ದಾವಣಗೆರೆ: ಹಾವೇರಿ ಜಿಲ್ಲೆಯ ಬ್ಯಾಡಗಿ, ಹಂಸಭಾವಿ, ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಮನೆ ಹಾಗೂ ಬೈಕ್ ಕಳವು ಸಂಬಂಧಿಸಿದಂತೆ ಐವರನ್ನು ಬಂಧಿಸಿರುವ ಬಡಾವಣೆ ಠಾಣೆ ಪೊಲೀಸರು, ಆರೋಪಿಗಳಿಂದ ಚಿನ್ನ-ಬೆಳ್ಳಿ ಆಭರಣ, 2 ಬೈಕ್ ವಶಪಡಿಸಿಕೊಂಡಿದ್ದಾರೆ.
ಪ್ರಕರಣಗಳಿಗೆ ಸಂಬಂಧಿಸಿದಂತೆ ಮಲೇಬೆನ್ನೂರು ವಾಸಿ ನಾಗರಾಜ್ ಅಲಿಯಾಸ್ ಬಳ್ಳಾರಿ ನಾಗ (25), ಬ್ಯಾಡಗಿ ತಾಲೂಕಿನ ಕದರಮಂಡಲಗಿಯ ಸಿದ್ದು ಉಜ್ಜಿನಿ (21), ಶಿವರಾಜನಾಯ್ಕರ್ ಹಾಗೂ ಕದ್ದ ವಸ್ತುಗಳನ್ನು ಖರೀದಿಸಿದ್ದ ರಾಣಿಬೆನ್ನೂರಿನ ಚಂದ್ರಶೇಖರ್ ಅಂಬಲಿ, ಹಾಲಪ್ಪ ಶಿವಪ್ಪ ಮಾಳಗಿ ಬಂಧಿತ ಆರೋಪಿಗಳು.
ಬಂಧಿತರಿಂದ ಒಟ್ಟು 5,13, 580 ರೂಪಾಯಿ ಮೌಲ್ಯದ 189 ಗ್ರಾಂ ಚಿನ್ನ, 682 ಗ್ರಾಂ ತೂಕದ ಬೆಳ್ಳಿ ಆಭರಣ, 2 ಬೈಕ್ ವಶಪಡಿಸಿಕೊಳ್ಳಲಾಗಿದೆ. ಇವರ ಬಂಧನದಿಂದಾಗಿ ಹಂಸಭಾವಿ ಠಾಣೆಯಲ್ಲಿ ವ್ಯಾಪ್ತಿಯಲ್ಲಿ 4, ಬ್ಯಾಡಗಿ ಠಾಣಾ ವ್ಯಾಪ್ತಿಯಲ್ಲಿ 2 ಮನೆಗಳ್ಳತನ ಹಾಗೂ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಬೈಕ್ ಕಳ್ಳತನ ಪ್ರಕರಣ ಪತ್ತೆಯಾಗಿವೆ.
ಆರೋಪಿ ನಾಗರಾಜ್ ಅಲಿಯಾಸ್ ಬಳ್ಳಾರಿ ನಾಗ ಈ ಹಿಂದೆ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬಡಾವಣೆ ಪೊಲೀಸ್ ಠಾಣೆಯ ಪಿಎಸ್ ಐಗಳಾದ ಡಿ.ಎಂ. ಭವ್ಯ, ವೈ.ಎಸ್. ಶಿಲ್ಪ ಸಿಬ್ಬಂದಿ ದಾವಣಗೆರೆಯ ರಿಂಗ್ ರಸ್ತೆಯಲ್ಲಿ ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ನಂಬರ್ ಪ್ಲೇಟ್ ಇಲ್ಲದ ಬಂದ ಇಬ್ಬರು ಬೈಕ್ ಸವಾರರನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತು.
ಇಬ್ಬರನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಮತ್ತೂಬ್ಬ ಕಳ್ಳ ಶಿವರಾಜನಾಯ್ಕರ್ ಹಾಗೂ ಕದ್ದ ವಸ್ತುಗಳನ್ನು ಖರೀದಿಸಿದ್ದ ರಾಣಿಬೆನ್ನೂರಿನ ಚಂದ್ರಶೇಖರ್ ಅಂಬಲಿ, ಹಾಲಪ್ಪ ಶಿವಪ್ಪ ಮಾಳಗಿ ಬಗ್ಗೆ ಮಾಹಿತಿ ನೀಡಿದ್ದರು. ಅದರ ಆಧಾರದಂತೆ ಎಲ್ಲರನ್ನೂ ಬಂಧಿಸಲಾಗಿದೆ ಎಂದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಯಶೋಧಾ ಎಸ್. ವಂಟಿಗೋಡಿ, ನಗರ ಪೊಲೀಸ್ ಉಪಾಧೀಕ್ಷಕ ಕೆ. ಅಶೋಕ್‌ಕುಮಾರ್, ವೃತ್ತ ನಿರೀಕ್ಷಕ ಸಂಗನಾಥ್, ಪಿಎಸ್‌ಐಗಳಾದ ಡಿ.ಎಂ. ಭವ್ಯ, ವೈ.ಎಸ್. ಶಿಲ್ಪ ಸುದ್ದಿಗೋಷ್ಠಿಯಲ್ಲಿದ್ದರು.