ಉಪ್ಪಿನಂಗಡಿ: ಸೈಡ್ ಕೊಡಲಿಲ್ಲವೆಂಬ ಕಾರಣ ಮುಂದಿರಿಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಮುಗಿಬಿದ್ದ ನಾಲ್ವರು ಯುವಕರ ತಂಡವೊಂದು ಲ್ಯಾಪ್ ಟಾಪ್, ಮೊಬೈಲ್, ಜಾಕೆಟ್ ಸಹಿತ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಎಗರಿಸಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿ ಘಾಟಿ ಪ್ರದೇಶದಲ್ಲಿ ಶನಿವಾರ ನಡೆದಿದೆ.
ಬೆಂಗಳೂರಿನ ಸಿಐಡಿ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಮಹಿಳೆಯ ಪತಿಯಾಗಿರುವ ವೀರಭದ್ರ ಎಂಬವರು ಬೆಂಗಳೂರಿನಿಂದ ಬ್ರಹ್ಮಾವರಕ್ಕೆಂದು ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಶನಿವಾರ ತಡರಾತ್ರಿ ರಸ್ತೆಯಲ್ಲಿ ಓವರ್ ಟೇಕ್ ಮಾಡಲು ಸೈಡ್ ಕೊಡಲಿಲ್ಲವೆಂದು ನೆಪವೊಡ್ಡಿ ರಿಟ್ಜ್ ಕಾರಿನಲ್ಲಿ ಬಂದ ನಾಲ್ವರು ವೀರಭದ್ರರ ಕಾರನ್ನು ಅಡ್ಡಗಟ್ಟಿ ಅವರೊಂದಿಗೆ ಸಂಘರ್ಷಕ್ಕಿಳಿದಿದ್ದರು. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಲ್ಯಾಪ್ ಟಾಪ್, ಮೊಬೈಲ್, ಜಾಕೆಟ್‌ಗಳನ್ನು ಎಗರಿಸಿ ತಂಡ ಪರಾರಿಯಾಗಿದೆ.
ಸುತ್ತಲೂ ಕಾಡಿನಿಂದಾವೃತವಾದ ನಿರ್ಜನ ಪ್ರದೇಶದಲ್ಲಿ ಒಂಟಿ ಪ್ರಯಾಣದ ವೇಳೆ ನಾಲ್ವರು ಯುವಕರಿಂದ ಎದುರಾದ ಸಂಘರ್ಷದಿಂದ ಭೀತಿಗೊಳಗಾದ ವೀರಭದ್ರ ಅವರು ಯುವಕರಿಂದ ಪಾರಾಗಿ ಬ್ರಹ್ಮಾವರ ತಲುಪಿದ ಮೇಲೆ ಕಾರನ್ನು ಪರಿಶೀಲಿಸಿದಾಗ ಸೊತ್ತುಗಳು ಎಗರಿಸಲ್ಪಟ್ಟಿರುವುದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಅವರು ಮರಳಿ ಬಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.
ಶಿರಾಡಿ ಘಾಟಿ ಪರಿಸರದಲ್ಲಿ ರಾತ್ರಿ ವೇಳೆ ಕಾರುಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿರುವುದಕ್ಕೆ ಪೊಲೀಸ್ ಅಧಿಕಾರಿಗಳು ಬ್ರೇಕ್ ಹಾಕಿದ ಬಳಿಕ ಹೊಸ ರೀತಿಯಲ್ಲಿ ದರೋಡೆ ಮಾಡುವ ಯತ್ನ ಇದಾಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.