ಪುತ್ತೂರು: ಮೂರು ವಾರಗಳ ಹಿಂದೆ ಪಡುವನ್ನೂರು ಗ್ರಾಮದ ಕುದಾRಡಿ ತೋಟದಮೂಲೆಯ ಮನೆಯೊಂದರಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಕರ್ನಾಟಕ ಪೊಲೀಸರು ಕೇರಳದಲ್ಲಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಇದನ್ನು ಪೊಲೀಸರು ಇನ್ನಷ್ಟೇ ಖಚಿತಪಡಿಸಬೇಕಿದೆ.
ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಸಮೀಪ ಬಾಡೂರು ಸಮೀಪದ ನಿವಾಸಿಯನ್ನು ವಶಕ್ಕೆ ಪಡೆದಿರುವ ಮಾಹಿತಿ ಇದೆ. ಶಂಕಿತ ಆರೋಪಿ ಬಾಡೂರು ಬಳಿ ಸಾರ್ವಜನಿಕ ಸಂಸ್ಥೆಯೊಂದರಲ್ಲಿ ಕುಳಿತುಕೊಂಡಿದ್ದ ವೇಳೆ ಕರ್ನಾಟಕ ಪೊಲೀಸರ ತಂಡ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದೆ ಎನ್ನಲಾಗಿದೆ.
ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುದ್ಕಾಡಿ ತೋಟದಮೂಲೆ ಎನ್ನುವಲ್ಲಿ ಸೆ. 6ರಂದು ಮನೆಯೊಂದಕ್ಕೆ ನುಗ್ಗಿದ್ದ 5ಕ್ಕಿಂತ ಹೆಚ್ಚು ಜನರಿದ್ದ ದರೋಡೆಕೋರರ ತಂಡ ಮನೆಯಲ್ಲಿದ್ದ ತಾಯಿ ಮತ್ತು ಮಗನನ್ನು ಕಟ್ಟಿ ಹಾಕಿ 30 ಸಾವಿರ ರೂ. ನಗದು ಹಾಗೂ ಅಂದಾಜು ಎರಡು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ನಡೆಸಿದ್ದರು. ತೋಟದಮೂಲೆ ನಿವಾಸಿ ಕಸ್ತೂರಿ ರೈ ಹಾಗೂ ಅವರ ಪುತ್ರ ಗುರುಪ್ರಸಾದ್ ರೈ ಅವರನ್ನು ಕಟ್ಟಿ ಹಾಕಿ ಕೃತ್ಯ ನಡೆಸಲಾಗಿತ್ತು. ತಡರಾತ್ರಿ 2 ಗಂಟೆಗೆ ಮನೆಗೆ ನುಗ್ಗಿದ್ದ ದರೋಡೆಕೋರರ ತಂಡ ಸರಿಸುಮಾರು ಎರಡೂವರೆ ಗಂಟೆ ಕಾಲ ಮನೆಯನ್ನು ಜಾಲಾಡಿ ಕೃತ್ಯ ನಡೆಸಿತ್ತು. ದರೋಡೆಕೋರರು ಕೈಯಲ್ಲಿ ಮಾರಾಕಾಯುಧಗಳನ್ನು ಹಿಡಿದುಕೊಂಡಿದ್ದರು ಹಾಗೂ ಮನೆಯಲ್ಲಿದ್ದ ಮೊಬೈಲ್ ಪೋನ್‌ಗಳನ್ನು ನೀರಲ್ಲಿ ಹಾಕಿ, ಬೈಕ್‌ನ ಕೀ ಹಾಗೂ ಟಾರ್ಚ್ ಹಿಡಿದುಕೊಂಡು ಪರಾರಿಯಾಗಿದ್ದರು.
ಪೊಲೀಸರ ತಂಡ ಹೆಲವು ಬಾರಿ ಕಾಸರಗೋಡಿಗೆ ತೆರಳಿ ತನಿಖೆ ನಡೆಸಿತ್ತು. ಪ್ರಕರಣದ ಓರ್ವ ಆರೋಪಿ ಸೀತಾಂಗೋಳಿ ಸಮೀಪ ಬಾಡೂರು ಎಂಬಲ್ಲಿ ಇರುವ ಖಚಿತ ಮಾಹಿತಿ ದೊರೆತ ಮೇರೆಗೆ ಪೊಲೀಸರ ತಂಡ ಅಲ್ಲಿಗೆ ತೆರಳಿ ಓರ್ವನನ್ನು ವಶಕ್ಕೆ ಪಡೆದಿದ್ದು, ಆರೋಪಿ ಕೇರಳದ ಸಂಘಟನೆಯೊಂದರ ಸದಸ್ಯ ಎಂದು ತಿಳಿದು ಬಂದಿದೆ.