ನವದೆಹಲಿ: ಅಕ್ರಮ ಆಸ್ತಿ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ಉದ್ಯಮಿ, ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾಗೆ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ವಿದೇಶಕ್ಕೆ ತೆರಳಲು ದೆಹಲಿ ಕೋರ್ಟ್ ಸೋಮವಾರ ಅನುಮತಿ ನೀಡಿದೆ.
ಸಂಚಾರದ ದಿನಾಂಕ, ಸಮಯದ ವಿವರವನ್ನು ನೀಡಬೇಕು. ಅಲ್ಲದೇ ಡೆಡ್ ಲೈನ್ ಕ್ಕಿಂತ ಮೊದಲೇ ಭಾರತಕ್ಕೆ ವಾಪಸ್ ಆಗಬೇಕೆಂದು ಕೋರ್ಟ್ ರಾಬರ್ಟ್ ವಾದ್ರಾಗೆ ಸೂಚನೆ ನೀಡಿದೆ.
ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಅಮೆರಿಕ ಮತ್ತು ನೆದರ್ಲ್ಯಾಂಡ್ ಗೆ ತೆರಳಲು ಕೋರ್ಟ್ ಅನುಮತಿ ನೀಡಿದೆ. ಆದರೆ ಬ್ರಿಟನ್ ಗೆ ಹೋಗುವಂತಿಲ್ಲ ಎಂದು ನಿರ್ದೇಶನ ನೀಡಿದೆ.
ತಮ್ಮ ಕಕ್ಷಿದಾರ, ಉದ್ಯಮಿ ಲಂಡನ್ ಗೆ ತೆರಳುವುದಿಲ್ಲ ಎಂದು ವಾದ್ರಾ ಪರ ವಕೀಲರಾದ ಕೆಟಿಎಸ್ ತುಳಸಿ ಕೋರ್ಟ್ ಗೆ ತಿಳಿಸಿದರು. ಏತನ್ಮಧ್ಯೆ ಅನಾರೋಗ್ಯದ ಕಾರಣಕ್ಕೆ ಯುಕೆ ಸೇರಿದಂತೆ ಇತರ ದೇಶಗಳಿಗೆ ಹೋಗಲು ಅನುಮತಿ ಕೋರಿದ್ದ ವಾದ್ರಾ ಅರ್ಜಿಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಕೀಲ ನಿತೇಶ್ ರಾಣಾ ಆಕ್ಷೇಪ ವ್ಯಕ್ತಪಡಿಸಿದ್ದರು.