Advertisement

ಪೊಲೀಸರ ಸೋಗಿನಲ್ಲಿ 80 ಲಕ್ಷ ರೂ.ದರೋಡೆ

09:41 AM Jan 03, 2023 | Team Udayavani |

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಅಡಕೆ ಮಂಡಿ ಮಾಲೀಕನ ಕಾರು ಅನ್ನು ಅಡ್ಡಗಟ್ಟಿದ ನಾಲ್ವರು ದುಷ್ಕರ್ಮಿಗಳು ಕಾರು ಚಾಲಕನ ಬಳಿಯಿದ್ದ 80 ಲಕ್ಷ ರೂ. ದರೋಡೆ ಮಾಡಿರುವ ಘಟನೆ ವಿಲ್ಸನ್‌ಗಾರ್ಡನ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ತುಮಕೂರು ಜಿಲ್ಲೆಯ ತವಡೇಹಳ್ಳಿ ಗ್ರಾಮದ ಅಡಕೆ ಮಂಡಿ ಮಾಲೀಕ ಮೋಹನ್‌ ಎಂಬುವರ ಕಾರು ಚಾಲಕ ಚಂದನ್‌(28) ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ. ಡಿ.27ರಂದು ಮಧ್ಯಾಹ್ನ 1.45ರ ಸುಮಾರಿಗೆ ಕೆ.ಎಚ್‌.ರಸ್ತೆ ಸಮೀಪ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು.

ಅಡಕೆ ಮಂಡಿ ಮಾಲೀಕ ಮೋಹನ್‌ ಬಳಿ ದೂರದಾರ ಚಂದನ್‌ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಡಿ.27ರಂದು ಬೆಳಗ್ಗೆ 9 ಗಂಟೆಗೆ ಮಾಲೀಕ ಮೋಹನ್‌, ಚಂದನ್‌ ಹಾಗೂ ಅಂಗಡಿಯ ಕೆಲಸಗಾರ ಕುಮಾರಸ್ವಾಮಿಗೆ 80 ಲಕ್ಷ ರೂ. ಕೊಟ್ಟು, ಈ ಹಣವನ್ನು ತಮಿಳುನಾಡಿನ ಸೇಲಂಗೆ ತೆಗೆದುಕೊಂಡು ಹೋಗಿ ತಮಗೆ ಕರೆ ಮಾಡುವಂತೆ ಸೂಚಿಸಿದ್ದರು. ಅದರಂತೆ ಚಂದನ್‌ ಮತ್ತು ಕುಮಾರಸ್ವಾಮಿ ಕಾರಿನಲ್ಲಿ ಹಣ ಇರಿಸಿಕೊಂಡು ಸೇಲಂನತ್ತ ಪ್ರಯಾಣ ಬೆಳೆಸಿದ್ದರು. ಮಧ್ಯಾಹ್ನ 1.45ರ ಸುಮಾರಿಗೆ ನಾಯಂಡ ಹಳ್ಳಿ, ಮೈಸೂರು ರಸ್ತೆ ಮೂಲಕ ಕೆ.ಎಚ್‌.ರಸ್ತೆಗೆ ರಿವೋಲಿ ಜಂಕ್ಷನ್‌ ಬಳಿ ಸಿಗ್ನಲ್‌ಗಾಗಿ ಕಾಯುವಾಗ, ಪಕ್ಕದಲ್ಲೇ ಪೊಲೀಸ್‌ ಸ್ಟಿಕ್ಕರ್‌ ಅಂಟಿ ಸಿರುವ ಸ್ವಿಫ್ಟ್ ಕಾರೊಂದು ಬಂದು ನಿಂತಿದೆ.

ಕೂಡಲೇ ಕಾನ್ಸ್‌ ಟೇಬಲ್‌ ಸಮಸ್ತ್ರದಲ್ಲಿದ್ದ ಇಬ್ಬರು ಲಾಠಿ ಹಿಡಿದು ಚಂದನ್‌ ಕಾರಿನ ಬಳಿ ಬಂದು, ಸ್ವಿಫ್ಟ್ ಕಾರಿನಲ್ಲಿ ನಮ್ಮ ಸಬ್‌ಇನ್‌ಸ್ಪೆಕ್ಟರ್‌ ಕುಳಿತಿದ್ದಾರೆ ಎಂದು ತೆಲುಗು ಭಾಷೆಯಲ್ಲಿ ಮಾತನಾಡಿದ್ದಾರೆ. ಅನಂತರ ಚಂದನ್‌ ಮತ್ತು ಕುಮಾರಸ್ವಾಮಿಯನ್ನು ಕಾರಿನ ಹಿಂಬದಿ ಸೀಟಿನಲ್ಲಿ ಕೂರಿಸಿ, ಬಳಿಕ ಆರೋಪಿ ಗಳು ಕಾರನ್ನು ತಾವೇ ಚಾಲನೆ ಮಾಡಿಕೊಂಡು ಔಟ್‌ ರಿಚ್‌ ಶಾಲೆ ಸಮೀಪದ ಮೋರಿ ಬಳಿಗೆ ಬಂದಿದ್ದಾರೆ. ಈ ವೇಳೆ ಸ್ವಿಫ್ಟ್ ಕಾರು ಹಿಂಬಾಲಿಸಿಕೊಂಡು ಅದೇ ಸ್ಥಳಕ್ಕೆ ಬಂದಿದೆ. ಬಳಿಕ ಕಾನ್ಸ್‌ಟೇಬಲ್‌ ಸಮವಸ್ತ್ರದಲ್ಲಿ ಇಬ್ಬರು ಚಂದನ್‌ ಮತ್ತು ಕುಮಾರಸ್ವಾಮಿಗೆ ಹಲ್ಲೆ ನಡೆಸಿ, ಕಾರು ಕೀ ಕಿತ್ತುಕೊಂಡು, ಸೀಟಿನ ಕೆಳಗೆ ಇರಿಸಿದ್ದ 80 ಲಕ್ಷ ರೂ. ಅನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.

ಗೊತ್ತಿದ್ದ ವರಿಂದಲೇ ಕೃತ್ಯ? : ಅಡಕೆ ಮಂಡಿ ವ್ಯವಹಾರದ ಬಗ್ಗೆ ಗೊತ್ತಿರುವ ವ್ಯಕ್ತಿಗಳೇ ಈ ಕೃತ್ಯ ಮಾಡಿರುವ ಸಾಧ್ಯತೆಯಿದೆ. ತುಮಕೂರಿನಿಂದಲೂ ದುಷ್ಕರ್ಮಿಗಳು, ಚಂದನ್‌ ಕಾರನ್ನು ಹಿಂಬಾಲಿಸಿ ಕೆ.ಎಚ್‌.ರಸ್ತೆಯಲ್ಲಿ ಅಡ್ಡಗಟ್ಟಿ ಪೊಲೀಸರೆಂದು ಹೆದರಿಸಿ ಹಣ ತೆಗೆದುಕೊಂಡು ಹೋಗಿರುವ ಸಾಧ್ಯತೆಯಿದೆ. ಘಟನಾ ಸ್ಥಳದ ಸುತ್ತಮುತ್ತಲ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

ತಿಂಗಳ ಹಿಂದಷ್ಟೇ ಕೆಲಸಕ್ಕೆ : ಕಾರು ಚಾಲಕ ಚಂದನ್‌ ಅಡಕೆ ಮಂಡಿ ಮಾಲೀಕ ಮೋಹನ್‌ ಬಳಿ ಎರಡು ವರ್ಷ ಕಾರು ಚಾಲಕನಾಗಿ ಕೆಲಸ ಮಾಡಿ ಬಳಿಕ ಬಿಟ್ಟಿದ್ದ. ಇದೀಗ ಒಂದು ತಿಂಗಳ ಹಿಂದೆಯಷ್ಟೇ ಮತ್ತೆ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಎನ್ನಲಾಗಿದೆ. ಹೀಗಾಗಿ ಪೊಲೀಸರು ಚಂದನ್‌ನನ್ನು ವಿಚಾರಣೆ ನಡೆಸಲಾಗುತ್ತಿದೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next