ಕಲಬುರಗಿ: ನಗರದಲ್ಲಿ ಕಳೆದ ತಡ ರಾತ್ರಿ ಮಹಾರಾಷ್ಟ ಮೂಲದ ಇಬ್ಬರು ದರೋಡೆಕೋರರ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ವೇಳೆಯಲ್ಲಿ ನಡೆದ ಗಲಾಟೆಯಲ್ಲಿ ಓರ್ವ ಪೇದೆಗೂ ಗಾಯವಾದ ಘಟನೆ ನಡೆದಿದೆ.
ಹಗಲು ಹೊತ್ತಿನಲ್ಲಿ ಭವಿಷ್ಯ ಹೇಳುತ್ತ ರಾತ್ರಿ ಹೊತ್ತು ಮನೆ ಕಳ್ಳತನ -ದರೋಡೆ ನಡೆಸುತ್ತಿದ್ದ ಮಹಾರಾಷ್ಟದ ಗ್ಯಾಂಗ್ ಕುರಿತು ಪೊಲೀಸರು ಒಂದು ಕಣ್ಣು ಇರಿಸಿದ್ದರು. ತುಳಜಾಪುರ ತಾಲೂಕಿಲ ಜಾಳಕೋಟ ಗ್ರಾಮದ ಲಹು ಬಾಹುರಾವ ಸಾವಂತ್ (30) ಮತ್ತು ದೇವಿದಾಸ ದತ್ತುಸಾಬ ಸಾವಂತ್ (20) ಗುಂಡೇಟು ತಿಂದವರು.
ಕಳೆದ ರಾತ್ರಿ ನಾಲ್ವರು ದರೋಡೆಕೋರರು ನಗರದ ಬಿದ್ದಾಪುರ ಕಾಲೊನಿಯಲ್ಲಿ ಮನೆ ಕಳ್ಳತನಕ್ಕೆ ಯತ್ನಿಸಿದ್ದಾರೆ. ಕಾಲೊನಿಯ ಜನ ಪೊಲೀಸ್ ಕಂಟ್ರೋಲ್ ರೂಂಗೆ ಫೋನ್ ಮಾಡಿದ್ದಾರೆ. ತಕ್ಷಣವೇ ಅಶೋಕನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಸಾರ್ವಜನಿಕರ ಸಹಕಾರದಿಂದ ನಾಲ್ವರು ದರೋಡೆಕೋರರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನಂತರ ಅವರು ವಾಸವಿದ್ದ ಸ್ಥಳಕ್ಕೆ ಅವರನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಇಬ್ಬರು ದರೋಡೆಕೋರರು ತಮ್ಮ ಬಳಿ ಇದ್ದ ಚಾಕುವಿನಿಂದ ಅಶೋಕನಗರ ಪೊಲೀಸ್ ಠಾಣೆ ಕಾನ್ಸಟೇಬಲ್ ಶಿವಶರಣಪ್ಪ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಅಶೋಕನಗರ ಠಾಣೆ ಸರ್ಕಲ್ ಇನ್ಸಪೆಕ್ಟರ್ ಪಂಡಿತ ಸಾಗರ ತಮ್ಮ ಹಾಗೂ ಸಿಬ್ಬಂದಿಗಳ ಆತ್ಮ ರಕ್ಷಣೆಗಾಗಿ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಗಲೂ ದರೋಡೆಕೋರರು ತಮ್ಮ ಕೈಯಲ್ಲಿದ್ದ ಚಾಕು ಬಿಸಾಡದೇ ಇದ್ದುದ್ದರಿಂದ ಗುಂಡು ಹಾರಿಸಿದ್ದಾರೆ. ಇಬ್ಬರು ದರೋಡೆಕೋರರ ಕಾಲಿಗೆ ಗುಂಡೇಟು ತಗುಲಿದೆ. ಗುಂಡೇಟಿನಿಂದ ಗಾಯಗೊಂಡಿರುವ ದರೋಡೆಕೋರರಾದ ಲಹು ಹಾಗೂ ದೇವಿದಾಸ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಕೈದಿಗಳ ವಾರ್ಡನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಪೇದೆಗೂ ಗಾಯ:
ಘಟನೆಯ ವೇಳೆ ಕಾನ್ಸಟೇಬಲ್ ಶಿವಶರಣಪ್ಪರಿಗೂ ಗಾಯವಾಗಿದೆ. ದರೋಡೆಕೋರರು ಚಾಕುವಿನಿಂದ ನಡೆಸಿದ ದಾಳಿಯಿಂದ ಗಾಯಗೊಂಡಿದ್ದಾರೆ. ಅವರನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಹೊರವಲಯದಲ್ಲಿ ಬೀಡು :
ನಗರ ಹೊರವಲಯದ ಬಬಲಾದ್ ಗ್ರಾಮದ ರಸ್ತೆಯಲ್ಲಿರುವ ಖಾಲಿ ಜಾಗದಲ್ಲಿ ಶಡ್ ನಿರ್ಮಿಸಿಕೊಂಡು ಈ ಗ್ಯಾಂಗ್ ವಾಸವಿತ್ತು. ಹಗಲು ಹೊತ್ತಿನಲ್ಲಿ ಜ್ಯೋತಿಷ್ಯ ಹೇಳುತ್ತ ಸಾರ್ವಜನಿಕರು ಕೊಟ್ಟಂತಹ ಹಣ ದವಸ ಧಾನ್ಯ ಪಡೆದುಕೊಳ್ಳುತ್ತಿದ್ದರು. ರಾತ್ರಿ ಹೊತ್ತು ದರೋಡೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.