್‌ಲೆಸ್ ಕಾರುಗಳನ್ನು ಉತ್ಪಾದನೆ ಮಾಡುವ ಅಮೆರಿಕದ ಅತಿ ದೊಡ್ಡ ಕಂಪೆನಿಯೂ ಇದಾಗಿದೆ.