ನವದೆಹಲಿ:ರಾಜಸ್ಥಾನದ ರಾಜ್ ಸಮಂಡ್ ಜಿಲ್ಲೆಯ ಹೊಲದ ಸಮೀಪ ಪತ್ತೆಯಾದ 45 ವರ್ಷದ ಮಹಿಳೆಯ ಶವದ ಪಾದವನ್ನು ಕತ್ತರಿಸಿ ಬೆಳ್ಳಿಯ ಕಾಲುಗೆಜ್ಜೆಯನ್ನು ಕದ್ದೊಯ್ದಿರುವ ಘಟನೆ ಚಾರ್ ರ್ಭುಜ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ:ಹರಪನಹಳ್ಳಿ: ರಸ್ತೆ ಬದಿ ಬಿಸಾಕಿ ಹೋಗಿದ್ದ ನವಜಾತ ಶಿಶುವಿನ ರಕ್ಷಣೆ
ಘಟನೆ ವೇಳೆ ದರೋಡೆಕೋರರು ಮಹಿಳೆಯ ಪಾದವನ್ನು ಕತ್ತರಿಸಿ ಬೆಳ್ಳಿಗೆಜ್ಜೆಯನ್ನು ತೆಗೆದುಕೊಂಡು ಹೋಗಿದ್ದು, ನಂತರ ಆರೋಪಿಗಳು ಆಕೆಯ ಕುತ್ತಿಗೆಯನ್ನು ಕಡಿದು ಪರಾರಿಯಾಗಿದ್ದರು. ಮೃತ ಮಹಿಳೆಯನ್ನು ಕಂಕುಬಾಯಿ ಎಂದು ಗುರುತಿಸಲಾಗಿದೆ.
ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಗಂಡನಿಗೆ ತಿಂಡಿಯನ್ನು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಸಂಜೆ ಕಂಕುಬಾಯಿ ಗಂಡ ಮನೆಗೆ ಬಂದು, ಮಕ್ಕಳ ಬಳಿ ತಾಯಿಯ ಬಗ್ಗೆ ವಿಚಾರಿಸಿದಾಗ, ಬೆಳಗ್ಗೆಯೇ ಹೊಲಕ್ಕೆ ತಿಂಡಿ ತೆಗೆದುಕೊಂಡು ಹೋಗಿರುವುದಾಗಿ ತಿಳಿಸಿದ್ದರು.
ವಿಷಯ ತಿಳಿದ ನಂತರ ಕಂಕುಬಾಯಿ ಸಂಬಂಧಿಗಳು, ಸ್ಥಳೀಯರು ಶೋಧ ಕಾರ್ಯ ನಡೆಸಿದ್ದರು. ಆದರೂ ಆಕೆಯ ಸುಳಿವು ಸಿಕ್ಕಿರಲಿಲ್ಲವಾಗಿತ್ತು. ಚಾರ್ ರ್ಭುಜ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ರಾಜ್ ಸಮಂಡ್ ಪೊಲೀಸ್ ವರಿಷ್ಠಾಧಿಕಾರಿ ಶಿವ್ ಲಾಲ್ ತಿಳಿಸಿದ್ದಾರೆ. ಪಾದವನ್ನು ಕತ್ತರಿಸಿ ಬೆಳ್ಳಿ ಗೆಜ್ಜೆ ದರೋಡೆ ಮಾಡಿದ ಮೊದಲ ಪ್ರಕರಣ ಇದಲ್ಲ, ಈಗಾಗಲೇ ಎರಡು ಪ್ರಕರಣ ನಡೆದಿರುವುದಾಗಿ ವರದಿ ತಿಳಿಸಿದೆ.