ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಆಟೋ ಹತ್ತಿದ ದುಷ್ಕರ್ಮಿಗಳಿಬ್ಬರು ಆಟೋ ಚಾಲಕನನ್ನು ದರೋಡೆ ಮಾಡಿದಲ್ಲದೆ, ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ವಿವೇಕನಗರದ ಓಆರ್‌ಸಿ ರಸ್ತೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ರಿಚ್‌ಮಂಡ್ ಟೌನ್ ನಿವಾಸಿ ಮೊಹಮ್ಮದ್ ಆಸೀಫ್ (28) ದರೋಡೆಗೊಳಗಾದ ಆಟೋ ಚಾಲಕ. ಬೆಂಕಿ ಹಚ್ಚಿದ ಕಾರಣ
ಆಸೀಫ್ ಅವರ ಎಡಗೈಗೆ ಗಂಭೀರವಾದ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಮೊಹಮ್ಮದ್ ಆಸೀಫ್, ಗುರುವಾರ ರಾತ್ರಿ 1 ಗಂಟೆಗೆ ವಿಕ್ಟೋರಿಯಾ ಲೇಔಟ್ ಬಳಿ ಆಟೋ ನಿಲ್ಲಿಸಿ, ಅದರಲ್ಲೇ ಮಲಗಿದ್ದರು. ಈ ವೇಳೆ ಬಂದ ದುಷ್ಕರ್ಮಿಗಳು, ಈಜಿಪುರ ವೃತ್ತಕ್ಕೆ ಹೋಗಬೇಕೆಂದು ಹೇಳಿ ಆಟೋ ಹತ್ತಿದ್ದಾರೆ. ವಿವೇಕನಗರದ ಓಆರ್‌ಸಿ ರಸ್ತೆಯಲ್ಲಿ ಹೋಗುತ್ತಿದ್ದಂತೆ ಆಟೋ ಚಾಲಕನಿಂದಲೇ ಸಿಗರೇಟ್ ಸೇದಲು ಬೆಂಕಿಪಟ್ಟಣ ಪಡೆದುಕೊಂಡಿದ್ದಾರೆ.
ಬಳಿಕ ಸ್ವಲ್ಪ ದೂರ ಹೋಗುತ್ತಿದ್ದಂತೆ ನಿರ್ಜನ ಪ್ರದೇಶದಲ್ಲಿ ಆಟೋ ನಿಲ್ಲಿಸುವಂತೆ ಹೇಳಿದ ದುಷ್ಕರ್ಮಿಗಳು, ಆಸೀಫ್ ಜೇಬಿನಲ್ಲಿದ್ದ ಹಣ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಆಸೀಫ್, ಆರೋಪಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಆಸೀಫ್ನನ್ನು ಥಳಿಸಿ, 500 ರೂ. ನಗದು, ಮೊಬೈಲ್ ಹಾಗೂ ಪರ್ಸ್ ಕಿತ್ತುಕೊಂಡಿದ್ದಾರೆ. ನಂತರ ತೀವ್ರರಕ್ತಸ್ರಾವ ದಿಂದ ಕುಸಿದು ಬಿದ್ದ ಆಸೀಫ್ನನ್ನು ಆಟೋ ದಲ್ಲಿ ತಳ್ಳಿ ಸ್ಥಳದಿಂದ
ಪರಾರಿಯಾಗಲು ಮುಂದಾಗಿದ್ದಾರೆ.
ಪೆಟ್ರೋಲ್ ಕಳ್ಳರು: ಗಾಯಗೊಂಡ ಆಸೀಫ್ ಹೇಳುವ ಪ್ರಕಾರ ಆರೋಪಿಗಳ ಬ್ಯಾಗ್‌ನಲ್ಲಿ ಎರಡು ಪೆಟ್ರೊಲ್ ಬಾಟಲಿಗಳಿದ್ದವು. ಈ ಹಿನ್ನೆಲೆಯಲ್ಲಿ ಹತ್ತಿರದಲ್ಲೇ ಪೆಟ್ರೋಲ್ ಕಳವು ಮಾಡಿ ವಾಪಸ್ ಹೋಗುವಾಗ ದರೋಡೆ ಮಾಡಲು ಸಂಚು ರೂಪಿಸಿರುವ ಸಾಧ್ಯತೆಯಿದೆ. ಹೀಗಾಗಿ ಘಟನಾ ಸ್ಥಳ ಮತ್ತು ವಿಕ್ಟೋರಿಯಾ ಲೇಔಟ್ ಸುತ್ತ ಇರುವ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ್ದು, ಆರೋಪಿಗಳ ಸುಳಿವು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು!
ತನ್ನನ್ನು ಆಟೋಗೆ ತಳ್ಳಿ ಆರೋಪಿಗಳು ಪರಾರಿಯಾಗುವುದನ್ನು ಗಮನಿಸಿದ ಆಸೀಫ್, “ಬೆಳಗ್ಗೆಯಿಂದ ಸಂಪಾದನೆ ಮಾಡಿದ ಹಣ ಕಣೊ, ವಾಪಸ್ ಕೊಡ್ರೋ’ ಎಂದು ಅಂಗಲಾಚಿದಲ್ಲದೆ, ಆರೋಪಿಗಳ ಮೇಲೆ ಮತ್ತೂಮ್ಮೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ದುಷ್ಕರ್ಮಿಗಳ ಪೈಕಿ ಒಬ್ಟಾತ ತನ್ನ ಬ್ಯಾಗ್‌ನಲ್ಲಿದ್ದ ಪೆಟ್ರೋಲ್ ಬಾಟಲಿ ತೆಗೆದು ಆಸೀಫ್ನ ಎಡಗೈ ಮೇಲೆ ಸುರಿದು, ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇತ್ತ ತೀವ್ರ ಸುಟ್ಟ ಗಾಯಗಳಿಂದ ಆಸೀಫ್ ರಕ್ಷಣೆಗಾಗಿ ಜೋರಾಗಿ ಕೂಗಿಕೊಂಡಿದ್ದು, ಸ್ಥಳೀಯರು ನೆರವಿಗೆ ಧಾವಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಸೀಫ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದರು. ಪ್ರಕರಣ ವಿವೇಕನಗರ ಠಾಣೆಯಲ್ಲಿ ದಾಖಲಾಗಿದೆ.