ಬೆಂಗಳೂರು: ಪೊಲೀಸರ ಸೋಗಿನಲ್ಲಿ ಖಾಸಗಿ ಕಂಪನಿ ಉದ್ಯೋಗಿಯನ್ನು ಸುಲಿಗೆ ಮಾಡಿರುವ ಘಟನೆ ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ನಾಗವಾರಪಾಳ್ಯ ನಿವಾಸಿ ಧನಂಜಯ್ ನಾಯರ್ ಎಂಬುವರು ರಾಮಮೂರ್ತಿನಗರ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಧನಂಜಯ್ ನಾಯರ್ ಫೆ.22ರಂದು ಮುಂಜಾನೆ 5.45ರ ಸುಮಾರಿಗೆ ಬೆನ್ನಿಗಾನಹಳ್ಳಿಯ ಅಂಡರ್ ಪಾಸ್‌ನಲ್ಲಿ ಕಾರಿನಲ್ಲಿ ಸಿಗರೇಟ್ ಸೇದಿಕೊಂಡು ಹೋಗುತ್ತಿದ್ದರು. ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿ ಕಾರು ಅಡ್ಡಗಟ್ಟಿದ್ದಾನೆ. ನಂತರ ತಾನೂ ಪೊಲೀಸ್, ಕಾರಿನಲ್ಲಿ ಸಿಗರೇಟ್ ಸೇದುವುದರಿಂದ ಜೈಲಿಗೆ ಕಳುಹಿಸುತ್ತೇನೆ ಎಂದು ಹೆದರಿಸಿದ್ದಾನೆ. ಕೆಲ ನಕಲಿ ಗುರುತಿನ ಚೀಟಿ ತೋರಿಸಿ ಕಾರಿನ ಬಾಗಿಲು ತೆರೆಯುವಂತೆ ಹೇಳಿ, ಒಳಗಡೆ ಕುಳಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಅಲ್ಲದೆ, ಧನಂಜಯ್‌ಗೆ ಕನ್ನಡ ಬರಲ್ಲ ಎಂದು ತಿಳಿಯುತ್ತಿದ್ದಂತೆ ಆರೋಪಿ, ತನ್ನ ಬಳಿ ಚಾಕು ಇದೆ. ತಾನೂ ಹೇಳಿದಂತೆ ಕೇಳಬೇಕು. ಇಲ್ಲವಾದಲ್ಲಿ ಚಾಕುವಿನಿಂದ ಇರಿಯುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ಧನಂಜಯ್ ನಾಯರ್‌ನ ಫೋನ್, ವಾಲೆಟ್‌ಗಳನ್ನು ಕಸಿದುಕೊಂಡು, ಸಮೀಪದ ಎಟಿಎಂ ಕೇಂದ್ರಕ್ಕೆ ಕರೆದೊಯ್ದು ಕ್ರೆಡಿಟ್ ಕಾರ್ಡ್ ನಿಂದ 50 ಸಾವಿರ ರೂ., ಡೆಬಿಟ್ ಕಾರ್ಡ್‌ನಿಂದ 45 ಸಾವಿರ ರೂ. ಡ್ರಾ ಮಾಡಿಸಿಕೊಂಡಿದ್ದಾನೆ. ನಂತರ ತನ್ನ ಬೈಕ್ ನಿಲ್ಲಿಸಿದ್ದ ಜಾಗಕ್ಕೆ ಡ್ರಾಪ್ ಹಾಕಿಸಿಕೊಂಡು, ಧನಂಜಯ್ ಕುತ್ತಿಗೆಯಲ್ಲಿದ್ದ ಸುಮಾರು 29-30 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ ಎಂದು ಧನಂಜಯ್ ನಾಯರ್ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಘಟನಾ ಸ್ಥಳ ಮತ್ತು ಎಟಿಎಂ ಕೇಂದ್ರದ ಸಿಸಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ. ಆರೋಪಿ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.