Advertisement
ಮಂಗಳೂರು ಸಹಿತ ರಾಜ್ಯದ ಹಲವೆಡೆಗಳಲ್ಲಿ, ವಿವಿಧ ರಾಜ್ಯಗಳಲ್ಲಿ ದರೋಡೆ ನಡೆಸಿರುವ “ಚಡ್ಡಿಗ್ಯಾಂಗ್’ನ ಬಂಧಿತ ಸದಸ್ಯರಿಂದ ಈ ವಿಷಯ ತಿಳಿದುಬಂದಿದೆ. ಮಂಗಳೂರಿನ 2 ಕಡೆ ಮನೆ ದರೋಡೆ ನಡೆಸಿ ಕಳೆದ ಜುಲೈ ತಿಂಗಳಿನಲ್ಲಿ ಸಿಕ್ಕಿಬಿದ್ದಿದ್ದ ಈ ಗ್ಯಾಂಗ್‌ನ ಸದಸ್ಯರ ತನಿಖೆ, ವಿಚಾರಣೆಯನ್ನು ಮಂಗಳೂರಿನ ಪೊಲೀಸರು ಕೈಗೊಂಡಿದ್ದು, ದೋಷಾರೋಪ ಪಟ್ಟಿ ಸಲ್ಲಿಕೆ ಅಂತಿಮ ಹಂತಕ್ಕೆ ಬಂದಿದೆ. ಇವರ ಕಾರ್ಯಾಚರಣೆ ಹೇಗಿರುತ್ತದೆ, ಮಕ್ಕಳಿಗೆ ಹೇಗೆ ತರಬೇತಿ ನೀಡಲಾಗುತ್ತದೆ, ಕಳವು, ದರೋಡೆಯಲ್ಲಿ ಮಹಿಳೆಯರೂ ಕೈಚಳಕ ತೋರಿಸುತ್ತಾರೆಯೇ ಎಂಬ ಪ್ರಶ್ನೆಗಳಿಗೆ ತನಿಖೆ ವೇಳೆ ಉತ್ತರ ಲಭಿಸಿದೆ.
ಇಲ್ಲಿ ಮಕ್ಕಳಿರುವಾಗಲೇ ಕಳ್ಳತನಕ್ಕೆ ಅಣಿ ಮಾಡಲಾಗುತ್ತದೆ. ಕಳ್ಳತನವನ್ನೇ “ವೃತ್ತಿ’ಯಾಗಿ ಸ್ವೀಕರಿಸುವಂತೆ ಅವರ ತಲೆಗೆ ತುಂಬಲಾಗುತ್ತದೆ. ಅದಕ್ಕಾಗಿ ಅವರಿಗೆ ಕಠಿನ ರೀತಿಯ ತರಬೇತಿ ನೀಡಲಾಗುತ್ತದೆ.ಚಿಕ್ಕಮಕ್ಕಳಿಗೆ ಹೊಡೆದು ಬಡಿದು
ದೇಹ ಮತ್ತು ಮನಸ್ಸನ್ನು ಒರಟು ಗೊಳಿಸುತ್ತಾರೆ. 10 ವರ್ಷದಿಂದಲೇ ತರಬೇತಿ!
ಮಕ್ಕಳನ್ನು 10 ವರ್ಷದವರಿರುವಾ ಗಲೇ ತಮ್ಮೊಂದಿಗೆ ಕೃತ್ಯ ನಡೆಸಲು ಕರೆತರುತ್ತಾರೆ. ಆ ಮೂಲಕ ಅವರಿಗೆ ಚಿಕ್ಕಂದಿನಲ್ಲೇ ತರಬೇತಿ ಸಿಗುತ್ತದೆ. ತಂಡದಲ್ಲಿ ಮಹಿಳೆಯರೂ ಇರುತ್ತಾರೆ. 2023ರ ಡಿಸೆಂಬರ್‌ನಲ್ಲಿ ನಡೆದಿದ್ದ ಒಂದು ಮನೆ ಕಳವಿನಲ್ಲಿ 7 ಪುರುಷರು, 4 ಮಹಿಳೆಯರಿದ್ದರು, ಅವರಲ್ಲೊಬ್ಟಾಕೆ 8 ತಿಂಗಳ ಗರ್ಭಿಣಿಯಾಗಿದ್ದಳು ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.
ಇವರ ಬಳಿ ಇದೆ ಹೈಡ್ರಾಲಿಕ್ ಕಟ್ಟರ್ ಕಳವಿಗಾಗಿ ಅತ್ಯಾಧುನಿಕ ಹಾಗೂ ಪ್ರಬಲವಾದ ಹೈಡ್ರಾಲಿಕ್ ಕಟ್ಟರ್‌ಗಳನ್ನು ಬಳಸುತ್ತಾರೆ. ಎಲ್ಲ ಸಲಕರಣೆಗಳನ್ನೂ ಬಟ್ಟೆಯಲ್ಲಿ ಸೊಂಟಕ್ಕೆ ಕಟ್ಟಿಕೊಳ್ಳುತ್ತಾರೆ, ಬೆನ್ನಿಗೆ ಬ್ಯಾಗ್ ಇರುತ್ತದೆ.
ಪಾರ್ದಿ ಗ್ಯಾಂಗ್
ಅಲಿಯಾಸ್ ಚಡ್ಡಿ ಗ್ಯಾಂಗ್
ಈ ತಂಡದವರು ಮಧ್ಯಪ್ರದೇಶದ ಗುಣಾ ಜಿಲ್ಲೆಯಲ್ಲಿ ಇರುವ “ಪಾರ್ದಿ’ ಆದಿವಾಸಿ ಜನಾಂಗಕ್ಕೆ ಸೇರಿದವರು. ಇಡೀ ಊರಿನಲ್ಲಿ 200ಕ್ಕೂ ಹೆಚ್ಚು ಮನೆಗಳ ಸದಸ್ಯರಿಗೆ ಕಳವು, ದರೋಡೆಯೇ ವೃತ್ತಿ. ಜತೆಗೆ ಅಡವಿ ಪ್ರದೇಶದಲ್ಲಿ ಸಣ್ಣಪುಟ್ಟ ಕೃಷಿ ಕೆಲಸ ಮಾಡಿಕೊಂಡಿರುತ್ತಾರೆ. ಇವರನ್ನು ಚಡ್ಡಿಗ್ಯಾಂಗ್, ಚಡ್ಡಿ ಬನಿಯನ್ ಗ್ಯಾಂಗ್, ಪಾರ್ದಿ ಗ್ಯಾಂಗ್ ಎಂದೂ ಕರೆಯಲಾಗುತ್ತದೆ. ಎಲ್ಲೂ ತಮ್ಮನ್ನು ಪಾರ್ದಿಗಳು ಎಂದು ಹೇಳಿಕೊಳ್ಳುವುದಿಲ್ಲ, ಬದಲಿಗೆ ಬಂಗಾಲ, ಝಾರ್ಖಂಡ್‌ನವರು ಎಂದು ಹೇಳಿಕೊಂಡು ತಿರುಗಾಡುತ್ತಾರೆ.
Related Articles
ದೇಶಾದ್ಯಂತ ಸಂಚರಿಸುತ್ತ ದರೋಡೆ, ಕಳವಿನಲ್ಲಿ ಈ ಗ್ಯಾಂಗ್ ತೊಡಗಿರುತ್ತದೆ. ಜಾತ್ರೆಗಳಿದ್ದಲ್ಲಿಗೆ ಹೋಗಿ ಟೆಂಟ್ ಹಾಕಿಕೊಂಡು ಬಲೂನ್, ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರುತ್ತಾರೆ. ಜತೆಗೆ ತಮ್ಮ ಕೆಲಸಕ್ಕೆ ಸೂಕ್ತವಾದ ಮನೆಗಳನ್ನು ಗುರುತಿಸಿ ದರೋಡೆ ಮಾಡುತ್ತಾರೆ.
Advertisement
ವ್ಯವಸ್ಥಿತ ಜಾಲಚಡ್ಡಿ ಗ್ಯಾಂಗ್‌ನದ್ದು ವ್ಯವಸ್ಥಿತ ಜಾಲ, ಇವರು ಒಬ್ಬೊಬ್ಬರಾಗಿ ಕಳವು ಮಾಡುವುದಿಲ್ಲ, ಗುಂಪಿನಲ್ಲೇ ಇರುತ್ತಾರೆ. ನಗದು ಹಾಗೂ ಚಿನ್ನಾಭರಣ ಮಾತ್ರವೇ ಅವರ ಗುರಿ. ಕದ್ದ ಕೂಡಲೇ ಆ ಪ್ರದೇಶದಿಂದ ಪರಾರಿಯಾಗಿ ಬಿಟ್ಟರೆ ಮತ್ತೆ ಪೊಲೀಸರಿಗೆ ಸಿಗುವುದು ಬಲುಕಷ್ಟ. ನಮ್ಮ ವ್ಯಾಪ್ತಿಯ ಕೋಡಿಕಲ್ ಹಾಗೂ ಕೋಟೆಕಣಿ ಎರಡೂ ಪ್ರಕರಣಗಳಲ್ಲಿ ಪರಾರಿಯಾಗುತ್ತಿರುವಾಗಲೇ ಸಕಲೇಶಪುರದಲ್ಲಿ ಸಿಕ್ಕಿಬಿದ್ದಿದ್ದಾರೆ ಎನ್ನುತ್ತಾರೆ ಉರ್ವ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಭಾರತಿ. ದರೋಡೆಗೂ ವಸ್ತ್ರಸಂಹಿತೆ!
ಲಭ್ಯ ಮಾಹಿತಿಯ ಪ್ರಕಾರ ಹೆಸರೇ ಹೇಳುವಂತೆ ಇದು “ಚಡ್ಡಿ ಗ್ಯಾಂಗ್’! ಈ ತಂಡದ ಸದಸ್ಯರು ಕಾಲಿಗೆ ಚಪ್ಪಲಿ ಧರಿಸುವುದಿಲ್ಲ, ಮೈಯಲ್ಲಿ ಕೇವಲ ಚಡ್ಡಿಯನ್ನು ಮಾತ್ರ ಧರಿಸುತ್ತಾರೆ. ಕನಿಷ್ಠ ಬಟ್ಟೆಯಲ್ಲಿದ್ದರೆ ಕಳವು ನಡೆಸುವುದು ಹಾಗೂ ಪರಾರಿಯಾಗುವುದು ಸುಲಭ ಎಂಬುದು ಇವರ ತರ್ಕ. -ವೇಣುವಿನೋದ್ ಕೆ.ಎಸ್.